ಪೆಕರ ಆದ ಲೂಸ್‌ಮಾದ ಅಲಿಯಾಸ್ ಯೋಗೀಶ್
ಒಟ್ಟಿನಲ್ಲಿ ಈ ಸಿನಿಮಾ ಶೀರ್ಷಿಕೆಗಳನ್ನು ಹೀರೋ ಮುಖ ನೋಡಿಯೇ ಇಡುತ್ತಾರೋ ಏನೋ? ಮ್ಯಾಜಿಕ್ ಸ್ಟಾರ್ ಯೋಗೀಶ್ ಅವರನ್ನು ಲೂಸ್‌ಮಾದ ಎಂದು ಕರೆದರೇನೆ ಜನಕ್ಕೆ ಥಟ್ಟನೆ ಹೊಳೆಯೋದು. ಇಲ್ಲದಿದ್ದರೆ ಯೋಗೇಶ್ವರ್ ಎಂದು ತಪ್ಪಾಗಿ ಅರ್ಥೈಸುವ ಸಾಧ್ಯತೆಗಳೇ ಹೆಚ್ಚು.
ಈಗ ನೇರವಾಗಿ ವಿಷಯಕ್ಕೆ ಬರುವುದಾದರೆ, ಲೂಸ್‌ಮಾದ ಈಗ ಪೆಕರ ಆಗಲು ಹೊರಟಿದ್ದಾನೆ. ಇದೇನಾಪ್ಪಾ ಇದು ಎಂದು ಅಚ್ಚರಿಯಾಗಬೇಡಿ. ಯೋಗೀಶ್ ಹೊಸ ಚಿತ್ರದ ಹೆಸರು 'ಪೆಕರ'. ಈ ಚಿತ್ರದ ನಿರ್ದೇಶಕ ನಾಗೇಂದ್ರ ಅರಸ್. ಯೋಗೀಶ್ ಶೀರ್ಷಿಕೆಗೆ ಸರಿಯಾಗಿ ಮ್ಯಾಚ್ ಆಗುತ್ತಾರೆ. ಹಾಗಾಗಿ ಪೆಕರ ಶೀರ್ಷಿಕೆ ಇಟ್ಟಿದ್ದೇವೆ ಎನ್ನುತ್ತಾರೆ.
ಚಿತ್ರ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಅರಸ್ ಹೊತ್ತಿರುವುದು ವಿಶೇಷ. ಈ ಮೊದಲು ಚಿತ್ರಕ್ಕೆ ಎಡಬಿಡಂಗಿ ಎಂದು ಶೀರ್ಷಿಕೆ ಇಡಲು ನಿರ್ಧರಿಸಿದ್ದರಂತೆ. ಆದರೆ 'ಪೆಕರ' ಶೀರ್ಷಿಕೆಯೇ ಸೂಕ್ತವಾಗಿರುವ ಕಾರಣ ಅದನ್ನು ಅಂತಿಮಗೊಳಿಸಲಾಯಿತಂತೆ. ಡೈನಮಿಕ್ ಹೀರೋ ದೇವರಾಜ್, ರಂಗಾಯಣ ರಘು, ಗಿರಿ ದಿನೇಶ್ ತಾರಾಬಳಗದಲ್ಲಿದ್ದಾರೆ.
ಚಿತ್ರದ ನಾಯಕಿಗಾಗಿ ಹುಡುಕಾಟ ಪ್ರಾರಂಭವಾಗಿದ್ದು 'ಮನಸಾಲಜಿ' ಬೆಡಗಿ ಅಮೂಲ್ಯರನ್ನು ಸಂಪರ್ಕಿಸಲಾಗಿದೆ. ಆದರೆ ಅಮೂಲ್ಯ ಇನ್ನೂ 'ಪೆಕರ'ನಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಗ್ರಾಮೀಣ ಹಿನ್ನೆಲೆಯ ಕಥೆಯಾಗಿದ್ದು ನಗರದ ಟಚ್ ಕೂಡ ನೀಡಲಾಗಿದೆಯಂತೆ. ಅನೂಪ್ ಸೀಳಿನ್ ಸಂಗೀತ, ನವೀನ್ ಸುವರ್ಣ ಛಾಯಾಗ್ರಹಣ ಚಿತ್ರಕ್ಕಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











