»   » ಸುಂಸುಮ್ನೆ ಸಂಜನಾ ಎಂಬ ಸುಂದರಿಯ ವೃತ್ತಾಂತ !

ಸುಂಸುಮ್ನೆ ಸಂಜನಾ ಎಂಬ ಸುಂದರಿಯ ವೃತ್ತಾಂತ !

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
‘ಬಹಳ ಜನ ನಾನು ಉಪೇಂದ್ರರ ಹೆಂಡತಿ ಎಂದು ತಪ್ಪು ತಿಳ್ಕೊಂಡಿದ್ದಾರೆ. ಸಿಕ್ಕಾಪಟ್ಟೆ ಕನ್‌ಪ್ಯೂಸ್‌ ಮಾಡ್ಕೋತಾರೆ. ಅದಕ್ಕೆ ನಾನು ನನ್ನ ಹೆಸರನ್ನೇ ಬದಲಾಯಿಸಿ ಕೊಂಡ್‌ಬಿಟ್ಟೆ’. ಸಂಜಾನಾ ಅಲಿಯಾಸ್‌ ಪ್ರಿಯಾಂಕ ಪಂಡಿತ್‌ ತಮ್ಮ ನಾಮಧೇಯದ ಬಗ್ಗೆ ಹೇಳಿದ್ದು ಹೀಗೆ.

ಸಂಜನಾ ಕಣ್ಣ್‌ ಸೆಳೆಯುವ ಫೋಟೊಜೆನಿಕ್‌ ಸುಂದರಿ. ‘ದಿ ಸಿಟಿ’ - ಇಂಗ್ಲಿಷ್‌ ಹೆಸರಿನ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಆಕೆಯ ಪಾದಾರ್ಪಣೆ. ಆ ಬಳಿಕ ‘ಕನಸು’, ಶಿವರಾಮುವಿನ ‘ಗೇಮು’ ಚಿತ್ರಗಳಲ್ಲಿ ಅವಕಾಶ ದೊರೆಯಿತು. ‘ಬಾ’ ಎಂಬ ಭಯಾನಕ ಚಿತ್ರದಲ್ಲಿ ಈಕೆಯದು ವಿಶಿಷ್ಠ ಪಾತ್ರ. ಯೋಗರಾಜ್‌ ಭಟ್‌ ನಿರ್ದೇಶನದ ‘ರಂಗ (ಎಸ್ಸೆಸೆಲ್ಸಿ) ’ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಐಟಂ ಸಾಂಗ್‌ನಲ್ಲಿ ಕೂಡ ಪ್ರತಿಭೆ ಮೆರೆದಿದ್ದಾರೆ. ಸದ್ಯಕ್ಕೆ ಮಹತ್ವಾಕಾಂಕ್ಷೆಯ ‘ವಾಲ್ಮೀಕಿ’ ಚಿತ್ರ ಕೈಯಲ್ಲಿದೆ. ಶಿವರಾಜ್‌ ಕುಮಾರ್‌ ಈ ಚಿತ್ರದ ನಾಯಕ.

ಈಕೆ ಪ್ರಾಥಮಿಕ ಶಿಕ್ಷಣ ಪಡೆದದ್ದು ನಾಸಿಕ್‌ನ ಫಿಲೋಮಿನಾ ಶಾಲೆಯಲ್ಲಿ. ತಂದೆ ಆರ್‌ಬಿಐ ಮಿಂಟ್‌ ಕಂಪೆನಿಯ ಉದ್ಯೋಗಿ . ತಂದೆಯ ವರ್ಗಾವಣೆ ಈಕೆಯನ್ನು ಮೈಸೂರಿಗೆ ತಂದಿತು. ನಟನೆಯ ಹುಚ್ಚು ಬೆಂಗಳೂರಿಗೆ ಸೆಳೆಯಿತು. ಜ್ಯೋತಿ ನಿವಾಸದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದಳು.

ಪ್ರಸ್ತುತ ಮುಕ್ತ ವಿಶ್ವವಿದ್ಯಾಲಯವೊಂದರಲ್ಲಿ ಬಿಜಿನೆಸ್‌ ಇಕಾನಾಮಿಕ್ಸ್‌ ಪದವಿ ವಿದ್ಯಾರ್ಥಿನಿ. ನಟನೆಯನ್ನು ಪ್ರವೃತ್ತಿಯಾಗಿ ಆಯ್ದುಕೊಂಡಿರುವ ಮಗಳು ಪುಣೆಯಲ್ಲಿ ಚಲನಚಿತ್ರ ತರಬೇತಿ ಪಡೆಯಬೇಕೆಂಬುದು ತಂದೆಯ ಹಂಬಲ. ಪುಣೆಗೆ ಹೋಗಿ ಕಲಿಯುತ್ತಾ ಕೂತರೆ ಅವಕಾಶಗಳು ಕೈತಪ್ಪುವ ಭಯ ಈಕೆಯದು. ಹಾಗಾಗಿ ಶೂಟಿಂಗ್‌ನಲ್ಲಿಯೇ ಕಲಿಕೆ ಪ್ಲಸ್‌ ಗಳಿಕೆ!

ನಟನೆ ಮಾತ್ರವಲ್ಲ, ಮಾಡಲಿಂಗ್‌ ಕ್ಷೇತ್ರದ ಮಾಂತ್ರಿಕ ರಾಹುಲ್‌ ದೇವ್‌ ಶೆಟ್ಟಿ ವಸ್ತ್ರವಿನ್ಯಾಸಕ್ಕೂ ಈಕೆ ಹೆಜ್ಜೆ ಹಾಕಿದ್ದಾಳೆ. ಸಲ್ಮಾನ್‌ ಖಾನ್‌ಗೆ ನಾಯಕಿಯಾಗಿ ‘ಬೇಖಬರ್‌’ ಚಿತ್ರದಲ್ಲಿ ನಟಿಸುವ ಅವಕಾಶ ದೊರಕಿದೆ. ಈಗ ‘ಬಾಲಿವುಡ್‌’ ನಲ್ಲಿ ಗರಿಗೆದರುವ ಆಸೆ ಮೊಳೆತಿದೆ . ಈ ಅಗಾಧ ನಿರೀಕ್ಷೆ ಹೊಂದಿದ ಕಣ್ಣುಗಳಿಗೆ ಕನವರಿಸಲು ಇಷ್ಟವಿಲ್ಲವಂತೆ. ವಾಸ್ತವವೇ ಅಂತಿಮ ಎಂಬ ನಿಲುವು.

ಈಕೆಯ ಅಚ್ಚುಮೆಚ್ಚಿನ ನಟಿ ಶ್ರಿದೇವಿ. ಶ್ರಿದೇವಿ ತಮ್ಮ ಗ್ಲಾಮರ್‌ ಮತ್ತು ನಟನೆಯಿಂದ ಚಿತ್ರದ ನಾಯಕನನ್ನು ಮೀರಿಸುತ್ತಾರೆ. ಅಂತಹ ನಟಿಯಾಗುವ ಆಸೆ ಈಕೆಯದ್ದು.

ಸಂಜನಾ ಸದ್ಯಕ್ಕೆ ಚಾಲ್ತಿಯಲ್ಲಿರುವುದು ತನ್ನ ಚಿತ್ರಗಳ ಮೂಲಕವಲ್ಲ ; ಹೆಸರು ಬದಲಾವಣೆ ಮೂಲಕ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada