»   » ‘ಕಾಪಾಡಿ ಕಾಪಾಡಿ’ ಎಂದಳಾ ರಂಭೆ

‘ಕಾಪಾಡಿ ಕಾಪಾಡಿ’ ಎಂದಳಾ ರಂಭೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ನನಗೆ ಜೀವಭಯವಿದೆ ಎಂದು ‘ಪಾಪ ಪಾಂಡು’ ಚಿದಾನಂದ್‌ ಬೆಂಗಳೂರಿನಲ್ಲಿ ಅಯ್ಯಯ್ಯೋ ಅನ್ನುತ್ತಿದ್ದರೆ, ಪಕ್ಕದ ಕೊಯಮತ್ತೂರಲ್ಲಿ ‘ಕಾಪಾಡಿ ಕಾಪಾಡಿ’ ಎಂದು ದಕ್ಷಿಣಭಾರತದ ಖ್ಯಾತ ನಟೀಮಣಿ ರಂಭಾ ಪೊಲೀಸರ ಮೊರೆ ಹೊಕ್ಕಿದ್ದಾಳೆ.

ಕೊಯಮತ್ತೂರಿನಲ್ಲಿನ ಸ್ವರ್ಣಾಭರಣಗಳ ಅಂಗಡಿಯಾಂದರ ಮಾಲಿಕರು ಥೇಟ್‌ ಸಿನಿಮಾ ಶೈಲಿಯಲ್ಲಿ ರಂಭಾಗೆ ಪ್ರಾಣಭಯ ಒಡ್ಡಿದ್ದಾರಂತೆ. ಸೋಮವಾರ (ಡಿ.22) ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾ ಅವರ ಮಾತಲ್ಲೂ ಆತಂಕದ ಛಾಯೆ ಒಡೆದು ಕಾಣುತ್ತಿತ್ತು .

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಂಭಾ ಕೊಯಮತ್ತೂರಿಗೆ ಬಂದಿದ್ದರಂತೆ. ರಂಭಾ ಅವರ ಉಪಸ್ಥಿತಿಯನ್ನು ಬಳಸಿಕೊಳ್ಳಲು ನಿರ್ಧರಿಸಿದ ಜ್ಯುವೆಲ್ಲರಿ ಅಂಗಡಿ ಮಾಲಿಕರು, ತಮ್ಮ ಅಂಗಡಿಯ 12ನೇ ವಾರ್ಷಿಕೋತ್ಸವಕ್ಕೆ ರಂಭಾ ಅವರನ್ನು ಆಹ್ವಾನಿಸಿದ್ದಾರೆ. ರಂಭಾ ಖುಷಿಯಿಂದಲೇ ವಾರ್ಷಿಕೋತ್ಸವಕ್ಕೆ (ಡಿ.21ರ ಭಾನುವಾರ ರಾತ್ರಿ) ಹೋಗಿದ್ದಾರೆ. ತಗಾದೆ ನಡೆದದ್ದು ಆನಂತರ.

‘ಕಾರ್ಯಕ್ರಮದಲ್ಲಿ ಕುಣಿಯಿರಿ, ನೆರೆದ ರಸಿಕರನ್ನು ರಂಜಿಸಿರಿ’ ಎಂದು ಅಂಗಡಿ ಮಾಲಿಕರು ರಂಭಾಗೆ ತಗಲಿಕೊಂಡಿದ್ದಾರೆ. ‘ಒಲ್ಲೆ ಅಂದರೆ, ಕುಣಿಯಲೊಲ್ಲೆ’ ಎಂದು ರಂಭಾ ಪಟ್ಟುಹಿಡಿದಿದ್ದಾರೆ. ಜೀವ ಬೆದರಿಕೆಯ ಮಾತು ಬಂದದ್ದೇ ಆಗ. ‘ಕುಣಿಯಲೊಪ್ಪದ ತಮಗೆ ಅಂಗಡಿ ಮಾಲಿಕರು ಜೀವಭಯ ಒಡ್ಡಿದರು’ ಎಂದು ರಂಭಾ ಹೇಳಿಕೊಂಡರು.

ಸಮಾರಂಭದಲ್ಲಿ ಹಾಜರಿದ್ದ ಚಿತ್ರ ನಿರ್ದೇಶಕ ಆರ್‌.ವಿ.ಉದಯ್‌ಕುಮಾರ್‌ ಕೂಡ ಕುಣಿಯುವಂತೆ ತಮ್ಮನ್ನು ಒತ್ತಾಯಿಸಿದರು ಎಂದು ರಂಭಾ ದೂರಿನಲ್ಲಿ ಆಪಾದಿಸಿದ್ದಾರೆ. ರಂಭಾ ನೀಡಿರುವ ದೂರೀಗ ಪೊಲೀಸರ ಟೇಬಲ್ಲು ಮೇಲಿದೆ. ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೋ ಗೊತ್ತಿಲ್ಲ . ರಂಭಾ ಮಾತ್ರ ರಾಂಗಾಗಿದ್ದಾರೆ.

ಇನ್ನೊಮ್ಮೆ, ಜ್ಯುವೆಲ್ಲರಿ ಅಂಗಡಿ ಮಾಲಿಕರಿಂದ ಬೆದರಿಕೆ ಬಂದರೆ, ನೇರವಾಗಿ ಜಯಲಲಿತಾ ಬಳಿ ದೂರು ಒಯ್ಯುತ್ತೇನೆ ಎಂದರು ರಂಭಾ. ‘ಜಯಲಲಿತಾ ಕೂಡಾ ಹೆಣ್ಣು . ಆಕೆಗೆ ನನ್ನ ಕಷ್ಟ ಅರ್ಥವಾಗುತ್ತದೆ’ ಎನ್ನುವುದು ರಂಭಾ ಲೆಕ್ಕಾಚಾರ.

ಯಾಕೋ ಈಚೆಗೆ ಅಂಜಿಸುವವರು ಹೆಚ್ಚುತ್ತಿದ್ದಾರೆ; ಕಾಲ ಕುಲಗೆಟ್ಟು ಹೋಯಿತು? ಶಿವಶಿವಾ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada