ಝಂಡು ಬಾಮ್‌ಗೆ ಪ್ರಚಾರಕರ್ತೆ ಮಲೈಕಾ ಆರೋರಾ
ತೀವ್ರ ತಲೆನೋವನ್ನು ಕ್ಷಣದಲ್ಲಿ ಪರಿಹರಿಸುವ 'ಝಂಡು ಬಾಮ್' ಮುಲಾಮು 'ದಬಾಂಗ್' ಚಿತ್ರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು! ನಟ ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ 'ದಬಾಂಗ್' ಚಿತ್ರದಲ್ಲಿ ತಮ್ಮ ಅನುಮತಿ ಇಲ್ಲದೆ "ಝಂಡು ಬಾಮ್" ಎಂಬ ಪದ ಬಳಸಿರುವ ಬಗ್ಗೆ ಕಂಪನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇನ್ನೇನು ಕೋರ್ಟ್ ಬಾಗಿಲು ತಟ್ಟುವುದರಲ್ಲಿತ್ತು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಚಿತ್ರದ ನಿರ್ಮಾಪಕ ಅರ್ಬಾಜ್ ಖಾನ್ ತಲೆನೋವನ್ನು ಪರಿಹರಿಸಿದ್ದಾರೆ.
'ದಬಾಂಗ್' ಚಿತ್ರದ ಹಾಡೊಂದರಲ್ಲಿ 'ಝಂಡು ಬಾಮ್' ಪದವನ್ನು ಬಳಸಲಾಗಿದೆಯಂತೆ. ಈ ಹಾಡಿನಲ್ಲಿ ಮಲೈಕಾ ಆರೋರಾ ಕಾಣಿಸಿಕೊಂಡಿದ್ದರು. ತಮ್ಮ ಕಂಪನಿ ಉತ್ಪನ್ನದ ಹೆಸರನ್ನು ಬಳಸಿರುವುದರ ಬಗ್ಗೆ ಝಂಡು ಬಾಮ್ ಕ್ಯಾತೆ ತೆಗೆದಿತ್ತು. "ಕೂಲ್ ಕೂಲ್ ಎಲ್ಲರ ಸಮಸ್ಯೆ ಪರಿಹರಿಸುವ ನೀವೇ ಇಷ್ಟು ಸೀರಿಯಸಾದರೆ ಹೆಂಗೆ" ಎಂದು ಅರ್ಬಾನ್ ಖಾನ್ ಸಮಸ್ಯೆಯನ್ನು ತಣ್ಣಗಾಗಿಸಿದ್ದಾರೆ.
ವಿವಾದಕ್ಕೆ ಕಾರಣವಾಗಿರುವ ಹಾಡಿನ ಜೊತೆಗೆ ಝಂಡು ಬಾಮ್ ಪ್ರಚಾರ ಮಾಡಿದರೆ ಹೇಗೆ? ಝಂಡು ಬಾಮ್ ಜೊತೆಗೆ ಚಿತ್ರಕ್ಕೂ ಪ್ರಚಾರ ಸಿಕ್ಕಂತಾಗುತ್ತದೆ. ಇಬ್ಬರಿಗೂ ಲಾಭ. ಹೇಗಿದೆ ಒಂದೇ ಕಲ್ಲಿಗೆ ಎರಡು ಹಕ್ಕಿ ಎಂದು ಕಂಪನಿಗೆ ಚೆನ್ನಾಗಿ ಝಂಡು ಬಾಮ್ ಹಚ್ಚಿದ್ದಾರೆ. ಸಿಕ್ಕಾಪಟ್ಟೆ ರಾಂಗ್ ಆಗಿದ್ದ ಕಂಪನಿ ತಲೆ ಮೇಲಿನ ದೊಡ್ಡ ಭಾರ ಇಳಿದಂತಾಗಿ ಕೂಡಲೆ ಓಕೆ ಎಂದಿದೆ. ಮಲೈಕಾ ಆರೋರಾರನ್ನು ಝಂಡು ಬಾಮ್ ಪ್ರಚಾರಕರ್ತೆಯನ್ನಾಗಿ ಆಯ್ಕೆ ಮಾಡಿಕೊಂಡಿದೆ.
ವಿವಾದದ ಬಗ್ಗೆ ಅರ್ಬಾಜ್ ಖಾನ್ ಪ್ರತಿಕ್ರಿಯಿಸುತ್ತಾ, ಝಂಡು ಬಾಮ್ ಕಂಪನಿಯೊಂದಿಗೆ ಮಾತುಕತೆ ನಡೆಸಿ ಒಮ್ಮತ ಅಭಿಪ್ರಾಯಕ್ಕೆ ಬಂದಿದ್ದೇವೆ. ಚಿತ್ರದ ಹಾಡು ಬಹಳಷ್ಟು ಜನಪ್ರಿಯವಾಗಿದ್ದು, 'ಝಂಡು ಬಾಮ್' ಮತ್ತು 'ದಬಾಂಗ್' ಜಾಹೀರಾತೊಂದನ್ನು ಜಂಟಿಯಾಗಿ ತಯಾರಿಸುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಇಬ್ಬರ ಜಗಳಲ್ಲಿ ಮಲ್ಲಿಕಾ ಆರೋರಾಗೆ ಲಾಭವಾಗಿದೆ.


Click it and Unblock the Notifications











