ಸಣ್ಣಗಾದರೆ ಮಾರ್ಕೆಟ್ ಕಳಕೋತೀಯ ಅನ್ನುತ್ತಾರೆ ಡೈರೆಕ್ಟರು
ದೇಹವೇ ಅಂಗಡಿ
ಅಂಗಾಂಗಗಳೇ ಸರಕು ಸಿರಿ
ಯಾವುದು ಬೇಕೊ ಕಣ್ಣು ತುಂಬಿಸಿಕೊಳ್ಳಿರಿ!
ಯಾವ ಕೋನದಿಂದ ನೋಡಿದರೂ ದುಂಡು ದುಂಡಾಗಿ ಕಾಣುವ, ಸೋತ ಮಲಯಾಳಿ ಚಿತ್ರರಂಗವನ್ನು ತನ್ನ 92 ಕೇಜಿಯ ದಢೂತಿ ದೇಹದಿಂದಲೇ ಎತ್ತಿ ನಿಲ್ಲಿಸಿದ ಈ ತೂಕದ ಹೆಣ್ಣು ಮಗಳ ಹೆಸರು ಶಕೀಲಾ.
ಬಿಡುವಿಲ್ಲದ ನಟಿ ಶಕೀಲಾಳ ಸಂಭಾವನೆ ದಿನಕ್ಕೆ ಒಂದು ಲಕ್ಷ . ಆದರೆ, ಆಕೆ ನಟಿಸುವ ಚಿತ್ರದ ಬಜೆಟ್ 15 ರಿಂದ 20 ಲಕ್ಷ ರುಪಾಯಿ ಅಂದರೆ ನಂಬುತ್ತೀರಾ ? ಉಪೇಂದ್ರರ ಎಚ್‌ಟುಒ ಬಜೆಟ್ಟಲ್ಲಿ ಇಪ್ಪತ್ತು ಶಕೀಲಾ ಸಿನಿಮಾ ನಿರ್ಮಿಸಬಹುದು. ಗಳಿಕೆ ಮಾತ್ರ ಯಾವ ಸೂಪರ್ ಹಿಟ್ ಸಿನಿಮಾಗೂ ಕಮ್ಮಿಯಿಲ್ಲ ಅನ್ನುವುದು ತಮಾಷೆಯ ಸಂಗತಿಯಾದರೂ ನಿಜ.
16 ಎಂ.ಎಂ. ಕೆಮರಾ ಹಾಗೂ ಒಂದು ಬಂಗಲೆ - ಇಷ್ಟಿದ್ದರೆ ಸಾಕು, ಶಕೀಲಾ ಸಿನಿಮಾ ಮುಗಿದಂತೆಯೇ. ಆ ಚಿತ್ರದಲ್ಲಿ ಆಕೆಯೇ ನಾಯಕ! ತೆರೆ ತುಂಬ ಅಂಗೋಪಾಂಗ ಆವರಿಸಿಕೊಳ್ಳುವ ಶಕೀಲಾ, ಪ್ರೇಕ್ಷಕರ ಪೂರ್ತಿಯಾಗಿ ಆವರಿಸಿಕೊಳ್ಳುತ್ತಾಳೆ. ಹಾಗೆ ನೋಡಿದರೆ ಆಕೆಗೆ ನಟನೆಯ ಗಂಧವೇನೂ ಇಲ್ಲ. ಇರುವುದೊಂದೇ, ದಢೂತಿ ದೇಹ. ಅದುವೇ ಆಕೆಯ ಬಂಡವಾಳ. ಈ ಪರಿಯ ಶಕೀಲಾ ಮಲಯಾಳಂ ಮಾತ್ರವಲ್ಲ - ತೆಲುಗು, ತಮಿಳುಗಳಲ್ಲೂ ಪಡ್ಡೆಗಳ ಒದ್ದೆ ಕನಸುಗಳ ನಾಯಕಿಯಾದವಳು. ಕನ್ನಡ ಹುಡುಗರ ಕನಸುಗಳಿಗೆ ಈಕೆ ಇನ್ನೂ ಲಗ್ಗೆ ಇಟ್ಟಿಲ್ಲ. ಈಕೆಯನ್ನ ಕನ್ನಡದ ಪರದೆಯ ಮೇಲೆ ಕುಣಿಸುವಷ್ಟು ದುಡ್ಡು ನಮ್ಮ ದುಬಾರಿ ನಿರ್ಮಾಕರಿಗೆ ಇಲ್ಲವಾ ?
ಶಕೀಲಾಗೆ ಶಕೀಲಾಳೆ ಸಾಕ್ಷಿ . ಸಿಲ್ಕ್ ಸ್ಮಿತಾ ಬಿಟ್ಟರೆ ಸೆಕ್ಸಿ ತಾರೆಯರ ಪಟ್ಟಿಯಲ್ಲಿ ಶಕೀಲಾಳಿಗೇ ಅಗ್ರಸ್ಥಾನ. ಆದರೆ, ಸಿಲ್ಕ್ ಕುಣಿತಕ್ಕೆ ಪ್ರಸಿದ್ಧಿ ; ಅಷ್ಟಿಷ್ಟು ನಟನೆಯೂ ಆಕೆಗೆ ಗೊತ್ತಿತ್ತು. ಶಕೀಲಾ ಶೈಲಿಯೇ ಬೇರೆ, ಚಿತ್ರಗಳೂ ಬೇರೆ. ಆಕೆಯ ಸಿನಿಮಾಗಳದು ಪದಗಳ ಹಂಗಿಲ್ಲ ದ ಸಾರ್ವತ್ರಿಕ ದೇಹಭಾಷೆ. ಕಥೆ ಇರುತ್ತದೆ, ಹೆಸರಿಗೆ. ನಾಯಕನೂ ಇರುತ್ತಾನೆ, ಅಗತ್ಯಕ್ಕೆ. ಆದರೆ, ಇಡೀ ಸಿನಿಮಾ ಸುತ್ತುವುದು ಶಕೀಲಾಳ ದೇಹದ ಸುತ್ತ. ಇದು 'ಸಾಫ್ಟ್ ಸೆಕ್ಸ್" ಸಿನಿಮಾಗಳ ರಾಣಿಯೆಂದೇ ಪ್ರಸಿದ್ಧಳಾದ ಶಕೀಲಾಳ ಕಥೆ. ಈಕೆ ಭಾರತದ ಸಿನಿಮಾಕ್ಕೆ ಲೈಂಗಿಕ ಸ್ಪರ್ಶ ನೀಡಿದ ಕೇರಳದ ಕೊಡುಗೆ!
ಶಕೀಲಾಳ ದಂಗು ಬಡಿಸುವ ಬೆಳವಣಿಗೆಯ ಆಳ ಅಗಲ ಅರ್ಥ ಮಾಡಿಕೊಳ್ಳಲು ಮಲಯಾಳಂ ಚಿತ್ರೋದ್ಯಮವನ್ನೆ ಉದಾಹರಣೆಯಾಗಿ ತೆಗೆದುಕೊಳ್ಳಬೇಕು. ಅಲ್ಲೀಗ ಮೂವರು ಸಿನಿ ಸ್ಟಾರ್‌ಗಳು. ಮುಮ್ಮೂಟ್ಟಿ ಹಾಗೂ ಮೋಹನ್‌ಲಾಲ್ ಇಬ್ಬರಾದರೆ, ಶಕೀಲಾ ಮೂರನೆಯ ನಕ್ಷತ್ರ. ಅಲ್ಲಿಗೆ ಕೇರಳದ್ದು 'ತ್ರಿ ಸ್ಟಾರ್" ಸಿನಿ ಉದ್ಯಮ. ಇಲ್ಲೊಂದು ವಿಪರ್ಯಾಸವಿದೆ- ಮುಮ್ಮೂಟ್ಟಿ ಹಾಗೂ ಮೋಹನ್‌ಲಾಲ್ ಸಿನಿಮಾಗಳಿಗೆ ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿದ್ದರೆ, ಶಕೀಲಾ ಸಿನಿಮಾಗಳದು ಕಡಿಮೆ ಬಜೆಟ್. ಬಾಕ್ಸಾಫೀಸ್‌ನಲ್ಲಿ ಮಾತ್ರ ಸರಿಸಮ ಗಳಿಕೆ. ಶಕೀಲಾ ಸ್ಟಾರ್ ಅನ್ನಿಸಿಕೊಳ್ಳಲಿಕ್ಕೆ ಇನ್ನೇನು ಬೇಕು.
ಮುಖ್ಯ ವಾಹಿನಿ ಸಿನಿಮಾಗಳೊಂದಿಗೆ ಸೆಕ್ಸ್ ಸಿನಿಮಾಗಳನ್ನು ನಿಲ್ಲಿಸಿದ್ದು ಶಕೀಲಾ ಅಗ್ಗಳಿಕೆ. ಯಾವುದೋ ಕಿತ್ತು ಹೋದ ತಿಗಣೆಗಳ ಸಾಮ್ರಾಜ್ಯವಾದ ಥಿಯೇರ್‌ಗಳಿಂದ, ಅದ್ದೂರಿ ಥಿಯೇಟರ್‌ಗಳಿಗೆ ಸೆಕ್ಸ್ ಸಿನಿಮಾಗಳು ಪಾದ ಬೆಳೆಸಿದ್ದು ಶಕೀಲಾ ಮಹಾತ್ಮೆಯಿಂದಲೇ. 2001 ನೇ ಇಸವಿಯಲ್ಲಿ ಮಲಯಾಳಿಯಲ್ಲಿ ಬಿಡುಗಡೆಯಾದ 99 ಚಿತ್ರಗಳಲ್ಲಿ ಶಕೀಲಾ ನಟಿಸಿದ್ದ ಚಿತ್ರಗಳ ಸಂಖ್ಯೆ 40. ಇದೇ ಅವಧಿಯಲ್ಲಿ ಮುಮ್ಮೂಟ್ಟಿ 2 ಸಿನಿಮಾಗಳಲ್ಲಿ ನಟಿಸಿದ್ದರೆ, ಮೋಹನ್‌ಲಾಲ್ 4 ಸಿನಿಮಾಗಳಲ್ಲಿ ನಟಿಸಿದ್ದರು. ಶಕೀಲಾ ಕೇರಳೀಯರ ಯಾಪಾಟಿ ಆವರಿಸಿಕೊಂಡಿದ್ದಾಳೆ ನೀವೇ ಊಹಿಸಿ.
ಬಾಕ್ಸಾಫೀಸ್ ಉಡಾಯಿಸಿದ 12 ಲಕ್ಷ ರುಪಾಯಿ ಬಜೆಟ್ಟಿನ ಕಿನ್ನರತುಂಬಿಕಲ್ (ಪ್ರಣಯದ ಪಕ್ಷಿಗಳು) ಶಕೀಲಾಳ ಚಿತ್ರದ ನಂತರ ಶಕೀಲಾ ಹಿಂದಿರುಗಿ ನೋಡಲೇ ಇಲ್ಲ. ಮಲಯಾಳಂನಲ್ಲಿ ಕ್ರೇಜ್ ಕಡಿಮೆಯಾಯಿತೇನೋ ಅನ್ನುವ ಹೊತ್ತಿಗೆ ತೆಲುಗು, ಅಲ್ಲಿಂದ ತಮಿಳು, ಮತ್ತೆ ಮಲಯಾಳಂ, ಹೀಗೆ ಶಕೀಲಾ ಸುತ್ತುತ್ತಲೇ ಇದ್ದಾಳೆ. ತೆಲುಗಿನ ಸೂಪರ್ ಹಿಟ್ 'ನುವ್ವು ನೇನು" ಸಿನಿಮಾದ ತೇಜಾನ ತನ್ನ ಹೊಸ ಚಿತ್ರ 'ಜಯಂ" ನ ಹಾಡೊಂದರಲ್ಲಿ ಕಾಣಿಸಿಕೊಳ್ಳಲು ಶಕೀಲಾಳ ಮನವೊಲಿಸುವುದರಲ್ಲಿ ಯಶಸ್ವಿಯಾಗಿದ್ದಾನೆ. 5 ಕೋಟಿ ರುಪಾಯಿ ಬಜೆಟ್‌ನ ಈ ಚಿತ್ರದಲ್ಲಿ ಶಕೀಲಾಳ ಹಾಡೇ ಹೈಲೈಟು. ಶಕೀಲಾಗೆ ಜಯಂ. ಡಬ್ ಚಿತ್ರಗಳಲ್ಲೇ ಶಕೀಲಾಳ ಕಂಡಿದ್ದ ಆಂಧ್ರ ಬಿಡ್ಡಲಕಿ ಸ್ವಮೇಕ್‌ನಲ್ಲೀಗ ಶಕೀಲಾ!
ಶಕೀಲಾ ಕಾಲ ಮುಗಿದೇ ಹೋಯಿತು, ಆಕೆಯ ಗ್ರಾಫ್ ಇಳಿಯುತ್ತಿದೆ ಎನ್ನುವ ಗುಲ್ಲೊಂದು ಸಣ್ಣಗೆ ಕೇಳಿಸುತ್ತಿದೆ. ಆದರೆ ಮೊನ್ನೆಯಷ್ಟೇ ತನ್ನ ಸೆಕ್ಸಿ ಚಿತ್ರವೊಂದಕ್ಕೆ ಶಕೀಲಾಳ ಬುಕ್ ಮಾಡಲು ಹೋದ ತಮಿಳು ನಿರ್ಮಾಪಕನೊಬ್ಬ ಬರಿಗೈಲಿ ವಾಪಸ್ಸಾದ. ಆಕೆಗೆ ಪುರುಸೊತ್ತಿರಲಿಲ್ಲ , ಕೈಯಲ್ಲಿ 10 ಚಿತ್ರಗಳಿದ್ದವು.
ತನು ಕರಗದವರಲ್ಲಿ ...
'ಉಹ್ಞೂಂ, ಇನ್ನು ಊದಿಕೊಳ್ಳುವಂತಿಲ್ಲ" ಹಾಗಂತ ವೈದ್ಯರು ಶಕೀಲಾಗೆ ಎಚ್ಚರಿಕೆ ನೀಡಿದ್ದಾರೆ. ಕಣ್ಣೋಟದಲ್ಲಿ, ದೇಹದ ಬಳುಕಿನಲ್ಲಿ ಪಡ್ಡೆಗಳ ಗುಂಡಿಗೆ ಡವಗುಟ್ಟಿಸುವ ಆಕೆಗೆ ಡಯಾಬಿಟಿಸ್ಸು. ದೇಹ ಮಾತು ಕೇಳುವುದಿಲ್ಲ . ಆ ಕಾರಣದಿಂದಲೇ ತೂಕ ಇಳಿಸಿಕೊ ಅನ್ನುತ್ತಿದ್ದಾರೆ ಡಾಕ್ಟರು. ಸಣ್ಣಗಾದರೆ ಮಾರ್ಕೆಟ್ ಕಳಕೋತೀಯ ಅನ್ನುತ್ತಾರೆ ಕೆಮರಾ ಕಣ್ಣಿನ ಡೈರೆಕ್ಟರು.
ಶಕೀಲಾ ಪಾಲಿಗೆ ದೇಹವೇ ವರ, ದೇಹವೇ ಶಾಪ. ಅಯ್ಯೋ ಪಾಪ!


Click it and Unblock the Notifications