»   » ಪ್ರೀಪ್ರೇಪ್ರ-ಪ್ರಶಸ್ತಿ ಭಾಜಕರ ಬಹುಪರಾಕ್‌

ಪ್ರೀಪ್ರೇಪ್ರ-ಪ್ರಶಸ್ತಿ ಭಾಜಕರ ಬಹುಪರಾಕ್‌

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಪ್ರಶಸ್ತಿಗಳ ರುಚಿ ಕಂಡಿರುವ ಎಂಟು ಕಲಾವಿದರ ದಂಡು ಕಟ್ಟಿಕೊಡುತ್ತಿರುವ ಪ್ರೀತಿ, ಪ್ರೇಮ, ಪ್ರಣಯ ಕಥಾನಕವಿದು...

ಮೊದಲಿಗೆ ಕವಿತಾ ಲಂಕೇಶ್‌. ಈಕೆಯ ನಿರ್ದೇಶನ ಶಕ್ತಿಗೆ ‘ದೇವೀರಿ’ಯ ವಿದೇಶೀ ಅಭಿಯಾನದ ಸಾಕ್ಷಿಯಾಂದೇ ಸಾಕು. ಚೊಚ್ಚಲ ಚಿತ್ರಕ್ಕೇ ಅಂತರರಾಷ್ಟ್ರೀಯ ಮನ್ನಣೆ ಗಿಟ್ಟಿಸಿಕೊಂಡ ಪ್ರತಿಭಾವಂತೆ ಕವಿತಾ ಈ ಬಾರಿ ಕಮರ್ಷಿಯಲ್‌ ನಿರ್ದೇಶಕಿಯಾಗಿ ‘ಪ್ರೀತಿ ಪ್ರೇಮ ಪ್ರಣಯ’ ಕಟ್ಟಿಕೊಟ್ಟಿದ್ದಾರೆ.

ತಮ್ಮ ನಿರ್ದೇಶನದ ಈ ಚಿತ್ರಕ್ಕೆ ಅವರು ಆರಿಸಿಕೊಂಡ ಕಲಾವಿದರ ಬಳಗದ ಬಹುತೇಕರು ಪ್ರಶಸ್ತಿ ವಿಜೇತರೇ. ಆರು ರಾಜ್ಯ ಪ್ರಶಸ್ತಿಗಳನ್ನು ದೋಚಿಕೊಂಡಿರುವ, ಸುಲಿದ ಬಾಳೆಯ ಹಣ್ಣಿನಂದದಿ ನಟಿಸುವ ಅನಂತನಾಗ್‌, ಮಲೆಯಾಳಿ ಸಿನಿಮಾದಲ್ಲೂ ಪ್ರಶಸ್ತಿಗೆ ಮುತ್ತಿಟ್ಟು ಬಂದಿರುವ ಬಹುಭಾಷಾ ಕಲಾವಿದೆ ಭಾರತಿ ವಿಷ್ಣುವರ್ಧನ್‌, ತಮಿಳು ಮತ್ತು ತೆಲುಗು ಸಿನಿಮಾದಲ್ಲಿ ಪ್ರಶಸ್ತಿ ಬಾಚಿದ ಮೊದಲ ಕನ್ನಡಿಗ ಎಂದು ಹೆಸರಾಗಿರುವ ಪ್ರಕಾಶ್‌ ರೈ ಉರುಫ್‌ ಪ್ರಕಾಶ್‌ ರಾಜ್‌- ಇದು ‘ಪ್ರೀಪ್ರೇಪ್ರ’ದ ದಿಗ್ಗಜ ತಾರಾ ದಂಡು. ಈ ಮೂವರೂ ಕಲಾವಿದರು ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರೆಂಬುದು ಅಗ್ಗಳಿಕೆ.

ಪ್ರಶಸ್ತಿ ವಿಜೇತರ ಪಟ್ಟಿ ಹಾಗೇ ಮುಂದುವರೆಯುತ್ತದೆ. ರಾಜ್ಯ ಪ್ರಶಸ್ತಿ ಪಡೆದು, ಸದ್ಯಕ್ಕೆ ತಣ್ಣಗಿರುವ ಸುಧಾರಾಣಿಗೆ ‘ಪ್ರೀಪ್ರೇಪ್ರ’ ಬ್ರೇಕು ಕೊಟ್ಟೀತಾ ಎಂಬ ನಿರೀಕ್ಷೆಯೂ ಇದೆ. ತಲಾ ಒಂದೊಂದು ರಾಜ್ಯ ಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡಿರುವ, ಗ್ಲ್ಯಾಮರ್‌ ಹಾಗೂ ಪ್ರತಿಭೆಯ ಸಮತೂಕ ತಾರೆಯರಾದ ಅನು ಪ್ರಭಾಕರ್‌ ಹಾಗೂ ಭಾವನಾರ ಪ್ರಣಯದಾಟವನ್ನೂ ಕವಿತಾ ಕಡೆದಿದ್ದಾರೆ !

ಕೊನೆಯದಾಗಿ, ಅರುಣ್‌ ಸಾಗರ್‌. ಹೋದ ವರ್ಷ ಕಲಾ ನಿರ್ದೇಶನಕ್ಕೆ ಪ್ರಶಸ್ತಿ ಪಡೆದಿರುವ ಚೂಪು ಮೂಗಿನ ಈ ಹುಡುಗ ‘ಮರ್ಮ’ ಚಿತ್ರದಲ್ಲಿ ಶಹಬ್ಭಾಸ್‌ಗಿರಿ ಪಡೆದದ್ದೇ ತಡ, ನಟನಾಗಿ ಈಗ ಭಾರೀ ಡಿಮ್ಯಾಂಡು. ‘ಪ್ರೀಪ್ರೇಪ್ರ’ದಲ್ಲಿ ತೂಕದ ಪಾತ್ರ ಮತ್ತು ಕಣ್ಸೆಳೆವ ಕಲಾ ಕುಸುರಿ- ಎರಡೂ ಜವಾಬ್ದಾರಿಯನ್ನು ಅರುಣ್‌ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಅನ್ನೋದು ಕವಿತಾ ಕಾಂಪ್ಲಿಮೆಂಟ್ಸ್‌.

ಒಂದೊಂದು ವಯೋಮಾನಕ್ಕೆ ‘ಪ್ರೀತಿ’ ನಿಲುಕುವ ಪರಿಯನ್ನು ಚಿತ್ರ ಬಿಡಿಸಿ ಬಿಡಿಸಿ ತೋರುತ್ತದೆ. ಮೂರೂ ತಲೆಮಾರಿನ ಮಂದಿ ಕೂತು ನೋಡಬಹುದಾದ ಸಾಂಸಾರಿಕ ಚಿತ್ರ ಎಂಬ ಘೋಷವಾಕ್ಯ ಚಿತ್ರದ ಓಪನಿಂಗ್‌ ಹಸನಾಗಲು ಕಾರಣವಾದರೂ ಆಗಬಹುದು.

ಮೊನ್ನೆ ಬೆಂಗಳೂರಿನ ಬಾದಾಮಿ ಹೌಸ್‌ನಲ್ಲಿ ಎಂಟೂ ಪ್ರಶಸ್ತಿ ವಿಜೇತ ಕಲಾವಿದರು ಹೇಗೆ ಬೇಳೆ ಬೇಯಿಸಿದ್ದಾರೆ ಅಂತ ಪತ್ರಕರ್ತರು ಹಾಗೂ ಅವರ ಕುಟುಂಬದವರು ನೋಡಿದರು. ‘ಪ್ರೀತಿ ಪ್ರೇಮ ಪ್ರಣಯ’ದ ಹೊಸತನದ ಸೊಲ್ಲು ಜೋರಾಗಿತ್ತು. ಅನಂತನಾಗ್‌ ಮೊನಚು, ಪ್ರಕಾಶ್‌ ಖದರು, ಕಬ್ಬಿನ ಜಲ್ಲೆ ಭಾವನಾ ಒನಪು, ವಯಸ್ಸು ತಗ್ಗಿಸಿಕೊಂಡಂತೆ ಕಾಣುವ ಅನು ಪ್ರಭಾಕರ್‌ ಪಲುಕು, ‘ಫ್ರೀಕಿ ಚಕ್ರ’ ಚಿತ್ರದ ಫಂಕಿ ಹುಡುಗ ಸುನಿಲ್‌ ರಾವ್‌ ಟೈಮಿಂಗು, ಕ್ಲೈಮ್ಯಾಕ್ಸಿನಲ್ಲಿ ಭಾರತಿ ವಿಷ್ಣುವರ್ಧನ್‌ ಮಿಂಚಿಂಗೋ ಮಿಂಚಿಂಗು... ಹೀಗೆ ಚಿತ್ರದ ಬಗ್ಗೆ ಕುಂತಲ್ಲೇ ತರಾವರಿ ಕಾಮೆಂಟ್ಸು. ನನ್ನ ಜೀವನದಲ್ಲಿ ಇಂಥ ಕನ್ನಡ ಚಿತ್ರ ನೋಡೇ ಇಲ್ಲ ಅಂತ ವಿದ್ಯಾರ್ಥಿಯಾಬ್ಬ ಕೊಂಡಾಡಿದರೆ, ಎರಡು ತಾಸು ಪೂರಾ ನಾನು ಹಸನ್ಮುಖಿಯಾಗಿದ್ದೆ ಅಂತ ಒಬ್ಬ ಅಜ್ಜ ಬೊಚ್ಚು ಬಾಯಿತುಂಬಾ ನಕ್ಕದ್ದೇ ಫಸ್ಟ್‌ ಬೆಸ್ಟ್‌ ಇಂಪ್ರೆಷನ್‌.

ಸಿನಿಮಾ ಮೆಚ್ಚಿಕೊಂಡವರ ಮಾತಿನ ಹೊಳೆಯಲ್ಲಿ ಕವಿತಾ ಲಂಕೇಶ್‌ ಅಕ್ಷರಶಃ ತೇಲುತ್ತಿದ್ದಾಗಲೇ, ಬೆನ್ನು ಚಳಕೆನ್ನುವಂತಿರುವ ಸಂಭಾಷಣೆ ಮತ್ತು ಸೆಂಟಿಮೆಂಟ್‌ ಸೀನ್‌ಗಳ ತೀವ್ರತೆ ನಿಮ್ಮನ್ನು ಗೆಲ್ಲಿಸುತ್ತದೆ ಅಂತ ವಿಮರ್ಶಕರೊಬ್ಬರು ಬೋನಸ್ಸು ಅಂಕ ಕೊಟ್ಟರು.

ಬಹು ನಿರೀಕ್ಷೆಯ, ಸಂಗೀತಮಯ ಚಿತ್ರ ‘ಥ್ರಿಬ್ಬಲ್‌ ಪಿ’ ಮುಂದಿನ ವಾರ (ಜುಲೈ 4) ತೆರೆ ಕಾಣಲಿದೆ. ಕಣ್ತುಂಬಿಕೊಳ್ಳುವ ಸರತಿ ನಿಮ್ಮದು.

ಸಿನಿಮಾಗೆ ಹೋಗುವ ಮುಂಚೆ ‘ಪಿಪಿಪಿ’ ಬಳಗದ ಪರಿಚಯ ಮಾಡಿಕೊಳ್ಳಿ...

ಕತೆ- ಚಿತ್ರಕತೆ- ಸಂಭಾಷಣೆ- ನಿರ್ದೇಶನ : ಕವಿತಾ ಲಂಕೇಶ್‌
ನಿರ್ಮಾಪಕರು : ಇಂಡೋ ಹಾಲಿವುಡ್‌ ಫಿಲ್ಮ್ಸ್‌ (ರಾಮ್‌ಪ್ರಸಾದ್‌, ಡಾ.ರೇಣುಕಾ ರಾಮಪ್ಪ, ಮನೋಮೂರ್ತಿ, ಸೋಮಶೇಖರ್‌)
ಸಿನಿಮಾಟೋಗ್ರಫಿ : ಎ.ಸಿ.ಮಹೇಂದ್ರನ್‌
ಸಂಗೀತ : ಮನೋಮೂರ್ತಿ
ಸಂಕಲನ : ಎಂ.ಎನ್‌.ಸ್ವಾಮಿ
ಕಲಾ ನಿರ್ದೇಶಕ : ಅರುಣ್‌ ಸಾಗರ್‌
ಕಲಾವಿದರು : ಅನಂತನಾಗ್‌, ಭಾರತಿ ವಿಷ್ಣುವರ್ಧನ್‌, ಪ್ರಕಾಶ್‌ ರೈ, ಸುಧಾರಾಣಿ, ಭಾವನಾ, ಅನು ಪ್ರಭಾಕರ್‌, ಅರುಣ್‌ ಸಾಗರ್‌, ಸುನಿಲ್‌ ರಾವ್‌, ಲೋಕನಾಥ್‌, ಶಿವರಾಂ, ಶೃಂಗೇರಿ ರಾಮಣ್ಣ, ಸಂಪತ್‌ ಕುಮಾರ್‌ ಮೊದಲಾದವರು.

Post your views

ಇವನ್ನೂ ಓದಿ-
ಜೂ.4ಕ್ಕೆ ‘ಪ್ರೀಪ್ರೇಪ್ರ’ ಧ್ವನಿಸುರುಳಿ ಬಿಡುಗಡೆ
ಸಿಂಗಾಪೂರ್‌ ಸುತ್ತಿಬಂದ ‘ಪ್ರೀಪ್ರೇಪ್ರ’ ಟೀಂ
ಪ್ರೀತಿ ಪ್ರೇಮ ಪ್ರಣಯಕ್ಕೆ ಅವಾರ್ಡ್‌ ಬರುತ್ತೆ- ಕವಿತಾ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada