ಮಲಯಾಳಂ ಚಿತ್ರದಲ್ಲಿ ಪಾಕಿಸ್ತಾನಿ ಕ್ರಿಕೆಟಿಗ!
ಪಾಕಿಸ್ತಾನದ ಉದಯೋನ್ಮುಖ ಬೌಲರ್ ಮೊಹಮ್ಮದ್ ಆಸಿಫ್ ಮಲಯಾಳಂ ಚಿತ್ರವೊಂದರಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ತಂಡದ ಆಟಗಾರರು ಮತ್ತು ಆಡಳಿತ ಮಂಡಳಿ ಜೊತೆ ಕಿತ್ತಾಡುತ್ತಾ ಸದಾ ಒಂದಲ್ಲೊಂದು ಹುಡುಗಾಟದಲ್ಲಿ ತನ್ನನ್ನು ತೊಡಗಿಕೊಂಡು ಸುದ್ದಿ ಮಾಡುತ್ತಲೆ ಇರುವ ಈತ ಮಾದಕ ವ್ಯಸನಿ ಕೂಡ.
ಹೆಸರಾಂತ ಸಾಹಿತಿ ಕೆ ದಾಮೋದರನ್ ನಂಬೂದಿರಿ ಮೊಟ್ಟ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳಲಿರುವ ಚಿತ್ರದಲ್ಲಿ ಆಸಿಫ್ ನಟಿಸಲಿದ್ದಾರೆ. ಚಿತ್ರದ ಹೆಸರು 'ಮಜ್ಹವಿಲ್ಲಿನತ್ತಮರೆ' ಎಂದು. ಕಾಮನಬಿಲ್ಲಿನ ಅಂಚಿನ ತನಕ ಎಂಬುದು ಅದರ ಅರ್ಥ. ಸೆಪ್ಟಂಬರ್ ಕೊನೆಯ ವಾರದಿಂದ ಉತ್ತರ ಕೇರಳದಲ್ಲಿ ಶೂಟಿಂಗ್ ಆರಂಭವಾಗಲಿದೆ. ಪ್ರಸ್ತುತ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಪ್ರವಾಸದಲ್ಲಿರುವ ಆಸಿಫ್ ಸೆಪ್ಟಂಬರ್ ಕೊನೇ ವಾರದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಲು ಒಪ್ಪಿ ಕೊಂಡಿದ್ದು ಕಣ್ಣೂರಿಗೆ ಆಗಮಿಸಲಿದ್ದಾರೆಂದು ನಂಬೂದಿರಿ ಹೇಳಿದ್ದಾರೆ.
ತನ್ನ ವೃತ್ತಿ ಜೀವನದಲ್ಲಿ ಆಸಿಫ್ ಹೇಗೆ ಯಶಸ್ಸು ಗಳಿಸುತ್ತಾರೆನ್ನುವುದು ಚಿತ್ರದ ಕಥೆ. ಚಿತ್ರದಲ್ಲಿ ಐದು ಹಾಡು ಮತ್ತು ಒಂದು ಗಜಲ್ ಇದೆ.ಯೇಸುದಾಸ್, ಶ್ರೇಯಾ ಘೋಶಾಲ್, ಶಂಕರ್ ಮಹಾದೇವನ್, ಚಿತ್ರಾ ಮುಂತಾದವರು ಚಿತ್ರದಲ್ಲಿ ಹಾಡಲಿದ್ದಾರೆ. ಕಣ್ಣೂರು ಮೂಲದ ಸದ್ಯಕ್ಕೆ ಶಾರ್ಜಾದಲ್ಲಿರುವ ಮುಕಂದನ್ ಎನ್ನುವ ಉದ್ಯಮಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.


Click it and Unblock the Notifications











