»   » ನೆನಪು-ಕನಸುಗಳ ನಡುವೆ ನಾಡೋಜನ 75ನೇ ಹುಟ್ಟುಹಬ್ಬ

ನೆನಪು-ಕನಸುಗಳ ನಡುವೆ ನಾಡೋಜನ 75ನೇ ಹುಟ್ಟುಹಬ್ಬ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

‘ಭಕ್ತ ಅಂಬರೀಷ ಮಾಡೋ ಆಸೆ ನನ್ನ ಹೃದಯದಲ್ಲಿದೆ. ಕಲಾವಿದರ ಜಾತಿಗೆ ನಟಿಸಬೇಕು ಅನ್ನೋ ಆಸೆ ಬಿಟ್ಟು ಹೋಗೋದು ಬಹಳ ಕಷ್ಟ’.

ರಾಜ್‌ಕುಮಾರ್‌ ಎಂದಿನಂತೆ ಮಾತಿನ ಲಹರಿಯಲ್ಲಿದ್ದರು. ಮಾತಲ್ಲಿ ಲವಲವಿಕೆ ತುಂಬಿದ್ದರೂ ಮುಖದಲ್ಲಿನ್ನೂ ಬಳಲಿಕೆಯ ನೆರಳಿತ್ತು . ಇತ್ತೀಚೆಗಷ್ಟೇ ಚೆನ್ನೈನ ಮಿಯೋಟ್‌ ಆಸ್ಪತ್ರೆಯಲ್ಲಿ ಮಂಡಿ ಹಾಗೂ ಕುಂಡಿಯ ಶಸ್ತ್ರಚಿಕಿತ್ಸೆಗೆಗೆ ಒಳಗಾಗಿ ಮರಳಿರುವ ವರನಟ ರಾಜ್‌ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ .

ಏಪ್ರಿಲ್‌ 24ರ ಗುರುವಾರ ಸದಾಶಿವನಗರದ ಬಂಗಲೆಯ ಬಳಿ ಮುಂಜಾವಿನಿಂದಲೇ ಅಭಿಮಾನಿಗಳ ಸುಳಿದಾಟ ಆರಂಭ. ಪ್ರತಿಯಾಬ್ಬರಿಗೂ ನೆಚ್ಚಿನ ಅಣ್ಣಾವ್ರನ್ನು ಕಾಣುವ, ಹುಟ್ಟುಹಬ್ಬದ ಶುಭಾಶಯ ಕೋರುವ, ಮತ್ತೆ ಬಣ್ಣ ಹಚ್ಚೋದು ಯಾವಾಗ ಎಂದು ಕೇಳುವ ತವಕ.

ಮನೆ - ಮನ ತುಂಬ ಖುಷಿ

ದೈಹಿಕ ಬಳಲಿಕೆಯನ್ನು ಮರೆತು ಎಪ್ಪತ್ತೆೈದನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ತೊಡಗಿಕೊಳ್ಳಲಿಕ್ಕೆ ರಾಜ್‌ಗೆ ಕಾರಣಗಳಿದ್ದವು. ಹುಟ್ಟುಹಬ್ಬ ಅನ್ನೋ ಖುಷಿಗಿಂತ, ಕೊನೆಯ ಮಗ ಪುನೀತ್‌ ಅಪ್ಪನಾದದ್ದು , ಆ ಮೂಲಕ ಮನೆಗೊಂದು ಹೊಸ ದನಿ ಸೇರಿಕೊಂಡಿದ್ದು ರಾಜ್‌ ಉತ್ಸಾಹಕ್ಕೆ ಗರಿ ಮೂಡಿಸಿತ್ತು . ಇದಲ್ಲದೆ ಪುನೀತ್‌ ಅಭಿನಯದ ‘ಅಭಿ’ ಸಿನಿಮಾ ಬಿಡುಗಡೆಯಾಗುತ್ತಿರುವ ಕಲರವವೂ ರಾಜ್‌ ಪಾಲಿಗೆ ಸಿಹಿಯಾಗಿತ್ತು .

ಹುಟ್ಟುಹಬ್ಬದ ಸಿಹಿ ತಿಂದ ನಂತರ ರಾಜ್‌ ಯಥಾಪ್ರಕಾರ ಹೊರಳಿದ್ದು ಹಿನ್ನೋಟದತ್ತ :

‘ಪ್ರತಿಯಾಂದನ್ನು ನಾನು ಈ ಬದುಕಿನಲ್ಲಿ ಪಡೆದಿದ್ದೀನಿ. ಭಾಗ್ಯ ಅನ್ನುತ್ತಾರಲ್ಲ , ಆ ಭಾಗ್ಯ ನನ್ನ ಪಾಲಿಗೆ ಎಲ್ಲವನ್ನೂ ಕೊಟ್ಟಿದೆ’ ಎಂದರು ರಾಜ್‌. ತಮ್ಮ ವೃತ್ತಿ ಜೀವನ ಹಾಗೂ ದಾಂಪತ್ಯದ ಐವತ್ತು ವರ್ಷಗಳು ಕಳೆದ ರೀತಿ ನಂಬಲಾಗುತ್ತಲೇ ಇಲ್ಲ ಎಂದು ರಾಜ್‌ ಆಕಾಶ ನೋಡಿದರು.

ರಾಜ್‌ ಮುಂದಿನ ಮಾತು ಹೊರಳಿದ್ದು ಅಭಿನಯದ ಶಕ್ತಿಯತ್ತ . ದೇವರು ಬೆಲೆ ಬಾಳುವ ಚಿನ್ನವನ್ನು ಭೂಮಿಯ ಒಳಗೆ ಇರಿಸಿರುತ್ತಾನೆ. ಕಬ್ಬಿಣವನ್ನು ಸುಲಭವಾಗಿ ಸಿಗುವಂತೆ ಇರಿಸಿರುತ್ತಾನೆ. ಬಂಗಾರ ಬೇಕೆಂದರೆ ಭೂಮಿಯನ್ನು ಆಳವಾಗಿ ಅಗೆಯಬೇಕು. ಅದೇರೀತಿ, ಕಲೆಯನ್ನು-ಅಭಿನಯ ಶಕ್ತಿಯನ್ನು ಶೋಧಿಸುತ್ತಾ ಆಳಕ್ಕೆ ಸಾಗಬೇಕು, ಹೊಸತನ್ನು ಕಂಡುಕೊಳ್ಳಬೇಕು ಎಂದು ರಾಜ್‌ ತತ್ವಜ್ಞಾನಿಯಾದರು.

ಶಿವ ಅಂಥ ಮುನ್ನುಗ್ಗುವೆ..

ಭಕ್ತ ಅಂಬರೀಷ ಚಿತ್ರದಲ್ಲಿ ಅಭಿನಯಿಸುವ ಆಸೆ ತಮ್ಮ ಹೃದಯದಿಂದ ಹುಟ್ಟಿದ್ದು ಎಂದು ಬಣ್ಣಿಸಿದ ರಾಜ್‌- ‘ಮಣ್ಣಿನ ಮೇಲೆ ಇರೋವರೆಗೂ ಮನುಷ್ಯನಿಗೆ ಈ ಆಸೆ ಅನ್ನೋದು ಇದ್ದಿದ್ದೆ. ಈ ನೋವೆಲ್ಲ ಕಳೆದ ಮೇಲೆ ಮತ್ತೆ ಶಿವ ಅಂಥ ಮುನ್ನುಗ್ಗುತ್ತೀನಿ’ ಎಂದು ಅಂಬರೀಶ ಚಿತ್ರದಲ್ಲಿ ನಟಿಸುವ ತಮ್ಮ ಹೆಬ್ಬಯಕೆಯನ್ನು ತೋಡಿಕೊಂಡರು.

‘ಚೆನ್ನೈನಲ್ಲಿ ಎರಡು ಶಸ್ತ್ರ ಚಿಕಿತ್ಸೆಗೆ ಒಳಗಾದ ದಿನಗಳಲ್ಲಿ ಆಸ್ಪತ್ರೆಯಲ್ಲಿನ ಡಾಕ್ಟರುಗಳ ಜೊತೆ ಜಾಲಿಯಾಗಿ ಕಾಲ ಕಳೆಯುತ್ತಿದ್ದೆ. ಇಲ್ಲದಿದ್ದರೆ ಆ ನೋವನ್ನು ಮರೆಯುವುದಾದರೂ ಹೇಗೆ ? ನಾನೊಬ್ಬ ತಮಾಷೆಯ ರೋಗಿ ಎಂದು ಡಾಕ್ಟರ್‌ಗಳು ಹೇಳುತ್ತಿದ್ದರು. ಎಲ್ಲವೂ ಸರಿ ಹೋಗುತ್ತೆ ಅಂದುಕೊಂಡಿದ್ದೀನಿ. ಮೂರು ತಿಂಗಳ ನಂತರ ಓಡಬಹುದು, ಕ್ರಿಕೆಟ್‌ ಆಡಬಹುದು ಎಂದು ಡಾಕ್ಟರ್‌ ಹೇಳಿದ್ದಾರೆ’ ಎಂದು ರಾಜ್‌ ನೆನಪುಗಳಿಗೆ-ಆಸೆಗಳಿಗೆ ಮುಖಾಮುಖಿಯಾದರು.

ತಿರುಪತಿ ತಿಮ್ಮಪ್ಪನ ದರ್ಶನ ಮಾಡಲಿಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡ ರಾಜ್‌- ಇನ್ನೊಮ್ಮೆ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತುವ ಮೂಲಕ ಬಾಲಾಜಿಯ ದರ್ಶನ ಮಾಡುವ ಆಸೆಯಿದೆ, ಕಾರಿನಲ್ಲಿ ಹೋಗಲಿಕ್ಕೆ ನನಗಿಷ್ಟವಿಲ್ಲ ಎಂದರು.

ಶಬ್ದವೇಧಿ ಚಿತ್ರೀಕರಣದ ಸಂದರ್ಭದಲ್ಲಿ ಮಂಡಿನೋವಿನಿಂದಾಗಿ ಅಭಿನಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲಾಗಲಿಲ್ಲ . ಮನಸ್ಸು ಹಂಚಿಹೋಗಿತ್ತು ಎಂದ ರಾಜ್‌- ಶ್ರೀರಾಮ, ಕೃಷ್ಣ ಹಾಗೂ ಬಾಂಡ್‌ ಪಾತ್ರಗಳಲ್ಲಿ ಅಭಿಮಾನಿಗಳು ತಮ್ಮನ್ನು ಕಾಣಲು ಇಷ್ಟಪಡುತ್ತಾರೆ ಎಂದು ನಕ್ಕರು.

ಅಂದಹಾಗೆ, ರಾಜ್‌ ಅವರ ದಿನಚರಿಯ ಮುಖ್ಯಾಂಶವೇನು ?
ಪ್ರತಿದಿನ ಎರಡು ಕಿಲೋಮೀಟರ್‌ ನಡೆಯುತ್ತೇನೆ ಎಂದರು ರಾಜ್‌. ವಯಸ್ಸಿನಲ್ಲಿದ್ದಾಗ 20 ಕಿಮೀ ನಡೆಯುತ್ತಿದ್ದೆ ಎಂದು ನೆನಪಿಸಿಕೊಂಡರು.

ಮಕ್ಕಳೊಂದಿಗೆ ವರನಟನ ಸಿನಿಮಾ

ಶಿವರಾಜ್‌, ರಾಘವೇಂದ್ರ ಹಾಗೂ ಪುನೀತ್‌ ಜೊತೆ ರಾಜ್‌ ಅಭಿನಯಿಸುವ ಚಿತ್ರದ ಕುರಿತ ಸುದ್ದಿ ಆಗಾಗ ಪ್ರಸ್ತಾಪವಾಗುತ್ತಲೇ ಇರುತ್ತದೆ. ರಾಜ್‌ 75 ನೇ ಹುಟ್ಟುಹಬ್ಬದ ಸಂದರ್ಭದಲ್ಲೂ ಈ ವಿಷಯ ಪ್ರಸ್ತಾಪವಾಯಿತು.

‘ನಾವು ನಾಲ್ವರೂ ಅಭಿನಯಿಸುವ ಚಿತ್ರದ ಕುರಿತು ಅನೇಕ ಬಾರಿ ಚರ್ಚೆ ನಡೆದಿದೆ. ಈ ಚರ್ಚೆ ಮುಂದೆಯೂ ನಡೆಯುತ್ತದೆ. ಈ ಚಿತ್ರಕ್ಕಾಗಿ ಕಥೆಯ ಹುಡುಕಾಟವೂ ನಡೆದಿದೆ’ ಎಂದು ರಾಘವೇಂದ್ರ ರಾಜಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.
ಅಲ್ಲಿಗೆ ರಾಜ್‌ ಮತ್ತೆ ಬಣ್ಣ ಹಚ್ಚುವ ಸಾಧ್ಯತೆಗಳು ಇದೆ ಎಂದಾಯಿತು.

Post your views

ಪೂರಕ ಓದಿಗೆ-
ರಾಜ್‌ ಎಂದರೆ ಏನು?- ಒಂದು ಅವಲೋಕನ

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...