twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಕ್ಷಕನೇ ಪ್ರಭು, ಕನ್ನಡ ಸಿನಿಮಾಗಳಿಗೆ ಹೊಸತೊಂದು ಪ್ರಶಸ್ತಿ

    By Staff
    |

    *ನಾಡಿಗೇರ್‌ ಚೇತನ್‌

    ಹಲೋ ಗಾಂಧಿನಗರ್‌!

    ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನನ ಸಮಾರಂಭದ ನೆನಪು ಮಾಸುವ ಮುನ್ನವೇ ಇನ್ನೊಂದು ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭ . ಈ ಬಾರಿ ಪ್ರಶಸ್ತಿ ನೀಡಿದ್ದು ಸರ್ಕಾರವಲ್ಲ , ಯಾವುದೋ ಸಂಘ ಸಂಸ್ಥೆಯೂ ಅಲ್ಲ- ಪತ್ರಿಕೆ. ಅದು ಸಿನಿಮಾ ಪತ್ರಿಕೆ. ಹೆಸರು- ‘ಹಲೋ ಗಾಂಧಿನಗರ್‌’.

    ಚೌಡಯ್ಯ ಸ್ಮಾರಕ ಭವನದಲ್ಲಿ ಜನವರಿ 23, ಗುರುವಾರ ರಾತ್ರಿ ‘ಹಲೋ ಗಾಂಧಿನಗರ್‌’ ಪತ್ರಿಕೆಯ 2001-2002 ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ತಾರೆಗಳ ಬೆಳಕಿನಲ್ಲಿ ಜರುಗಿತು. ಯಾವುದೇ ವಿವಾದವಿಲ್ಲದೆ ಲಾಬಿಯಿಲ್ಲದೆ ಓದುಗರೇ ಆರಿಸಿದ ಪ್ರಶಸ್ತಿಗಳವು. ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಈವರಗೆ ಲಯನ್ಸ್‌, ಲಾವಣ್ಯ, ಫಿಲಂ ಫೇರ್‌, ಸಿನಿಮಾ ಎಕ್ಸ್‌ಪ್ರೆಸ್‌ ಮುಂತಾದ ಅನೇಕ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿವೆ. ಈಗ ಹಲೋ ಗಾಂಧಿನಗರ್‌ ಸರದಿ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌. ರಮೇಶ್‌, ನಟಿ ಭಾರತಿ ವಿಷ್ಣುವರ್ಧನ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌ ಪಾಟೀಲ್‌ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನೊಬ್ಬ ಮುಖ್ಯ ಅತಿಥಿ ನಟ ಹಾಗೂ ಸೋನಿಯಾಗಾಂಧಿ ಅವರ ಕೈಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಮಂಡ್ಯದ ಸಂಸದ ಅಂಬರೀಷ್‌ ಸಮಾರಂಭವವನ್ನು ತಡವಾಗಿ ಸೇರಿಕೊಂಡರು. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ. ಸಿ. ಎನ್‌ ಚಂದ್ರಶೇಖರ್‌ ಜ್ಯೋತಿ ಬೆಳಗುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.

    ಮಾತು ಕಡಿಮೆ ಮನರಂಜನೆ ಜಾಸ್ತಿ

    ಅತಿಥಿಗಳು ಹೆಚ್ಚು ಮಾತನಾಡಲಿಲ್ಲ . ಮಾತನಾಡಿದವರೆಲ್ಲ್ಲರೂ ಸಮಾರಂಭದ ಉಸ್ತುವಾರಿ ವಹಿಸಿದ್ದ ಹಲೋ ಗಾಂಧಿನಗರ್‌ ಪತ್ರಿಕೆಯ ನಂದಕುಮಾರ್‌ ಮತ್ತು ವರಲಕ್ಷ್ಮಿ ನಂದಕುಮಾರ್‌ಗೆ ಶುಭ ಕೋರಿದರು.

    ಹಲೋ ಗಾಂಧಿನಗರ್‌ ಪತ್ರಿಕೆ ಪ್ರಶಸ್ತಿಗಳನ್ನು ನೀಡುತ್ತಿರುವುದು ಇದೇ ಮೊದಲ ಬಾರಿ. ಆ ಕಾರಣಕ್ಕೇನೊ ಸಮಾರಂಭದಲ್ಲಿ ಒಂದಷ್ಟು ಬಹಳಷ್ಟು ಗೊಂದಲಗಳು ಕಾಣಿಸಿಕೊಂಡಿದ್ದವು. ಚೆನ್ನೈನಿಂದ ಬರಬೇಕಿದ್ದ ನೆನಪಿನ ಕಾಣಿಕೆಗಳು ಸಕಾಲಕ್ಕೆ ಬರಲಿಲ್ಲ . ಪ್ರಶಸ್ತಿ ವಿಜೇತರು ಹಾರಕ್ಕಷ್ಟೇ ತೃಪ್ತಿಪಡಬೇಕಾಯಿತು. ಫಲಕಗಳನ್ನು ಮನೆಗೆ ತಲುಪಿಸುವ ಆಶ್ವಾಸನೆಯನ್ನು ಸಂಘಟಕರು ನೀಡಿದರು.

    ಹಿರಿಯ ನಟ ಶಿವರಾಂ ಮತ್ತು ನಟಿ ರಶ್ಮಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶಿವರಾಂ ಇದ್ದುದರಿಂದ ನಟಿ ರಶ್ಮಿಗೆ ಹೆಚ್ಚು ಕೆಲಸ ಇರಲಿಲ್ಲ. ಶಿವರಾಂ ಕನ್ನಡದಲ್ಲಿ ಹೇಳಿದ್ದನ್ನು ಆಕೆ ಇಂಗ್ಲೀಷ್‌ನಲ್ಲಿ ಉಲಿಯುತ್ತಿದ್ದಳು.

    ಟೀವಿ ಧಾರಾವಾಹಿ ನಡುವಿನ ಜಾಹಿರಾತುಗಳಂತೆ ಪ್ರಶಸ್ತಿ ಪ್ರದಾನ ಸಮಾರಂಭದ ನಡುನಡುವೆ ಹಾಡುಗಳು ಮತ್ತು ನೃತ್ಯಗಳು ಪದೇ ಪದೇ ಇಣುಕುತ್ತಿದ್ದವು. ನೃತ್ಯ ನಿರ್ದೇಶಕರಾದ ತ್ರಿಭುವನ್‌ ಮತ್ತು ಫೈವ್‌ ಸ್ಟಾರ್‌ ಗಣೇಶ್‌ ಹಾಡುಗಳಿಗೆ ನೃತ್ಯ ಸಂಯೋಜಸಿದ್ದರು. ಕಾರ್ಯಕ್ರಮದ ವಿಶೇಷತೆ ಬೇಬಿ ಶ್ರೇಯ. ಆಕೆ ಹಾಡಿದ್ದು ಕನ್ನಡ ವೈಭವ. ಅದು ಪ್ರತಿಯಾಬ್ಬ ಕನ್ನಡಿಗನನ್ನು ಬಡಿದೆಬ್ಬಿಸುವ ಹಾಗಿತ್ತು. ಬೇಬಿ ಶ್ರೇಯ ಎಷ್ಟು ಚೆನ್ನಾಗಿ ಹಾಡಿದಳೆಂದರೆ ಸಾಲು ಸಾಲಿಗೂ ಪ್ರೇಕ್ಷಕರಿಂದ ಚಪ್ಪಾಳೆ. ಹಾಡಿನ ಕೊನೆಗೆ ಶಿವರಾಂ ಆ ಮಗುವಿನ ಕಾಲಿಗೆ ನಮಸ್ಕಾರ ಮಾಡಿದರು. ಭಾರತಿ ವಿಷ್ಣುವರ್ಧನ್‌ ಮತ್ತು ವಿಷ್ಣುವರ್ಧನ್‌ ಮಗುವನ್ನು ಎತ್ತಿ ಮುದ್ದಾಡಿದರು. ಸಿಂಹಾದ್ರಿಯ ಸಿಂಹ ಚಿತ್ರದ ನಿರ್ಮಾಪಕ ವಿಜಯಕುಮಾರ್‌ ಮಗುವಿನ ವಿದ್ಯಾಭ್ಯಾಸಕ್ಕೆ 5001ರೂ ಕಾಣಿಕೆ ನೀಡಿದರು.

    ಪ್ರಶಸ್ತಿಯ ನಗು ಚೆಲ್ಲಿದವರು :

    ಅತ್ಯುತ್ತಮ ನಟಿ - ಪ್ರೇಮ,
    ಅತ್ಯುತ್ತಮ ನಟ - ವಿಷ್ಣುವರ್ಧನ್‌,
    ನಿರ್ದೇಶಕ - ರಾಜೇಂದ್ರ ಸಿಂಗ್‌ ಬಾಬು (ಕೋತಿಗಳು ಸಾರ್‌ ಕೋತಿಗಳು),
    ಹಾಸ್ಯ ನಟ - ಸಾಧುಕೋಕಿಲ (ಕೋದಂಡರಾಮ),
    ಪೋಷಕ ನಟ - ಶ್ರೀನಿವಾಸ ಮೂರ್ತಿ (ಜಮೀನ್ದಾರ್ರು),
    ಪೋಷಕ ನಟಿ - ತಾರಾ (ನಿನಗಾಗಿ),
    ಕಲಾ ನಿರ್ದೇಶನ - ಅರುಣ್‌ ಸಾಗರ್‌ (ಶ್ರೀ ಮಂಜುನಾಥ),
    ಸಾಹಸ ನಿದೇ}ಶನ - ಕೌರವ ವೆಂಕಟೇಶ್‌ ( ಲಾ ಅಂಡ್‌ ಆರ್ಡರ್‌),
    ಸಂಕಲನ - ಕೆ. ಆರ್‌. ಸೌಂದರ್‌ ರಾಜ್‌ (ಸಿಂಹಾದ್ರಿಯ ಸಿಂಹ),
    ಛಾಯಾಗ್ರಹಣ - ಸೀತಾರಾಂ (ಏಕಾಂಗಿ),
    ನೃತ್ಯ - ಫೈವ್‌ ಸ್ಟಾರ್‌ ಗಣೇಶ್‌ (ಫ್ರೆಂಡ್ಸ್‌),
    ಸಾಹಿತ್ಯ - ಕೆ. ಕಲ್ಯಾಣ್‌ (ಕೋಟಿಗೊಬ್ಬ),
    ಹಿನ್ನಲೆ ಗಾಯಕಿ - ನಂದಿತಾ (ಯುವರಾಜ),
    ಹಿನ್ನಲೆ ಗಾಯಕ - ಹೇಮಂತ್‌ ಕುಮಾರ್‌ (ಸೂಪರ್‌ ಸ್ಟಾರ್‌),
    ಸಂಗೀತ - ಗುರುಕಿರಣ್‌ (ಅಪ್ಪು),
    ಸಂಭಾಷಣೆ - ಎಂ. ಎಸ್‌. ರಮೇಶ್‌ (ಅಪ್ಪು),
    ಚಿತ್ರಕಥೆ - ಉಪೇಂದ್ರ (ಎಚ್‌ಟುಒ),
    ಕಥೆ - ಬಿ. ಎ. ಮಧು (ಸೈನಿಕ),

    ನಟ ನಟಿಯರಾದ ಸಿ.ಪಿ.ಯೋಗೇಶ್ವರ್‌, ಆದರ್ಶ, ದೇವರಾಜ್‌, ಜಯಮಾಲ, ರಾಧಿಕ, ರಾಜೇಶ್‌ ರಾಮನಾಥ್‌ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಉಪೇಂದ್ರ ‘ಸುಮ್ಸುಮ್ನೆ’ ಮನೆಯಲ್ಲೇ ಉಳಿದಿದ್ದರು.

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 23, 2024, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X