'ರಾಜ್ ದಿ ಶೋ ಮ್ಯಾನ್' ಬಿಡುಗಡೆ ಮತ್ತೆ ಮುಂದಕ್ಕೆ!
'ರಾಜ್ ದಿ ಶೋ ಮ್ಯಾನ್' ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಈ ಹಿಂದೆ ತಿಳಿಸಿದಂತೆ ರಾಜ್ ಚಿತ್ರ ಜುಲೈ 31ರಂದು ತೆರೆಕಾಣಬೇಕಿತ್ತು. ಈಗ ಬಿಡುಗಡೆ ದಿನಾಂಕವನ್ನು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ದಿನ ಅಂದರೆ ಆಗಸ್ಟ್ 14, 2009ರಂದು ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ.
ರಾಜ್ ಚಿತ್ರದ ನಿರ್ಮಾಪಕರಾದ ಸುರೇಶ್ ಗೌಡ ಮತ್ತು ಶ್ರೀನಿವಾಸ್ ಮೂರ್ತಿ ರಾಜ್ಯಾದ್ಯಂತ ಸುಮಾರು 126 ಚಿತ್ರಮಂದಿರಗಳನ್ನು ಜುಲೈ 31ರಂದು ರಾಜ್ ಬಿಡುಗಡೆಗಾಗಿ ತಡೆಹಿಡಿದಿದ್ದರು. ಈ ಕಾರಣಕ್ಕಾಗಿ ಹಲವಾರು ಕನ್ನಡ ಚಿತ್ರಗಳಿಗೆ ಬಿಡುಗಡೆ ಭಾಗ್ಯ ದೊರೆಯಲಿಲ್ಲ.
ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದು 'ರಾಜ್' ನಿರ್ಮಾಪಕರೊಂದಿಗೆ ಚರ್ಚಿಸಿದೆ. ಸಮಸ್ಯೆಯನ್ನು ಬಗೆಹರಿಸುವಂತೆ ಕೆಎಫ್ ಸಿಸಿ ನಿರ್ಮಾಪಕರಿಗೆ ಸೂಚಿಸಿತ್ತು. ಆ ಕಾರಣಕ್ಕಾಗಿ ನಿರ್ಮಾಪಕರು ತಮ್ಮ ರಾಜ್ ಚಿತ್ರವನ್ನು ಆಗಸ್ಟ್ 14 ರಂದು ಬಿಡುಗಡೆ ಮಾಡುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ರಾಜ್ ಬಿಡುಗಡೆ ಮುಂದೂಡಲ್ಪಟ್ಟ ಕಾರಣ ಜುಲೈ 31ರಂದು ಚಿತ್ರಮಂದಿರಗಳ ಸಮಸ್ಯೆ ಇರಲ್ಲ. ಜುಲೈ 31ರಂದು ಚಂದ್ರು ನಿರ್ದೇಶನದ 'ಪ್ರೇಮ್ ಕಹಾನಿ' ಮತ್ತು ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ 'ಮಳೆ ಬರಳಿ ಮಂಜು ಇರಲಿ' ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











