ಯೋಗರಾಜ್ ಭಟ್ಟರ ಸಂಭಾವನೆ ಸಿಕ್ಕಾಪಟ್ಟೆ ತುಟ್ಟಿ
ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಜತೆ ಪೈಪೋಟಿಗೆ ಬಿದ್ದವರಂತೇನೋ ಇತ್ತೀಚಿನ ದಿನಗಳಲ್ಲಿ ಹಾಡಿಗೆ ಸಾಹಿತ್ಯ ಬರೆಯುತ್ತಿದ್ದಾರೆ ಯೋಗರಾಜ್ ಭಟ್. ಭಟ್ಟರು ಹಾಡೊಂದಕ್ಕೆ ಎಷ್ಟು ಸಂಭಾವನೆ ಪಡೆಯಬಹುದು? ಈ ಪ್ರಶ್ನೆಗೆ ಉತ್ತರವನ್ನು ಅವರ ಆತ್ಮೀಯ ಸ್ನೇಹಿತ ಮತ್ತು 'ಜಾಕಿ' ಚಿತ್ರದ ನಿರ್ದೇಶಕ ಸೂರಿ ನೀಡಿದ್ದಾರೆ. ಭಟ್ಟರು ಈಗ ಎಪ್ಪತ್ತೈದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಜಾಕಿ ಬಳಿಕ ಅವರ ಸಂಭಾವನೆ ರು.1.50 ಲಕ್ಷಕ್ಕೆ ಮುಟ್ಟುವ ಸೂಚನೆ ಇದೆ ಎಂದಿದ್ದಾರೆ.
ಸೂರಿ ನಿರ್ದೇಶನದ 'ಜಂಗ್ಲಿ' ಚಿತ್ರದ ಸೂಪರ್ ಹಿಟ್ 'ಹಳೆ ಪಾತ್ರೇ.. ಹಳೆ ಕಬ್ಬಿಣ..'. ಹಾಡಿಗೆ ಸಾಹಿತ್ಯ ಬರೆದವರು ಯೋಗರಾಜ್ ಭಟ್ ಎನ್ನುವುದು ತಿಳಿದಿರುವ ವಿಷಯ. ಆ ಹಾಡಿಗೆ ಭಟ್ರು ರು. 40 ಸಾವಿರ ಸಂಭಾವನೆ ಪಡೆದಿದ್ದರು. ಯಾವಾಗ ಆ ಹಾಡು ಹಿಗ್ಗಾಮುಗ್ಗಾ ಹಿಟ್ ಆಯಿತೋ ನೋಡಿ, ಭಟ್ರು ತಮ್ಮ ಸಂಭಾವನೆಯನ್ನು ರು. 75 ಸಾವಿರಕ್ಕೆ ಏರಿಸಿದ್ದಾರೆ. ಭಟ್ರ ಲೇಖನಿಯಿಂದ ಬರುತ್ತಿರುವ ಸಾಹಿತ್ಯ ಕೇಳಿ ಬೆರಗಾಗಿದ್ದೇನೆ. ಚಿತ್ರದಲ್ಲಿ ಬರೆಯುವ ಸನ್ನಿವೇಶ ತಿಳಿಸಿದರೆ ಸಾಕು ಅವರು ಬರೆಯುವ ಸಾಹಿತ್ಯ ಸೂಪರ್ ಎಂದು ಸೂರಿ ಮೆಚ್ಚುಗೆಯ ಮಾತನಾಡಿದ್ದಾರೆ.
ಒಂದು ವೇಳೆ ನನ್ನ ಚಿತ್ರದಲ್ಲಿ ಕಮಲಹಾಸನ್ ನಟಿಸಿದರೂ ನನ್ನ ಶೈಲಿಯಂತೆಯೇ ನಾನು ಕೆಲಸ ಮಾಡುವುದು. ತಾಯಿ ಸಮಾನರಾಗಿರುವ 'ಜಾಕಿ' ಚಿತ್ರದ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಮೇಲೆ ನನಗೆ ಬಹಳ ಗೌರವವಿದೆ. 'ಇಂತಿ ನನ್ನ ಪ್ರೀತಿಯ' ಚಿತ್ರ ಸೋತ ನಂತರ ಬಹಳ ನಿರಾಶೆಗೊಂಡಿದ್ದೆ. ಆದರೆ 'ಜಂಗ್ಲಿ' ಚಿತ್ರವನ್ನು ಜನ ಸ್ವೀಕರಿಸಿದರು. 'ಜಾಕಿ' ಚಿತ್ರದಲ್ಲಿ ಸ್ವಲ್ಪ ಎಕ್ಸ್ ಪೆರಿಮೆಂಟ್ ಮಾಡಿದ್ದೇನೆ.
ರಾಜಕುಮಾರ್ ಸ್ವಂತ ಬ್ಯಾನರ್ ನಲ್ಲಿ ಚಿತ್ರ ನಿರ್ದೆಶಿಸಬೇಕೆನ್ನುವುದು ಪ್ರತಿ ನಿರ್ದೇಶಕರ ಮಹದಾಸೆ. ಬಹಳ ಪ್ರೀತಿ,ಶ್ರದ್ದೆಯಿಂದ ನನ್ನನ್ನು ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿದ್ದಾರೆ ಸೂರಿ.ಅಂದ ಹಾಗೆ 'ಜಾಕಿ' ಚಿತ್ರದ ಕ್ಯಾಸೆಟ್ ಮಾರುಕಟ್ಟೆಗೆ ತಂದಿದ್ದ ಆನಂದ್ ಆಡಿಯೋ ಸಂಸ್ಥೆ ಫುಲ್ ಖುಷ್. ಕ್ಯಾಸೆಟ್ ಗಳು ಬಿಸಿಬಿಸಿ ಕೇಕ್ ನಂತೆ ಮಾರಾಟವಾಗುತ್ತಿದೆ. 'ಪಂಚರಂಗಿ' ಚಿತ್ರದ ಕ್ಯಾಸೆಟ್ ಗಳು ಕೂಡಾ ಮಾರಾಟದಲ್ಲಿ ಹಿಂದೆ ಬಿದ್ದಿಲ್ಲ.


Click it and Unblock the Notifications











