»   » ನವದೆಹಲಿಯಲ್ಲಿ ಫಣಿಯಮ್ಮ, ಮುಸ್ಸಂಜೆ ಮಾತು

ನವದೆಹಲಿಯಲ್ಲಿ ಫಣಿಯಮ್ಮ, ಮುಸ್ಸಂಜೆ ಮಾತು

Subscribe to Filmibeat Kannada

ಕಳೆದ ವರ್ಷ ನಿಧನರಾದ ಖ್ಯಾತ ರಂಗಕರ್ಮಿ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ನಿರ್ದೇಶಕಿ ಪ್ರೇಮಾ ಕಾರಂತರ ಸ್ಮರಣೆಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರ ಹಾಗೂ ಇಲ್ಲಿನ ಕರ್ನಾಟಕ ಭವನದ ವತಿಯಿಂದ "ಫಣಿಯಮ್ಮ" ಚಲನಚಿತ್ರವನ್ನು ಶನಿವಾರ (ನ.22) ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು.

2008ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 'ಫಣಿಯಮ್ಮ' ಮತ್ತು 'ಮುಸ್ಸಂಜೆ ಮಾತು' ಚಿತ್ರಗಳನ್ನು ರಾಜಧಾನಿಯಲ್ಲಿ ವಾಸಿಸುವ ಕನ್ನಡಿಗರಿಗಾಗಿ ಪ್ರದರ್ಶನ ಮಾಡಲಾಯಿತು.ಈ ಸಂದರ್ಭದಲ್ಲಿ ಔಪಚಾರಿಕವಾಗಿ ಮಾತನಾಡಿದ ಕರ್ನಾಟಕ ಭವನದ ಉಪನಿವಾಸಿ ಆಯುಕ್ತ ಜಿ.ಆರ್.ಮಂಜೇಶ್ ಅವರು, "ಬಿ.ವಿ. ಕಾರಂತ ಹಾಗೂ ಪ್ರೇಮಾ ಕಾರಂತರ ಇಡೀ ಕುಟುಂಬವು ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದ ಕುಟುಂಬವಾಗಿತ್ತು; ಅವರು ಕನ್ನಡದ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ" ಎಂದರು.

"ಪ್ರೇಮಾ ಕಾರಂತರು ನಕ್ಕಳಾ ರಾಜಕುಮಾರಿ, ಬಂದ್ ಝರೋಕೆ, ಫಣಿಯಮ್ಮ ಅಂಥ ಪ್ರಮುಖ ಚಿತ್ರಗಳನ್ನು, ಇಸ್ಪೀಟ್ ರಾಜಾ, ಪಂಜರ ಶಾಲೆ ಅಂಥ ಮಹತ್ವದ ಮಕ್ಕಳ ನಾಟಕಗಳನ್ನು ನಿರ್ದೇಶಿಸಿ, ಹೊಸ ಅಲೆಯನ್ನೇ ಉಂಟು ಮಾಡಿದವರು. ಕನ್ನಡ ಚಿತ್ರರಂಗಕ್ಕೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ನಾನು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕರ್ತವ್ಯದ ಮೇಲಿದ್ದೆ. ಆ ಸಂದರ್ಭದಲ್ಲಿ ಫಣಿಯಮ್ಮ, ಕೋಗಿಲೆ, ಸಂಸ್ಕಾರ ಸೇರಿದಂತೆ ರಾಷ್ಟ್ರ ಪ್ರಶಸ್ತಿ ವಿಜೇತ ಏಳು ಕನ್ನಡ ಚಿತ್ರಗಳ ಚಿತ್ರೋತ್ಸವ ಮಾಡಿದ್ದೆವು. ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಫಣಿಯಮ್ಮ ಚಿತ್ರವನ್ನು ಈಗ ಮತ್ತೆ ಇಲ್ಲಿ ಸಾದರ ಪಡಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ" ಎಂದರು.

ಎಲ್ಲರ ಮನಗೆದ್ದ ಮುಸ್ಸಂಜೆ ಮಾತು
ಫಣಿಯಮ್ಮ ಚಿತ್ರ ಪ್ರದರ್ಶನದ ನಂತರ ಸಂಜೆ 6 ಗಂಟೆಗೆ ಸುದೀಪ್ ಹಾಗೂ ಮೋಹಕ ತಾರೆ ರಮ್ಯಾ ನಟಿಸಿದ "ಮುಸ್ಸಂಜೆ ಮಾತು" ಚಿತ್ರದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ರೇಡಿಯೊ ಜಾಕಿಯೊಬ್ಬ ಹುಡುಗಿಯ ಪ್ರೇಮ ಪಾಶಕ್ಕೊಳಗಾಗಿ, ಆಕೆಯಲ್ಲಿ ಅನುರಕ್ತನಾಗುವ ವಿಭಿನ್ನ ಕಥಾ ಹಂದರದ ಈ ಚಿತ್ರ ದೆಹಲಿ ಕನ್ನಡಿಗರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು. ಈ ಎರಡು ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದ ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದ ಪ್ರಯತ್ನವನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದರು.

ಪ್ರತಿ ತಿಂಗಳ ಎರಡನೇ ಶನಿವಾರದಂದು ಕನ್ನಡ ಚಲನಚಿತ್ರ ಪ್ರದರ್ಶನ ಮಾಡುವಂತೆ ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ದೆಹಲಿ ಕನ್ನಡಿಗರು ಒತ್ತಾಯಿಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada