»   » ಅಣ್ಣಾವ್ರ 2ನೇ ಆಪರೇಷನ್ನು ಸಕ್ಸಸ್‌

ಅಣ್ಣಾವ್ರ 2ನೇ ಆಪರೇಷನ್ನು ಸಕ್ಸಸ್‌

Posted By:
Subscribe to Filmibeat Kannada

ಚೆನ್ನೈನ ಎಂಐಓಟಿ ಆಸ್ಪತ್ರೆಯಲ್ಲಿ ಸೋಮವಾರ (ಮಾ.24) ವರನಟ ರಾಜ್‌ಕುಮಾರ್‌ ಅವರ ಬಲಮಂಡಿಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.

ಆಸ್ಪತ್ರೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಹೆಸರಾಂತ ಮೂಳೆತಜ್ಞ ಪ್ರೊ.ಪಿ.ವಿ.ಎ. ಮೋಹನದಾಸ್‌ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತಾಡಿದರು. ಶಸ್ತ್ರ ಚಿಕಿತ್ಸೆ ಪಕ್ಕಾ ಯಶಸ್ವಿಯಾಗಿದ್ದು, ಸಂಜೆ ಹೊತ್ತಿಗೆ ರಾಜ್‌ಕುಮಾರ್‌ ನಡೆಯಬಹುದು. ಹತ್ತು ದಿನಗಳ ನಂತರ ಅವರನ್ನು ಡಿಸ್ಚಾರ್ಜ್‌ ಮಾಡುತ್ತೇವೆ ಎಂದರು.

ಮಾರ್ಚ್‌ 17ನೇ ತಾರೀಕು ಅಣ್ಣಾವ್ರ ಎಡ ಪೃಷ್ಠದ ಶಸ್ತ್ರಚಿಕಿತ್ಸೆ ನಡೆದಿತ್ತು. ಅದಾದ ನಂತರ ಸುಮಾರಾಗಿ ನಡೆದಾಡುವಂತಾಗಿದ್ದರು. ಹಲವು ವರ್ಷಗಳಿಂದ ಮಂಡಿಗಂಟಿಕೊಂಡಿದ್ದ ಬೇನೆಯಿಂದ ಇನ್ನಾದರೂ ಮುಕ್ತಿ ಸಿಕ್ಕೀತೆಂಬ ಭಾವ ಅಣ್ಣಾವ್ರ ಮೊಗದಲ್ಲಿ ಇಣುಕುತ್ತಿತ್ತು. 108 ದಿನಗಳ ಕಾಲ ವೀರಪ್ಪನ್‌ ಒತ್ತೆಯಾಳಾಗಿದ್ದಾಗ ಕಾಡುಮೇಡಲ್ಲಿ ಮೈಲುಗಟ್ಟಲೆ ನಡೆದ ಕಾರಣ ಅವರ ಮಂಡಿನೋವು ಉಲ್ಬಣಿಸಿತ್ತು.

ಪ್ರಧಾನಿ ವಾಜಪೇಯಿ ಅವರಿಗೆ ಜೋಡಿಸಿರುವ ಕೃತಕ ಮಂಡಿ ಚಿಪ್ಪಿಗಿಂತಲೂ ಗುಣಮಟ್ಟದಲ್ಲಿ ಅತ್ಯುತ್ಕೃಷ್ಟವಾದ ಮಂಡಿಚಿಪ್ಪನ್ನು ಅಣ್ಣಾವ್ರಿಗೆ ಅಳವಡಿಸಲಾಗಿದೆ ಎಂದು ಶಸ್ತ್ರ ಚಿಕಿತ್ಸೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್‌ ಕುಟುಂಬ ವೈದ್ಯ ಡಾ.ರಮಣ ರಾವ್‌ ತಿಳಿಸಿದರು.

‘ಅಪ್ಪಾಜಿ ಆರಾಮಾಗಿ ಮಾತಾಡುತ್ತಿದ್ದರು. ಸ್ವಲ್ಪ ನೋವಿದೆ ಅಷ್ಟೆ ಅಂತ ಹೇಳಿದರು. ಹತ್ತು ಹನ್ನೆರಡು ದಿನದಲ್ಲಿ ಅವರನ್ನು ಡಿಸ್ಚಾರ್ಜ್‌ ಮಾಡಿಸಿ ಕರೆದುಕೊಂಡು ಹೋಗ್ತೇವೆ’ ಎಂದು ರಾಘವೇಂದ್ರ ಹೇಳಿದರು.

ಹಲವು ವರ್ಷಗಳ ಮಂಡಿನೋವಿನ ಸಮಸ್ಯೆ ಪೂರ್ಣಪ್ರಮಾಣದಲ್ಲಿ ನೀಗುವುದಾಗಿ ಆಸ್ಪತ್ರೆಯ ವೈದ್ಯರು ಭರವಸೆ ಕೊಟ್ಟಿದ್ದಾರೆ. ಭಕ್ತ ಅಂಬರೀಶ, ಕುಮಾರರಾಮನಾಗಿ ಅಣ್ಣಾವ್ರನ್ನು ನೋಡುವ ಅವಕಾಶ ಕನ್ನಡ ಸಹೃದಯರಿಗೆ ಇನ್ನಾದರೂ ಸಿಕ್ಕೀತೆ?

(ಪಿಟಿಐ)

Post your views

ಆಸ್ಪತ್ರೆಯಲ್ಲಿ ಅಣ್ಣಾವ್ರು
ಅಣ್ಣಾವ್ರು ನಡೆದರು, ಸ್ನಾನ ಮಾಡಿದರು
ವರನಟ ರಾಜ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada