ಅಮೂಲ್ಯ ಮುದ್ದಿನ ತಂಗಿಯಾಗಿ 'ರುಕ್ಕು'
ಕನ್ನಡ ಬೆಳ್ಳಿಪರದೆ ಮೇಲೆ 'ಚೆಲುವಿನ ಚಿತ್ತಾರ' ಬರೆದ ಹುಡುಗಿ ಅಮೂಲ್ಯ ಇದೀಗ 'ರುಕ್ಕು' ಎಂಬ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಮಧ್ಯೆ ರತ್ನಜ ನಿರ್ದೇಶನದಲ್ಲಿ ಮೂಡಿಬಂದ ಅಮೂಲ್ಯ ಅಭಿನಯದ 'ಪ್ರೇಮಿಸಂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಈ ಹಿಂದೆ ಎಸ್ ನಾರಾಯಣ್ ನಿರ್ದೇಶನದ ಪಂಕಜ್ ಮತ್ತು ಅಮೂಲ್ಯ ಮುಖ್ಯಭೂಮಿಕೆಯ 'ಚೈತ್ರದ ಚಂದ್ರಮ' ಬಾಕ್ಸಾಫೀಸಲ್ಲಿ ಮುಗ್ಗರಿಸಿತ್ತು. ಆ ಬಳಿಕ 'ನೆನಪಿರಲಿ' ಖ್ಯಾತಿಯ ರತ್ನಜ ನಿರ್ದೇಶನದ 'ಪ್ರೇಮಿಸಂ' ಚಿತ್ರಕ್ಕೆ ಅಮೂಲ್ಯ ಸಹಿಹಾಕಿದ್ದರು.
ತಾನೊಬ್ಬ 'ಹಾಲಿಡೇ ಹೀರೋಯಿನ್' ಎನ್ನುವ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಅಮೂಲ್ಯ ಇದೀಗ ನಿರ್ಮಾಪಕ ಎಸ್ ಚಂದ್ರು ಅವರಿಗೆ ಕಾಲ್ ಶೀಟ್ ನೀಡಿದ್ದಾರೆ. ಐದು ಮಂದಿ ಅಣ್ಣಂದಿರ ಮುದ್ದಿನ ತಂಗಿಯಾಗಿ 'ರುಕ್ಕು' ಚಿತ್ರದಲ್ಲಿ ಅಮೂಲ್ಯ ಕಾಣಿಸಲಿದ್ದಾರೆ.
ರುಕ್ಕು ಚಿತ್ರವನ್ನು ಸುಶೀಲ್ ಮೊಕಾಶಿ ನಿರ್ದೇಶಿಸುತ್ತಿದ್ದು ಕನ್ನಡ ಚಿತ್ರರಂಗದ ಖಳನಟ ಮುನಿ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಳುಮುಂಜಿ ಪಾತ್ರಗಳಿಗೆ ಹೆಸರಾಗಿರುವ ನಟಿ ಶ್ರುತಿ ಈ ಚಿತ್ರದಲ್ಲಿ ಅಭಿನಯಿಸಲಿರುವುದಾಗಿ 'ರುಕ್ಕು' ಚಿತ್ರತಂಡ ತಿಳಿಸಿದೆ.


Click it and Unblock the Notifications











