»   » ರಾಜ್‌ ಬರ್ತ್‌ಡೇಗೆ ಹಂಪಿ ವಿವಿಯ ಕಾಲೆಳೆಯುವ ಗ್ರಂಥವೇ ಗಿಫ್ಟ್‌ !

ರಾಜ್‌ ಬರ್ತ್‌ಡೇಗೆ ಹಂಪಿ ವಿವಿಯ ಕಾಲೆಳೆಯುವ ಗ್ರಂಥವೇ ಗಿಫ್ಟ್‌ !

Posted By: Super
Subscribe to Filmibeat Kannada

ಏಪ್ರಿಲ್‌ 24 ರಾಜ್‌ ಹುಟ್ಟುಹಬ್ಬ. ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸುವ ಮೂಲಕ 74ನೇ ಹುಟ್ಟುಹಬ್ಬ ಆಚರಿಸಿಕೊಂಡ ರಾಜ್‌ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಟ್ಟಿರುವ ಬರ್ತ್‌ಡೇ ಗಿಫ್ಟ್‌ ಹೀಗಿದೆ... ಡಾ।ರಾಜ್‌ಕುಮಾರ್‌ ರಾಜಕೀಯಕ್ಕೆ ಬರುವುದನ್ನು ತಡೆಯಲೆಂದೇ ಕೇಂದ್ರದ ಕಾಂಗ್ರೆಸ್‌ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ, ಓಲೈಸಿದೆ. ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಿಸಿದ ಶಬ್ದವೇದಿ ಎಲ್ಲಾ ಅರ್ಥಗಳಲ್ಲೂ ಪರಿಪೂರ್ಣ ಆಗಿರಲಿಲ್ಲ.

ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಕನ್ನಡ ಚಿತ್ರರಂಗ ಕುರಿತ ಎರಡು ಸಂಪುಟಗಳಲ್ಲಿ ಇನ್ನೂ ಏನೈತಿ ಅಂಥಾದ್ದೇನೈತಿ ಎಂಬ ಕಾತುರ.

ರಾಜ್‌ಕುಮಾರ್‌ ಸೇರಿದಂತೆ ಹಿರಿಯ ಕಲಾವಿದರ ಬಗ್ಗೆ ಲೇವಡಿ, ವ್ಯಂಗ್ಯ ಒಳಗೊಂಡಿರುವ ಸಂಪುಟಗಳಲ್ಲಿ ಅಂಕಿಅಂಶಗಳ ಲೋಪ ಕೂಡ ಇದೆ. ಈ ಸಂಪುಟಗಳು ಚಲನಚಿತ್ರ ರಂಗಕ್ಕೇ ಮಸಿ ಬಳಿಯುವಂಥವು ಎಂದು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ತಗಾದೆ ತೆಗೆದಿದೆ.

ಈ ಸಂಪುಟಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘ ವಿವಿಯ ಕುಲಪತಿ ಡಾ.ಎಚ್‌. ಜಿ. ಲಕ್ಕಪ್ಪ ಗೌಡ ಅವರನ್ನು ಒತ್ತಾಯಿಸಿದೆ. ಎರಡು ಸಂಪುಟಗಳನ್ನೊಳಗೊಂಡಿರುವ ಈ ಪುಸ್ತಕದಲ್ಲಿ ಚಿತ್ರರಂಗದಲ್ಲಿರುವವರ ಬಗ್ಗೆ ಅವಹೇಳನಕಾರಿ ಅಂಶಗಳಿವೆ. ಚಲನಚಿತ್ರ ಹಾಗೂ ವ್ಯಕ್ತಿಗಳ ವಿಮರ್ಶೆಯೇ ಇತಿಹಾಸವಾಗುವುದಿಲ್ಲ. ಕೆಲವು ಘಟನೆಗಳನ್ನು ಮತ್ತು ಅಂಕಿ ಅಂಶಗಳನ್ನೂ ತಪ್ಪಾಗಿ ಮುದ್ರಿಸಲಾಗಿದೆ. ಚಿತ್ರರಂಗದ ಹಿರಿಯ ವ್ಯಕ್ತಿಗಳ ಬಗ್ಗೆ, ವ್ಯಂಗ್ಯ ಲೇವಡಿ ಹಾಗೂ ಕುಹಕದ ಮಾತುಗಳನ್ನು ಇತಿಹಾಸದ ಪುಸ್ತಕದಲ್ಲಿ ಸೇರಿಸಿದ್ದು ಸರಿಯಲ್ಲ ಎಂದು ರಾಜೇಂದ್ರ ಸಿಂಗ್‌ಬಾಬು, ಕುಲಪತಿ ಲಕ್ಕಪ್ಪ ಗೌಡರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಇಂತಹ ಕಳಂಕಿತ ಪುಸ್ತಕವನ್ನು ಹಿಂತೆಗೆದುಕೊಂಡು ಆಗಿರುವ ಪ್ರಮಾದವನ್ನು ಸರಿಪಡಿಸಲು ಅರ್ಹರಾಗಿರುವ ಹಾಗೂ ಚಿತ್ರರಂಗದ ವಿವಿಧ ವಿಭಾಗಗಳ ಸದಸ್ಯರನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಿ, ತಪ್ಪುಗಳನ್ನೆಲ್ಲಾ ತಿದ್ದಿ, ಸಂಪುಟಗಳನ್ನು ಪುನರ್‌ ಪ್ರಕಟಿಸಬೇಕು ಎಂಬುದು ಬಾಬು ಆಗ್ರಹ.

ಬರಗೂರರಿಗೂ, ಸಂಪುಟಕ್ಕೂ ಸಂಬಂಧವಿದೆಯಾ?
ನಿಕಟ ಸಂಬಂಧ ಖಂಡಿತ ಇಲ್ಲ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ. ಆದರೆ ಸಂಪುಟದಲ್ಲಿ ಬರಗೂರರ ಹೆಸರು ಪ್ರಕಟವಾಗಿದೆ. ಅದಕ್ಕೆ ಬರಗೂರರಿಗೂ ವಿಷಾದವಿದೆ. ಸಿದ್ಧವಾದ ಲೇಖನಗಳನ್ನು ಪರಿಶೀಲಿಸುವಂತೆ ಕನ್ನಡ ವಿವಿ ಕೇಳಿಕೊಂಡದ್ದು ನಿಜ. ಓದಲು ಒಂದು ಅಧ್ಯಾಯವನ್ನೂ ಕಳಿಸಿಕೊಟ್ಟಿದ್ದರು. ನನಗೆ ಲೇಖನಗಳನ್ನು ಪರಿಶೀಲಿಸಲು ಸಮಯವಿಲ್ಲ ಎಂಬುದನ್ನು ಆಗಲೇ ಸ್ಪಷ್ಟವಾಗಿ ಹೇಳಿದ್ದೆ. ಸಂಪುಟಗಳಲ್ಲಿ ನನ್ನ ಹೆಸರು ನೋಡಿ ಆಶ್ಚರ್ಯವಾಯಿತು. ಯಾವುದೋ ಉಪನ್ಯಾಸದಲ್ಲಿ ಇತಿಹಾಸ ಬರೆಯುವುದರ ಬಗ್ಗೆ ಕೆಲವು ಸಲಹೆಗಳನ್ನು ಹೇಳಿದ್ದೆ ಅಷ್ಟೆ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ.

ಲಕ್ಕಪ್ಪಗೌಡರ ಉತ್ತರದ ನಿರೀಕ್ಷೆಯಲ್ಲಿರುವ ಸಿಂಗ್‌ ಬಾಬು, ಆ ಉತ್ತರದ ನಂತರ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸುವರು.

ಪುಸ್ತಕದ ಹೆಸರು- ಕನ್ನಡ ಚಲನಚಿತ್ರ ಇತಿಹಾಸ (2 ಸಂಪುಟ)
ಸಂಪಾದಕರು- ಡಾ.ವಿಜಯಾ ಮತ್ತು ವಿ.ಎನ್‌.ಸುಬ್ಬರಾವ್‌
ನೆರವು- ಚಿಕ್ಕ ಸುರೇಶ!

ಇತಿಹಾಸ ತಿರುಚಿದ ಇತಿಹಾಸ ಪುರುಷರು ! ತನಿಖಾ ವರದಿಗೆ, ವಸ್ತುನಿಷ್ಠ ಲೇಖನಕ್ಕೆ ಸೂಜಿಮಲ್ಲಿಗೆ-ಇ ಮ್ಯಾಗಜಿನ್‌ ಓದಿ.

English summary
Hampi Varsitys book on history of Kannada Cinema is a bullshit : Rajendra Singh Babu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada