ರಾಜ್ ಬಯಸಿದ್ದೇನು? ನಿಧನಾ ನಂತರ ಆಗಿದ್ದೇನು?
ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ.ರಾಜ್ ಕುಮಾರ್ ನಿಧನಾ ನಂತರ ತಮ್ಮ ದೇಹವನ್ನು ಸುಡಲು ಬಯಸಿದ್ದರು ಎಂಬ ಸಂಗತಿಯನ್ನು ಅವರ ಮಗ ರಾಘವೇಂದ್ರ ರಾಜ್ ಕುಮಾರ್ ಬಹಿರಂಗಪಡಿಸಿದ್ದಾರೆ. 'ಜಾಕಿ' ಧ್ವನಿಸುರುಳಿ ಬಿಡುಗಡೆ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.
ದೇಹವನ್ನು ಮಣ್ಣು ಮಾಡುವುದರಿಂದ ಆ ಸ್ಥಳ ನಿರುಪಯುಕ್ತವಾಗುತ್ತದೆ. ಅದರ ಬದಲು ದೇಹವನ್ನು ಸುಟ್ಟು ಪಂಚಭೂತಗಳಲ್ಲಿ ಲೀನ ಮಾಡುವುದೇ ಸೂಕ್ತ ಎಂಬುದು ರಾಜ್ ಕುಮಾರ್ ಅವರ ಇಂಗಿತವಾಗಿತ್ತು. ಮಣ್ಣುಮಾಡುವುದರಿಂದ ಆ ಸ್ಥಳದಲ್ಲಿ ಉಳುಮೆ ಮಾಡಲು ಸಾಧ್ಯವಿಲ್ಲ. ರೈತರಾದ ನಾವು ಭೂಮಿಯನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂಬುದು ರಾಜ್ ವಾದವಾಗಿತ್ತು.
ರಾಜ್ ಬದುಕಿದ್ದಾಗ ಈ ಮಾತನ್ನು ತಮಗೂ ಹಾಗೂ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಅವರ ಬಳಿ ಹೇಳಿದ್ದಾಗಿ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದರು. ಲೀ ಮೆರಿಡಿಯನ್ ಹೋಟೆಲ್ ನಲ್ಲಿ ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ನಿರ್ಮಿಸುತ್ತಿರುವ 78ನೇ ಚಿತ್ರ 'ಜಾಕಿ' ಧ್ವನಿಸುರುಳಿ ಬಿಡುಗಡೆ ಸಂದರ್ಭದಲ್ಲಿ ರಾಘಣ್ಣ್ಣ ತಮ್ಮ ಹಳೆಯ ನೆನಪುಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಂಡರು.
ನೇತ್ರದಾನ ಮಾಡಿದ್ದಅಪ್ಪಾಜಿ ಅವರು ದೇಹದಾನದ ಮಹತ್ವವನ್ನು ಅರಿತಿದ್ದರು. ಆದರೆ ಎಲ್ಲವೂ ತರಾತುರಿಯಲ್ಲಿ ನಡೆದು ಹೋಗಿತ್ತು. ಅವರು ಬಯಸಿದಂತೆ ಅವರ ದೇಹವನ್ನು ಸುಡಲು ಸಾಧ್ಯವಾಗಲಿಲ್ಲ ಎಂದು ರಾಘವೇಂದ್ರ ರಾಜ್ ಕುಮಾರ್ ಅವರ ಮಾತುಗಳಲ್ಲಿ ವಿಷಾದ ವ್ಯಕ್ತವಾಯಿತು.
ಅಪ್ಪಾಜಿ ಅವರು ತೊಡುತ್ತಿದ್ದ ಬಟ್ಟೆಗಳು, ಅವರ ಕನ್ನಡಕ, ಅವರು ವಿಶ್ರಾಂತಿ ತೆಗೆದುಕೊಳ್ಳಲು ಬಳಸುತ್ತಿದ್ದ ಮಂಚ ಎಲ್ಲವನ್ನು ಸ್ಮಾರಕಕ್ಕೆ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ನೀಡಿದರು.
ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಅಪ್ಪಾಜಿ ಅವರಿಗೆ ಶಸ್ತ್ರಚಿಕಿತ್ಸೆಯಾಗಿತ್ತು. ಆಗ ಅವರು ಒಂದು ಮಾತು ಹೇಳಿದ್ದರು. ಸತ್ತ ಮೇಲೆ ಯಾರು ಏನು ತೆಗೆದುಕೊಂಡು ಹೋಗುವುದಿಲ್ಲ. ಆದರೆ ನಾನು ಮಾತ್ರ ಒಂದನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ನಕ್ಕಿದ್ದರು. ಅದು ಬೇರೇನು ಅಲ್ಲ ಅವರ ಮಂಡಿಚಿಪ್ಪಿಗೆ ಕೂರಿಸಿದ್ದ ಕ್ಯಾಪ್ ಎಂದು ರಾಘಣ್ಣ ತಿಳಿಸಿದರು.


Click it and Unblock the Notifications











