»   » ಹೀರೋಗಳು ಹುಟ್ಟುತ್ತಿದ್ದಾರೆ, ಕೈ ತಟ್ಟಿ ಮೇಡಂ!

ಹೀರೋಗಳು ಹುಟ್ಟುತ್ತಿದ್ದಾರೆ, ಕೈ ತಟ್ಟಿ ಮೇಡಂ!

Posted By: Staff
Subscribe to Filmibeat Kannada

ರಾಜ್‌ಕುಮಾರ್‌ ನಿಧನದ ನಂತರ, ಕನ್ನಡ ಚಿತ್ರರಂಗದಲ್ಲಿ ಶೂನ್ಯ ಸೃಷ್ಟಿಯಾಗಿದೆ. ಈಗ ಹೀರೋಗಳೇ ಇಲ್ಲ ಎನ್ನುವರ್ಥದ ಬರಹ ಇತ್ತೀಚೆಗೆ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಒಂದರ್ಥದಲ್ಲಿ ಇದು ನಿಜ ಸಹಾ ಹೌದು. ಆದರೆ ಪೂರ್ಣ ಸತ್ಯವಲ್ಲ!

ಅಣ್ಣಾವ್ರು ಹೋದ ಮೇಲೆ ಅವರ ತಮ್ಮಾವ್ರು ವಿಷ್ಣುವರ್ಧನ್‌ ಯಾಕೋ ಮಂಕಾಗಿದ್ದಾರೆ! ಅಂಬರೀಷ್‌ಗಂತೂ ರಾಜಕಾರಣ ಮಾಡುವುದಕ್ಕೇ ಪುರಸೊತ್ತಿಲ್ಲ... ಬಣ್ಣದ ಬದುಕು ದೂರ ದೂರ... ಇನ್ನು ರವಿಚಂದ್ರನ್‌, ತಮ್ಮ ಚಿತ್ರಗಳಲ್ಲಿ ನಾಯಕಿಯರನ್ನು ಎಷ್ಟು ಬೆತ್ತಲಾಗಿಸಿದರೂ ಪ್ರೇಕ್ಷರು ಚಿತ್ರಮಂದಿರಕ್ಕೆ ಬರುತ್ತಿಲ್ಲ! 'ನೀಲಕಂಠ" ಮತ್ತೊಂದು 'ಮಲ್ಲ " ಆಗುತ್ತೆ ಅನ್ನೋ ವಿಶ್ವಾಸ ಹುಸಿಯಾಗಿದೆ!

ಶಿವರಾಜ್‌ಕುಮಾರ್‌ ಅದೃಷ್ಟ ಚೆನ್ನಾಗಿಲ್ಲವೋ, ನಿರ್ಮಾಪಕರ ಹಣೆಬರಹವೇ ಚೆನ್ನಾಗಿಲ್ಲವೋ ಗೊತ್ತಿಲ್ಲ. ಆದರೆ ಮುಟ್ಟಿದ್ದೆಲ್ಲವೂ ಮಣ್ಣಾಗುತ್ತಿದೆ! ಆದರೂ ಹೊಸ ಪ್ರಯೋಗಗಳಿಗೆ ಶಿವಣ್ಣ ಎಂದಿಗೂ ಸಿದ್ಧವಾಗಿಯೇ ಇದ್ದಾರೆ. ಅದವರ ದೌರ್ಬಲ್ಯವೂ ಹೌದು, ಸಾಮಾರ್ಥ್ಯವೂ ಹೌದು.

ಪುನೀತ್‌ ಕ್ರೇಜ್‌ ಇರುವುದು ನಿಜವಾದರೂ, ಅವರ ಸಿನಿಮಾಗಳು ಬರುವುದು ವರ್ಷಕ್ಕೊಂದೋ, ಎರಡೋ ಮಾತ್ರ. ಆದಿತ್ಯ, ನವೀನ್‌ ಮಯೂರ್‌ ಸೇರಿದಂತೆ ಕೆಲ ಹುಡುಗರು ದಣಿದರೆ ಹೊರತು, ಪ್ರೇಕ್ಷಕರ ಮನ ಗೆಲ್ಲಲಿಲ್ಲ. ಆದರೂ ಈಗಿನ ಕೆಲ ಹುಡುಗರು ಒಂದಿಷ್ಟು ಭರವಸೆ ಮೂಡಿಸುತ್ತಿದ್ದಾರೆ. ಈ ಅಂಶವನ್ನು ನಾವು ಮರೆಯಬಾರದು.

ತಮ್ಮ ಮೊದಲ ಚಿತ್ರಗಳ ಮೂಲಕವೇ ಪ್ರೇಮ್‌, ಗಣೇಶ್‌, ಪ್ರಜ್ವಲ್‌ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯಕ್ಕಂತೂ ಗಾಂಧಿನಗರದಲ್ಲಿ ಕಾಮಿಡಿ ಟೈಮ್‌ ಗಣೇಶ್‌ ಹೆಸರು ಚಲಾವಣೆಯಲ್ಲಿದೆ. ಸೈಕಲ್‌ ತುಳಿದದ್ದು ಕೊನೆಗೂ ಫಲ ನೀಡಿದ್ದು, ಗಣೇಶ್‌ ನಾಯಕರಾಗಿ ಗೆದ್ದಿದ್ದಾರೆ. 'ಹುಡುಗಾಟ" ಎಂಬ ಹೊಸ ಚಿತ್ರಕ್ಕೆ ಗಣೇಶ್‌ ನಾಯಕ.

'ನೆನಪಿರಲಿ" ಮೂಲಕ ಮನೆಮಾತಾದ, ಫಿಲಂಫೇರ್‌ ಪ್ರಶಸ್ತಿ ಗೆದ್ದ ಪ್ರೇಮ್‌ರ 'ಜೊತೆಜೊತೆಯಲಿ" ಗೆದ್ದಿದೆ. ಅವರಿಗೆ ಮಾರುಕಟ್ಟೆ ಕುದುರಿಸಿದೆ. 'ಪಲ್ಲಕ್ಕಿ", ' ಸವಿಸವಿ ನೆನಪು" ಚಿತ್ರಗಳ ಚಿತ್ರೀಕರಣ ಭರದಿಂದ ಸಾಗಿದೆ. ಪ್ರೇಮ್‌ರ ಇನ್ನೊಂದು ಗುಣವನ್ನು ಗಮನಿಸಬೇಕು. ಅವರು ಸಿಕ್ಕಿದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಜೊತೆಗೆ ರೀಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ಪ್ರಬುದ್ಧ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ.

ನಟ ದೇವರಾಜ್‌ ಪುತ್ರ ಪ್ರಜ್ವಲ್‌ರ 'ಸಿಕ್ಸರ್‌" ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಜ್ವಲ್‌ರ ಹಾಡು-ಕುಣಿತ-ಅಭಿನಯ, ಕಾಲೇಜು ಹುಡುಗರಿಗೆ ಇಷ್ಟವಾಗಿದೆ. ಮತ್ತೊಂದು ಕಡೆ 'ಶಿಷ್ಯ" ಚಿತ್ರದ ದೀಪಕ್‌ ಜೂನಿಯರ್‌ ಶಂಕರ್‌ನಾಗ್‌ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. 'ಪೂಜಾರಿ" ಮೂಲಕ ಆದಿಲೋಕೇಶ್‌ ನಾಯಕರಾಗುತ್ತಿದ್ದಾರೆ.

ನಾಯಕರಿಲ್ಲ ಎಂದು ಕೊರಗುವ ಬದಲು, ಕನ್ನಡ ಸಿನಿಮಾಗಳನ್ನು ನೋಡೋಣ. ನಾಯಕರನ್ನು ಸೃಷ್ಟಿಸೋಣ. ನಾಯಕರು ನಮ್ಮ ಮಧ್ಯೆ ಇದ್ದಾರೆ... ಅವರನ್ನು ಹುಡುಕಬೇಕು... ಬಳಸಿಕೊಳ್ಳಬೇಕು... ಆ ಕೆಲಸ ಮೊದಲು ಆಗಲಿ...

English summary
Kannaad celluloid is brimming with heroes. The industry and kannada audience must support the new crop of heroes who in turn can enrich Kannada cine world, says H.C.Natesh Babu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada