For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಎರಡು ನಲ್ನುಡಿಯೆದಿರು ಕ್ಯಾನ್ಸರ್ ಏನು ಮಹಾ?

  By Staff
  |

  ಸಿನೆಮಾ ನಟರು ಪರದೆಯ ಮೇಲೆ ಎಷ್ಟೋ ಪಾತ್ರಗಳಿಗೆ ಜೀವ ತುಂಬುತ್ತಾರೆ. ಪರದೆಯ ಮೇಲೆಯೇ ಎಷ್ಟೋ ಪಾತ್ರಗಳು ಜೀವಿಸುತ್ತವೆ, ಜೀವ ಕಳೆದುಕೊಳ್ಳುತ್ತವೆ. ಆದರೆ, ಪ್ರೇಕ್ಷಕನ ಸ್ಮೃತಿಪಟಲದಲ್ಲಿ ಆ ಪಾತ್ರಗಳಿಗೆ ಎಂದೂ ಸಾವಿಲ್ಲ. ಎಷ್ಟೋ ಚಿತ್ರಪ್ರೇಮಿಗಳಿಗೆ ಆ ಪಾತ್ರ ಅಭಿನಯಿಸಿದ ವ್ಯಕ್ತಿ ಆರಾಧ್ಯ ದೈವ. ತಾವು ಮಾಡಿದ ಪಾತ್ರಕ್ಕೂ, ತಮ್ಮ ಜೀವನಕ್ಕೂ ಸಾರ್ಥಕ್ಯತೆ ಬರುವುದು ಅಂಥ ಸಾಮಾನ್ಯನೊಡನೆ ಬೆರೆತಾಗ, ಆತನ ಸುಖ-ದುಃಖ, ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿದಾಗಲೇ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

  ಹಳೆ ಮೈಸೂರು ಪ್ರಾಂತ್ಯದ 37ರ ಹರೆಯದ ಪ್ರಿಯ(ಹೆಸರು ಬದಲಾಯಿಸಲಾಗಿದೆ) ಎಂಬ ಹೆಣ್ಣುಮಗಳು ಉದರ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಅಲೆದದ್ದೆ ಬಂತು. ಕೊನೆಗೆ ಚಿಕಿತ್ಸೆಯ ಹಂತ ದಾಟಿ ಹೋಗಿ ವೈದ್ಯರು ಕೈಚೆಲ್ಲಿ ಕುಳಿತುಬಿಟ್ಟರು. ಆಕೆ ಇಂದು, ನಾಳೆ, ನಾಳಿದ್ದು ಎಂದು ದಿನ ನೂಕುತ್ತಿದ್ದಳು. ಇನ್ನೇನು ತನ್ನ ಬದುಕಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದಿರುವಾಗ, ನಟ ಶಿವರಾಜ್ ಕುಮಾರ್ ಅಭಿಮಾನಿಯಾದ ಆಕೆಗೆ ಒಂದು ದೂರವಾಣಿ ಕರೆ ಬಂತು. ಲೈನಲ್ಲಿ ಆಕಡೆ ಶಿವರಾಜ್ ! ಭಾವೋದ್ವೇಗದಿಂದ ಆಕೆಗೆ ಮಾತೇ ಹೊರಡಲಿಲ್ಲ. ಸಿಕ್ಕದ್ದು ಮುರುಟಿಹೋಗುತ್ತಿರುವ ಜೀವನವಲ್ಲದಿದ್ದರೂ ಆಘಳಿಗೆಯಲ್ಲಿ ಅವಶ್ಯವಾಗಿದ್ದ ಚೈತನ್ಯ ಅಷ್ಟೇ.

  ಜಗತ್ತಿನಲ್ಲಿ ಕೋಟ್ಯಾನುಕೋಟಿ ಜನ ಯಾವ್ದ್ಯಾವ್ದೋ ರೋಗಗಳಿಂದ ನರಳುತ್ತಿದ್ದಾರೆ. ಎಲ್ಲರಿಗೂ ಸ್ವತಃ ಹೋಗಿ ತಬ್ಬಿಕೊಂಡು ಚಿಕಿತ್ಸೆಗಾಗಿ ನೋಟು ನೀಡಿ ಬರುವುದು ಬೇಡ. ಒಂದೇ ಒಂದು ನೋಟ, ಒಂದೇ ಒಂದು ಸಾಂತ್ವನದ ನುಡಿ. ಅಷ್ಟೇ ಸಾಕು. ಬೇಕಾಗಿರುವುದು ಮಾನವೀಯತೆಯೇ ಹೊರತು ಮತ್ತೇನಲ್ಲ. ಇತ್ತೀಚೆಗೆ ನಟ ವಿಜಯ್ ತಮ್ಮ ಜನ್ಮ ದಿನದಂದು ಕಿದ್ವಾಯಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಟಾಣಿಗೆ ಒಂದು ಲಕ್ಷ ನೀಡಿ ಬಂದಿದ್ದಾರೆ. ಜೀವನ ಕೊಡುವುದು ಯಾರಿಗೂ ಸಾಧ್ಯವಿಲ್ಲದಿದ್ದರೂ ನೀಡಿದ ಒಂದು ಮುಷ್ಠಿ ಸಂತಸ ಒಂದು ಕೋಟಿಗೆ ಸಮ.

  ಕ್ಯಾನ್ಸರ್ ರೋಗಿಗಳಿಗೆ ಕರುಣಾಶ್ರಯ : ಕರುಣಾಶ್ರಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಿಯಳಿಗೆ ಈಗ ಸಾವೇ ಮುಂದೆ ಬಂದು ನಿಂತರೂ ಮುಂದೆ ತಳ್ಳಿ ಬದುಕುವಷ್ಟು ಹುಮ್ಮಸ್ಸು ಬಂದಿದೆ. ಕರುಣಾಶ್ರಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರವತ್ತೈದರ ಆಜು ಬಾಜು ಇದ್ದ ನರಸಪ್ಪ ಪತ್ನಿಯನ್ನು ಕಳೆದುಕೊಂಡು, ಮಕ್ಕಳಿಗೆ ಭಾರವಾಗಿ ಬದುಕು ಬೇಸರವಾಗಿ ಸಾವನ್ನು ನಿರೀಕ್ಷಿಸುತ್ತಿದ್ದರು. ಈಗವರು ಕರುಣಾಶ್ರಯದಲ್ಲಿ ತೋಟದ ಕೆಲಸ ಮಾಡಿಕೊಂಡು ಹಾಯಾಗಿದ್ದಾರೆ. ಕೋಲಾರದ ರೇಷ್ಮೆ ಕೃಷಿಕರಾದ ಬಿ.ಎಂ.ಎಸ್. ಶಂಕರಪ್ಪ (42) ಸಿಗರೇಟು, ಕುಡಿತಕ್ಕೆ ಬಿದ್ದು ಕ್ಯಾನ್ಸರ್ ರೋಗವನ್ನು ಆಹ್ವಾನಿಸಿಕೊಂಡ. ಚಿಕಿತ್ಸೆಗಾಗಿ ಬರೋಬ್ಬರಿ 2.5 ಲಕ್ಷ ರೂ.ಗಳನ್ನು ಖರ್ಚು ಮಾಡಿದ. ರೋಗ ವಾಸಿಯಾಗಲಿಲ್ಲ. ಕ್ಯಾನ್ಸರ್ ಉಲ್ಬಣಿಸಿತು. ಈತನ ನೆರವಿಗೆ ಕರುಣಾಶ್ರಯ ಬಂತು.

  ಹೀಗೆ ಹೆಂಡಕ್ಕೆ ದಾಸರಾದವರು, ಕಣ್ಣು ಕಳೆದುಕೊಂಡವರು, ಮಕ್ಕಳಿಗೆ ಹೊರೆಯಾದ ಹಿರಿ ಜೀವಗಳು, ಇನ್ನೂ ಭಾರವಾದ ಬದುಕುಗಳಿಗೆ ಸೋತ ಹೃದಯಗಳು ಸೇರಿ ಪ್ರಸ್ತುತ ಕರುಣಾಶ್ರಯದಲ್ಲಿ 25 ಮಂದಿ ಕ್ಯಾನ್ಸರ್ ಪೀಡಿತ ರೋಗಿಗಳಿದ್ದಾರೆ. ಅವರ ಕೊನೆಯ ಆಸೆಗಳನ್ನು ಪೂರೈಸುವುದೇ ಕರುಣಾಶ್ರಯದ ಕನಸು. ಹಾಗೆ ಕೈಯಲ್ಲಿ ಜೀವ ಹಿಡಿದುಕೊಂಡಿದ್ದ ಪ್ರಿಯ ಶಿವು ಅಭಿಮಾನಿ ಎಂದು ತಿಳಿದು ಅವರೊಂದಿಗೆ ಮಾತನಾಡಿಸಿದರು. ಆಕೆಯನ್ನು ಗೆಲುವಾಗಿಸಿದರು.

  ಮೊದಲು ಆಕೆಯ ಸ್ಥಿತಿಯ ಬಗ್ಗೆ ತಿಳಿಸಿದಾಗ ನಾನು ನೊಂದುಕೊಂಡೆ. ಫೋನ್‌ನಲ್ಲಿ ಆಕೆಯೊಂದಿಗೆ ನಾಲ್ಕು ಉತ್ಸಾಹದ ಮಾತುಗಳನ್ನು ಆಡಿದೆ. ಈಗ ಆಕೆ ಗೆಲುವಾಗಿದ್ದಾರೆ ಎಂದು ತಿಳಿದು ತುಂಬಾ ಸಂತೋಷವಾಗುತ್ತಿದೆ ಎನ್ನುತ್ತಾರೆ ಶಿವಣ್ಣ. ಹೀಗೆ ಜೀವನದಲ್ಲಿ ಖಿನ್ನರಾದ ರೋಗಿಗಳಿಗೆ ಅವರ ಆತ್ಮೀಯರು ನಾಲ್ಕು ಒಳ್ಳೆ ಮಾತಾಡಿದರೆ ಅವರು ಮರುಜೀವಪಡೆಯುತ್ತಾರೆ. ತಮ್ಮ ರೋಗಗಳಿಗೆ ತಾತ್ಕಾಲಿಕ ಉಪಶಮನ ದೊರೆಯುತ್ತದೆ ಎನ್ನುತ್ತಾರೆ ಬೆಂಗಳೂರು ವಿವಿಯ ಮಾಜಿ ಕುಲಪತಿ ಹಾಗೂ ಮನಶ್ಯಾಸ್ತ್ರದ ಪ್ರಾಧ್ಯಾಪಕರಾದ ಎಂ.ಎಸ್.ತಿಮ್ಮಪ್ಪ.

  ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಪ್ರಿಯಳ ಜೀವನದಲ್ಲಿ ನವಚೈತನ್ಯ ತುಂಬಿದ ಶಿವರಾಜ್ ಕುಮಾರ್ ಹಾಗೂ ಕರುಣಾಶ್ರಯ ಮತ್ತೆಷ್ಟೋ ಮಂದಿಗೆ ಸ್ಪೂರ್ತಿಯಾಗಲಿ. ಕೋಟಿ ಕೋಟಿ ಗಳಿಸುತ್ತಿರುವ ನಟರು ಲಕ್ಷ ಬೇಡ ಇತ್ತ ಕಡೆ ಒಂದು ಲಕ್ಷ್ಯ ಕೊಟ್ಟರೂ ಸಾಕು.

  (ದಟ್ಸ್‌ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X