»   » ನಾನೀಗ ಫುಲ್‌ಟೈಂ ಸಂಗೀತ ನಿರ್ದೇಶಕ -ಮನೋ ಮೂರ್ತಿ

ನಾನೀಗ ಫುಲ್‌ಟೈಂ ಸಂಗೀತ ನಿರ್ದೇಶಕ -ಮನೋ ಮೂರ್ತಿ

Subscribe to Filmibeat Kannada


ಎಫ್‌ಎಂ ರೇಡಿಯೋ ಅಥವಾ ಟೀವಿ ಚಾನೆಲ್‌ಗಳಲ್ಲಿ ‘ಮುಂಗಾರು ಮಳೆ’ ಹಾಡುಗಳು ಸದಾ ಪ್ರಸಾರವಾಗುತ್ತಲೇ ಇರುತ್ತವೆ. ಕೇಳುಗರಿಗೆ ಎಷ್ಟು ಸಲ ಕೇಳಿದರೂ ಸಮಾಧಾನವಿಲ್ಲ! ಕಿವಿತುಂಬುವ, ಕರ್ಣಸುಕೋಮಲ ಸಂಗೀತ ನೀಡಿ ಹೃದಯ ತಟ್ಟಿದ ಸಂಗೀತ ನಿರ್ದೇಶಕ; ಮನೋ ಮೂರ್ತಿ. ಅವರೊಂದಿಗೆ ಒಂದು ಪುಟ್ಟ ಸಂದರ್ಶನ.

ಅಮೆರಿಕನ್ನಡಿಗರಾದ ಮನೋ ಮೂರ್ತಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. 1976ರಿಂದ ಕಂಪ್ಯೂಟರ್‌ ಜೊತೆ ಒಡನಾಟ ಉಳ್ಳವರು. ಕಾರ್ಪೋರೇಟ್‌ವಲಯದ ಗಿಜಿಗಿಜಿಯ ಮಧ್ಯೆಯೂ, ಸಂಗೀತ ಪ್ರೀತಿಯ ಉಳಿಸಿಕೊಂಡವರು. ಅವರಿಗೆ ದಿಢೀರ್‌ ಜನಪ್ರಿಯತೆ ತಂದು ಕೊಟ್ಟ ಚಿತ್ರ ‘ಅಮೆರಿಕಾ ಅಮೆರಿಕಾ’. ನಂತರದ ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ‘ಕಾರ್‌ ಕಾರ್‌..’ ಹಾಡಂತೂ ಮನೋಮೂರ್ತಿ ಹೆಸರನ್ನು ಎಲ್ಲೆಡೆ ಹಬ್ಬಿಸಿತು.

‘ಪ್ರೀತಿ ಪ್ರೇಮ ಪ್ರಣಯ’, ‘ಜೋಕ್‌ಫಾಲ್ಸ್‌’ ಚಿತ್ರಗಳು ಸಂಗೀತ ಪ್ರೇಮಿಗಳ ಸೆಳೆದವು. ಯುವ ಜನತೆ ಮತ್ತೆ ಎದ್ದು ಕುಣಿವಂತೆ ಮಾಡಿದ್ದು ‘ಮುಂಗಾರು ಮಳೆ’ಯ ಸಂಗೀತ. ಓದುಗರೇ, ಪೀಠಿಕೆ ದೊಡ್ಡದಾಯಿತು ಅನ್ನುವಿರಾ, ಸರಿ ನೇರವಾಗಿ ಸಂದರ್ಶನ ಓದಿಬಿಡಿ...

‘ಮುಂಗಾರು ಮಳೆ’ ಚಿತ್ರದ ಯಶಸ್ಸು, ವಿಶೇಷವಾಗಿ ಚಿತ್ರಸಂಗೀತದ ಬಗ್ಗೆ ನಿಮಗೆ ಏನನ್ನಿಸಿತು?

ನಿಜಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಯಶಸ್ಸು ನನ್ನ ಬೆನ್ನೇರದಂತೆ ನೋಡಿಕೊಳ್ಳುತ್ತೇನೆ. ನನ್ನ ಗಮನ ಸಂಗೀತದಿಂದ ಬೇರೆಡೆಗೆ ಸಾಗದಂತೆ ನಿಗಾ ವಹಿಸುತ್ತೇನೆ.

ನೀವು ಕಾರ್ಪೋರೇಟ್‌ ವಲಯದ ಉದ್ಯಮದಲ್ಲಿ ಒಳ್ಳೆ ಸ್ಥಾನದಲ್ಲಿರುವಿರಿ. ಸಂಗೀತದ ಬಗ್ಗೆ ಆಸಕ್ತಿ ವಹಿಸಿ, ಆ ಕ್ಷೇತ್ರದಲ್ಲೂ ಗೆದ್ದಿರುವಿರಿ. ನಿಮ್ಮ ವೃತ್ತಿ ಹಾಗೂ ಹವ್ಯಾಸ ಎರಡನ್ನೂ ಹೇಗೆ ಬ್ಯಾಲೆನ್ಸ್‌ ಮಾಡುವಿರಿ?

ತುಂಬಾ ಸುಲಭ. ನನಗೆ ವೃತ್ತಿ ಹಾಗೂ ಹವ್ಯಾಸ ಎರಡರ ಮಧ್ಯೆ ಆಯ್ಕೆ ಪ್ರಶ್ನೆಯೇ ಇಲ್ಲ. ನಾನೀಗ ಕಾರ್ಪೋರೇಟ್‌ ವಲಯದಿಂದ ಹೊರಬಂದಿದ್ದೇನೆ. ನಾನು ನನ್ನ ಪೂರ್ಣ ಸಮಯವನ್ನು ಸಂಗೀತ ಸಾಧನೆಗೆ ಮೀಸಲಿಟ್ಟಿದ್ದೇನೆ. ‘ಅಮೃತಧಾರೆ’ ಚಿತ್ರದ ನಂತರ ನಾನು ಸಂಗೀತ ನಿರ್ದೇಶನವನ್ನೇ ನನ್ನ ವೃತ್ತಿಯಾಗಿ ಸ್ವೀಕರಿಸಿದ್ದೇನೆ.

‘ಒಂದೇ ಒಂದು ಸಾರಿ...’, ‘ಅನಿಸುತ್ತಿದೆ ಯಾಕೋ ಇಂದು... ’ ಮತ್ತು ಟೈಟಲ್‌ ಸಾಂಗ್‌ ತುಂಬಾ ಜನಪ್ರಿಯವಾಗಿವೆ. ಇದರಲ್ಲಿ ನಿಮಗೆ ಯಾವುದಿಷ್ಟ?

‘ಇವನು ಗೆಳೆಯನಲ್ಲ ... ’ ಮತ್ತು ‘ಮುಂಗಾರು ಮಳೆಯೇ...’ (ಶೀರ್ಷಿಕೆ ಗೀತೆ)

ಆಧುನಿಕ ಸಂಗೀತ ಲೋಕದಲ್ಲಿ ಯಾರನ್ನು ನಿಮ್ಮ ಗುರು ಅಥವಾ ಮಾದರಿಯಾಗಿ ಸ್ವೀಕರಿಸಿದ್ದೀರಾ?

ಚಿಕ್ಕಂದಿನಿಂದ ನಾನು ಎಸ್‌.ಡಿ. ಬರ್ಮನ್‌, ಆರ್‌.ಡಿ. ಬರ್ಮನ್‌ ಹಾಗೂ ಮದನ್‌ ಮೋಹನ್‌ ಅವರ ಸಂಗೀತ ಕೇಳುತ್ತಾ ಬೆಳೆದೆ. ಈಗಿನ ಕಾಲದವರಲ್ಲಿ ನಾನು ಇಸ್ಮಾಯಿಲ್‌ ದರ್ಬಾರ್‌(ಹಿಂದಿಯ ‘ದೇವದಾಸ್‌’ ಖ್ಯಾತಿ) ಹಾಗೂ ಶಂಕರ್‌- ಎಹಸಾನ್‌-ಲಾಯ್‌(‘ದಿಲ್‌ ಚಹ್ತಾ ಹೈ’ ಖ್ಯಾತಿ) ಅವರ ಸಂಗೀತವನ್ನು ಇಷ್ಟಪಡುತ್ತೇನೆ.

ಕನ್ನಡ ಚಿತ್ರಸಂಗೀತದ ಬಗ್ಗೆ ಏನು ಹೇಳ್ತೀರಾ? ಆಧುನಿಕತನ ಪಡೆದಿದೆಯೋ ಅಥವಾ ಹಿಂದಿನ ಕಾಲದ ಮಾಧುರ್ಯ ಉಳಿಸಿಕೊಂಡಿದೆಯೋ?

ಈ ಪ್ರಶ್ನೆ ನೀವು ನೇರವಾಗಿ ಪ್ರೇಕ್ಷಕರನ್ನು ಕೇಳಿದರೆ ಉತ್ತಮ.

ನಿಮ್ಮ ಮುಂದಿನ ಯೋಜನೆಗಳೇನು? ಯಾರ್ಯಾರ ಜತೆ ಕೆಲಸ ಮಾಡುತ್ತಿದ್ದೀರಾ?

ಈಗಂತೂ ಕೈ ತುಂಬಾ ಕೆಲಸ ಸಿಕ್ಕಿದೆ, ಬಿಡುವೇ ಇಲ್ಲ...

ಚಿತ್ರ ನಿರ್ಮಾಣದಲ್ಲೂ ನಿಮಗೆ ಆಸಕ್ತಿಯಿದೆ ಎಂಬ ಸುದ್ದಿಯಿದೆ. ಸಂಗೀತದ ಜೊತೆಗೆ ಚಿತ್ರ ನಿರ್ಮಾಣ ಏನಾದರೂ ಸದ್ಯದಲ್ಲೇ ಕೈಗೊಳ್ಳುತ್ತೀರಾ?

ಇಲ್ಲ . ಆ ಬಗ್ಗೆ ಏನೂ ಯೋಚಿಸಿಲ್ಲ.

ಸಂಗೀತಪ್ರೇಮಿಗಳಿಗೆ ನೀವೇನಾದರೂ ಹೇಳುವಿರಾ?

ನನ್ನ ಕೈಲಾದ ಮಟ್ಟಿಗೆ ಕೇಳುಗರ ನಿರೀಕ್ಷೆಯನ್ನು ಉಳಿಸಿಕೊಳ್ಳೊದಕ್ಕೆ ಪ್ರಯತ್ನಪಡುವೆ... ನನ್ನ ಚಿತ್ರಸಂಗೀತವನ್ನು ಕೇಳಿದ ಎಲ್ಲರಿಗೂ ಧನ್ಯವಾದಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada