»   » ಇದು ವೀರಾವೇಶವಲ್ಲ, ವೀರೇಶ್‌ರ ಭಾವಾವೇಶ!

ಇದು ವೀರಾವೇಶವಲ್ಲ, ವೀರೇಶ್‌ರ ಭಾವಾವೇಶ!

Subscribe to Filmibeat Kannada
  • ದಟ್ಸ್‌ ಕನ್ನಡ ಸಿನಿಡೆಸ್ಕ್‌
ಕನ್ನಡ ಚಿತ್ರರಂಗದ ಇತಿಹಾಸವನ್ನು ಛಾಯಾಚಿತ್ರಗಳ ಮೂಲಕ ವಿವರಿಸುವ ಪ್ರಯತ್ನಕ್ಕೆ, ಚಿತ್ರಲೋಕ ಡಾಟ್‌ಕಾಂನ ಸಂಪಾದಕ ಕೆ.ಎಂ.ವೀರೇಶ್‌ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿನ ಅವರ ಶ್ರಮ ಫಲಿಸಿದ್ದು, ಆ.13ರಿಂದ 19ರ ವರೆಗೆ ನಗರದಲ್ಲಿ ‘ಚಿತ್ರಲೋಕ ಪ್ರದರ್ಶನ’ವನ್ನು ಆಯೋಜಿಸಿದ್ದಾರೆ.

ಫೋಟೊ ಕ್ಲಿಕ್ಕಿಸುವ ಹವ್ಯಾಸ, ಸಾಧನೆಗೆ ದಾರಿ ಮಾಡಿದ್ದು ನಿಜಕ್ಕೂ ವಿಶೇಷವೇ ಸರಿ. ಏಳು ದಶಕಗಳಲ್ಲಿ ಕನ್ನಡ ಚಿತ್ರರಂಗ ನಡೆದು ಬಂದ ದಾರಿಯನ್ನು ವೀರೇಶ್‌ ಪರಿಣಾಮಕಾರಿಯಾಗಿ ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಖುಷಿ ಹಂಚಿಕೊಳ್ಳಲು ವೀರೇಶ್‌ ಸಿನಿಮಾ ಗಣ್ಯರನ್ನು ಮತ್ತು ಪತ್ರಕರ್ತರನ್ನು ಆಹ್ವಾನಿಸಿದ್ದರು.

ಒಂದು ಭಾಷೆಯ ಸಿನಿಮಾಗಳ ಛಾಯಾಚಿತ್ರಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ ನಿದರ್ಶನ, ಭಾರತೀಯ ಚಿತ್ರರಂಗದಲ್ಲಿಲ್ಲ. ಅಂತಹ ಸಾಧನೆ ಕೈಗೂಡಲು ನೆರವಾದ ವಾರ್ತಾ ಇಲಾಖೆ, ವಜ್ರೇಶ್ವರಿ ಕಂಬೈನ್ಸ್‌, ಸಫಾಯರ್‌ ಮೂವೀಸ್‌, ಡಿ.ವಿ.ಸುಧೀಂದ್ರ, ಸಾ.ರಾ.ಗೋ ವಿಂದ್‌ ಮತ್ತಿತರರನ್ನು ಅವರು ಸ್ಮರಿಸಿದರು.

ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮಾತನಾಡುತ್ತ, ಒಂದು ಸಾವಿರ ಪದ ಹೇಳಲಾರದನ್ನು ಒಂದು ಚಿತ್ರ ಹೇಳುತ್ತದೆ ಎಂಬ ಮಾತಿದೆ. ವೀರೇಶ್‌ ಅವರ ಪ್ರಯತ್ನದಿಂದ ಕನ್ನಡ ಚಿತ್ರರಂಗದ ಇತಿಹಾಸ, ಆಗಿನ ತಂತ್ರಜ್ಞಾನ, ಅಭಿನಯ ಎಲ್ಲವನ್ನೂ ಗಮನಿಸಲು ಮತ್ತು ಕಲಿಯಲು ಸಾಧ್ಯವಾಗಲಿದೆ. ಅವರ ಪ್ರಯತ್ನ ಕಂಡು ನಾನು ನಿಜಕ್ಕೂ ಬೆರಗಾಗಿದ್ದೇನೆ ಎಂದರು.

ಇಂದ್ರಜಿತ್‌ ಲಂಕೇಶ್‌, ಪತ್ರಕರ್ತ ಎಚ್‌. ಗಿರೀಶ್‌ ರಾವ್‌(ಜೋಗಿ), ಆನಂದ್‌ ಆಡಿಯೋದ ಮೋಹನ್‌ , ರೀಜಾಯ್ಸ್‌ ಆಡಿಡೋರಿಯಂನ ಮೃತ್ಯುಂಜಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಗಸ್ಟ್‌ನಲ್ಲಿ ‘ಚಿತ್ರಲೋಕ’ ಪ್ರದರ್ಶನ :

1934ರ ಮೊದಲ ಚಿತ್ರ ಸತಿಸುಲೋಚನಾದಿಂದ ಹಿಡಿದು ಈವರೆಗೆ 2550 ಚಿತ್ರಗಳು ತೆರೆಕಂಡಿವೆ. ಅವುಗಳಲ್ಲಿ 30 ಚಿತ್ರಗಳ ಹೊರತುಪಡಿಸಿ, ಉಳಿದೆಲ್ಲ ಚಿತ್ರಗಳ ಛಾಯಾಚಿತ್ರ ಮತ್ತು ಪೂರಕ ಮಾಹಿತಿಯನ್ನು ವೀರೇಶ್‌ ಸಂಗ್ರಹಿಸಿದ್ದಾರೆ. ಕಪ್ಪುಬಿಳುಪಿನಿಂದ ವರ್ಣಚಿತ್ರಗಳ ವರೆಗಿನ ಸಿನಿರಂಗದ ಪಯಣವನ್ನು, ರಾಜ್‌ಕುಮಾರ್‌ ಅಪರೂಪದ ಫೋಟೊಗಳನ್ನು ಅವರು ಸಂಗ್ರಹಿಸಿದ್ದಾರೆ. ತಮ್ಮ ಸಂಗ್ರಹದ 50ಸಾವಿರ ಫೋಟೊಗಳಲ್ಲಿ ಆಯ್ದ 3000ಚಿತ್ರಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲು ವೀರೇಶ್‌ ನಿರ್ಧರಿಸಿದ್ದಾರೆ.

ಶಿವಾನಂದ ವೃತ್ತದ ಬಳಿಯ ಚಲನಚಿತ್ರ ವಾಣಿಜ್ಯ ಮಂಡಳಿ ಸಭಾಂಗಣದಲ್ಲಿ ಪ್ರದರ್ಶನವನ್ನು ಆ.13ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಈ ಸಮಾರಂಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌, ಮಂಡಳಿ ಅಧ್ಯಕ್ಷ ಗಂಗರಾಜು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಆ.13ರಂದು ಗಣ್ಯರಿಗೆ ಮತ್ತು ಆ.14ರಿಂದ ಆರು ದಿನಗಳ ಕಾಲ ಸಾರ್ವಜನಿಕರಿಗೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ವಿಶ್ವಕನ್ನಡ ಸಮ್ಮೇಳನದಲ್ಲಿ ಸಿ.ಡಿ. ಬಿಡುಗಡೆ :

ವೀರೇಶ್‌ ಸಂಗ್ರಹಿಸಿರುವ ಸಿನಿಮಾಗಳು ಮತ್ತು ರಾಜ್‌ರ ಅಪರೂಪದ 2500 ಚಿತ್ರಗಳ ಸಿ.ಡಿ.ಯನ್ನು ಆನಂದ್‌ ಆಡಿಯೋ ಮಾರುಕಟ್ಟೆಗೆ ತರುತ್ತಿದೆ. ಸೆಪ್ಟೆಂಬರ್‌ನಲ್ಲಿ ಅಮೆರಿಕಾದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಿ.ಡಿ. ಬಿಡುಗಡೆಗೊಳ್ಳಲಿದೆ.

ಈ ಸಿ.ಡಿ.ಯಲ್ಲಿರುವ ಒಂದೊಂದು ಫೋಟೊವನ್ನು 15ಸೆಕೆಂಡ್‌ನಂತೆ ವೀಕ್ಷಿಸಿದರೂ, 2500 ಫೋಟೊಗಳನ್ನು ನೋಡಲು, 14ಗಂಟೆ ಬೇಕಾಗುತ್ತದೆ!

ಇಂತಹ ಸಾಧನೆ ಮಾಡಿದ ವೀರೇಶ್‌ರನ್ನು ಅಭಿನಂದಿಸಲು, 9341257135 ಸಂಖ್ಯೆಗೆ ಕರೆ ಮಾಡಿ.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada