»   » ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕರ ಸ್ಯಾಂಡಲ್‌ವುಡ್‌ ಪ್ರವೇಶ

ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕರ ಸ್ಯಾಂಡಲ್‌ವುಡ್‌ ಪ್ರವೇಶ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ನಿಮ್ಮ ಸಂಗೀತ ಬತ್ತಳಿಕೆಯಲ್ಲಿ ಎಷ್ಟು ಮಟ್ಟುಗಳಿವೆ ಎಂಬ ಪ್ರಶ್ನೆಗೆ ಆತ ಕೊಡುವ ಉತ್ತರ - ‘ಒಂದು ಸಾವಿರ’. ಅದರ ಹಿಂದೆಯೇ ನಗುನಗುತ್ತಾ ಹೇಳುತ್ತಾರೆ- ‘ಈ ಪೈಕಿ 750ನ್ನು ನಾನೇ ರಿಜೆಕ್ಟ್‌ ಮಾಡುತ್ತೇನೆ’ !

ಆಂಧ್ರಪ್ರದೇಶದ ಯಾವ ಮೂಲೆಯಲ್ಲಿ ನಿಂತು ಆರ್‌.ಬಿ.ಪಟ್ನಾಯಕ್‌ ಅಂದರೂ, ಈ ಹೆಸರನ್ನು ಬಲ್ಲವರು ಸಿಗುತ್ತಾರೆ. ‘ಜಯಂ’ ಎಂಬ ಚಿತ್ರದ ಮಟ್ಟುಗಳ ಮೂಲಕ ಆಡಿಯೋ ಕೆಸೆಟ್ಟು ಬಿಕರಿಯ ದಾಖಲೆಗಳನ್ನು ಮುರಿದು ಹಾಕಿದ ಈ ಸಂಗೀತ ಸಂಯೋಜಕನಿಗಿನ್ನೂ ಮೂವತ್ತೆರಡರ ಹರೆಯ. ಮಟ್ಟು ಹಾಕಿರುವುದು ಇಪ್ಪತ್ತೇ ಚಿತ್ರಗಳಿಗೆ. ಈಗ ಭರವಸೆಯ ಯುವ ನಿರ್ದೇಶಕ ‘ಪ್ರೇಮ್‌’ ತಮ್ಮ ‘ಎಕ್ಸ್‌ಕ್ಯೂಸ್‌ ಮಿ’ ಎಂಬ ಚಿತ್ರಕ್ಕೆ ಮಟ್ಟುಗಳನ್ನು ಹಾಕುವ ಕೆಲಸವನ್ನು ಇದೇ ಪಟ್ನಾಯಕ್‌ಗೆ ಒಪ್ಪಿಸಿದ್ದಾರೆ. ಈಗಾಗಲೇ ಚಿತ್ರದ 7 ಹಾಡುಗಳು ಸಿದ್ಧವಾಗಿವೆ. ಪ್ರೇಮ್‌ಗೆ ಖುಷಿಯಾಗಿದೆ. ಕನ್ನಡದಲ್ಲೂ ಬ್ರೇಕ್‌ ಕೊಡುವ ತಮ್ಮ ಉಮೇದಿ ಈ ಚಿತ್ರದ ಮಟ್ಟುಗಳಲ್ಲಿ ಇವೆ ಎನ್ನುತ್ತಾರೆ ಪಟ್ನಾಯಕ್‌.

ಪಟ್ನಾಯಕ್‌ ಜೊತೆ ಹರಟೋಣ ಬನ್ನಿ...

‘ನಾನು ಹಾರ್ಮೋನಿಯಂ ಮುಂದಿಟ್ಟುಕೊಂಡು ರಾಗಗಳ ಹಾಕುತ್ತಾ ಮಟ್ಟು ಹೊಸೆಯುವ ಜಾಯಮಾನದವನಲ್ಲ. ಕಾರಲ್ಲೋ, ಊಟ ಮಾಡುವಾಗಲೋ ಥಟ್ಟನೆ ಹೊಳೆಯುವ ಟ್ಯೂನಿಗೇ ನಾನು ಸೋಲೋದು. ಆಗಲೇ ಸಹಜವಾದ ಮಟ್ಟು ಮೂಡುವುದು. ನನ್ನ ಹಿಟ್‌ ಗೀತೆಗಳ ಮಟ್ಟುಗಳು ಸಿದ್ಧವಾಗಿರುವುದೇ ಹೀಗೆ. ನಿಜಂ ಚಿತ್ರದ ಒಂದು ಹಾಡನ್ನು ದಶಕದ ಅದ್ಭುತ ಗೀತೆ ಅಂತ ಅಭಿಮಾನಿಗಳು ಗುರ್ತಿಸಿದರು. ತಮಾಷೆಯೆಂದರೆ, ಆ ಹಾಡಿಗೆ ನಾನು ಎರಡೇ ನಿಮಿಷದಲ್ಲಿ ಟ್ಯೂನ್‌ ಹಾಕಿದ್ದೆ. ಇನ್ನೊಂದು ಸಿನಿಮಾದ ಒಂದು ಹಾಡನ್ನು ಡೆಡ್‌ಲೈನ್‌ನಲ್ಲಿ ಕೊಡಲಾಗದೆ ತಲೆ ಮರೆಸಿಕೊಂಡಿದ್ದೆ.

ಹಾಗಾದರೆ, ನಿಮ್ಮ ಡೆಡ್‌ಲೈನ್‌ ಏನು ಅಂತಲೂ ಕೆಲವರು ಕೇಳಿದ್ದಾರೆ. ಚಿತ್ರಕಾರನಿಗೆ, ಕವಿಗೆ ಯಾವ ಡೆಡ್‌ಲೈನ್‌ ಇರುತ್ತದೆ ಹೇಳಿ? ಆದರೆ, ಸೃಜನಾತ್ಮಕ ಕೃತಿಗಳು ಆತನ ನಿರಂತರ ಯೋಚನೆಯ ಫಲವಾಗಿ ಸತತವಾಗಿ ಹೊಮ್ಮುತ್ತಿರುತ್ತವೆ. ಆಗ ಡೆಡ್‌ಲೈನ್‌ ಸಮಸ್ಯೆಯೇ ಅಗುವುದಿಲ್ಲ. ನನ್ನ ವಿಷಯದಲ್ಲೂ ಹೀಗೆಯೇ.

ಇಳಯರಾಜ ಮತ್ತು ರೆಹಮಾನ್‌ ನನಗೆ ಸ್ಫೂರ್ತಿ. ಕುಲಶೇಖರ್‌ ಮತ್ತು ಸೀತಾರಾಮ ಶಾಸ್ತ್ರಿಗಳ ಸಾಲುಗಳಿಗೆ ರಾಗ ಹಾಕೋದು ಖುಷಿ. ನನ್ನ ಟ್ಯೂನ್‌ಗಳನ್ನ ಕದ್ದಿದ್ದಾರೆ, ಅದಕ್ಕೂ ಸಂತೋಷ. ಆದರೆ, ಕದಿಯುವ ಮುಂಚೆ ಹೇಳಿದರೆ ಇನ್ನೂ ಸಂತೋಷ. ಕನ್ನಡದಲ್ಲಿ ನಾನು ಹಾಕಿರುವ ಮಟ್ಟು ನಿಮಗಿಷ್ಟವಾಗಲಿ ಅನ್ನುವುದು ನನ್ನ ಕನಸು. ನೀವು ನನ್ನನ್ನು ಸ್ವೀಕರಿಸಿದರೆ, ಇನ್ನಷ್ಟು ಮಟ್ಟುಗಳನ್ನು ಕನ್ನಡದಲ್ಲಿ ಹಾಕಿಕೊಡಲು ನಾನು ಸಿದ್ಧ’.

ನೀವು ಪಟ್ನಾಯಕ್‌ ಹಾಡುಗಳ ಅಭಿಮಾನಿಯಾ? ಎರಡು ಸಾಲು ಬರೆಯಿರಿ.

ಪೂರಕ ಓದಿಗೆ-
ಸಂಗೀತದಲ್ಲಿ ಹೊಸತನ್ನೋದೇ ಇಲ್ಲ : ಇಳಯರಾಜ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada