»   » ತಾರೆಗಳ ಚಪ್ಪರದಲ್ಲಿ ಕಾಡಬೆಳದಿಂಗಳ ತಂಪು!

ತಾರೆಗಳ ಚಪ್ಪರದಲ್ಲಿ ಕಾಡಬೆಳದಿಂಗಳ ತಂಪು!

Posted By: Staff
Subscribe to Filmibeat Kannada

ಸ್ಯಾಂಡಲ್ ವುಡ್ ಪ್ರಕಾಶಿಸುತ್ತಿದೆಯೋ ಇಲ್ಲವೋ ಆ ಮಾತು ಬೇರೆ. ಆದರೆ ಅಲ್ಲಂತೂ ನಗೆ ಬೆಳದಿಂಗಳಿತ್ತು. ಕನ್ನಡ ಚಿತ್ರರಂಗದ ರಾಜ್ಯ ಪ್ರಶಸ್ತಿ ವಿಜೇತರು, ಚಿತ್ರರಂಗದ ಪ್ರಮುಖರು ಒಂದೆಡೆ ಸೇರಿದ್ದರು. ಇಂತಹ ದೃಶ್ಯವನ್ನು ಪತ್ರಕರ್ತರು ಕಂಡು ಬಹಳ ದಿನಗಳೇ ಆಗಿತ್ತು. ಸದಾ ಹೀಗೆ ಇದ್ದರೇ ಎಷ್ಟು ಚೆನ್ನ?

ಇದು ಪ್ರಚಾರಕ್ಕಾಗಿ ಅಲ್ಲ, ಹಣ ಸಂಪಾದನೆಗಾಗಿ ಅಲ್ಲ, ತೆವಲಿಗೋಸ್ಕರ ಅಲ್ಲ, ದುಡ್ಡುಕೊಳೆಯುತ್ತಾ ಬಿದ್ದಿದೆ ಅಂತ ಅಲ್ಲವೇ ಅಲ್ಲ. ನಾವು ಐದು ಜನ ಸ್ನೇಹಿತರು ಕಲೆತು ಆತ್ಮಸಂತೋಷಕ್ಕಾಗಿ ಒಂದು ಒಳ್ಳೆ ಸಿನಿಮಾ ಮಾಡುವ ಎಂದು ಅಂದುಕೊಂಡೆವು. ಅದು ಹೇಗೋ ಸಾಕಾರವಾಯ್ತು. ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ ಎಂದು ತೀರ್ಪುಗಾರರರು ಮೆಚ್ಚಿದರು. ಪ್ರಶಸ್ತಿಯೂ ಬಂದುಬಿಡ್ತು. ನಮ್ಮ ಸಂತೋಷಕ್ಕೆ ಪಾರವೇ ಇಲ್ಲ. ಹೀಗೆಂದ ಕಾಡಬೆಳದಿಂಗಳು ತಂಡ ಪುಳಕಗೊಂಡಿತ್ತು.

ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಮತ್ತು ಬೆಳದಿಂಗಳೂಟಕ್ಕೆ ನೀವೆಲ್ಲ ಬನ್ನಿ ಅಂತ ಬೆಂಗಳೂರು ಕಂಪನಿಯ ವೀರೇಶ್, ಜೋಗಿ, ಉದಯ ಮರಕಿಣಿ, ಸಿದ್ದಲಿಂಗಯ್ಯ, ಲಿಂಗದೇವರು, ರಾಮಚಂದ್ರ ಮತ್ತಿತರರು ಆಮಂತ್ರಣ ಕೊಟ್ಟಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಕ್ಲಬ್‌ ಹೌಸ್‌ನಲ್ಲಿ ಜುಲೈ 23ರ ಸೋಮವಾರ ಸಂಜೆ ಆತ್ಮೀಯ ಸಮಾರಂಭ ಇಟ್ಟುಕೊಂಡಿದ್ದರು.

ಅದು ಕೇವಲ ಸಿನಿಮಾ ಪಾರ್ಟಿ ಆಗಿರಲಿಲ್ಲ. 2006ನೇ ಸಾಲಿನಲ್ಲಿ ರಾಜ್ಯಪ್ರಶಸ್ತಿ ಗೆದ್ದುಕೊಂಡ ಎಲ್ಲ ಸಿನಿಮಾ, ಎಲ್ಲ ಕಲಾವಿದ, ಎಲ್ಲ ತಂತ್ರಜ್ಞರನ್ನು ಸನ್ಮಾನಿಸುವ ಸಂಜೆ, ತಾರೆಗಳ ಆಗಮನದಿಂದ ರಂಗೇರಿತ್ತು. ಪ್ರಶಸ್ತಿಯ ಖುಷಿ- ಬಿಸಿ ಆರುವ ಮುನ್ನ ಕನ್ನಡ ಸಿನಿಮಾ ಬಳಗದವರು ಕಲೆತು ಸಂತಸ ಹಂಚಿಕೊಂಡರೆ ಚೆನ್ನ ಎಂದು ಕಾಡಬೆಳದಿಂಗಳ ತಂಡ ಅಂದುಕೊಂಡ ಹಾಗೇನೇ ,ಸನ್ಮಾನ ಸಮಾರಂಭ ಅಚ್ಚುಕಟ್ಟಾಗಿ ನಡೆಯಿತು.

ಒಂದು ಒಳ್ಳೆ ಸಿನಿಮಾ ಬಂದರೆ ಜತೆಗೆ ಒಂದು ಕೆಟ್ಟ ಸಿನಿಮಾನೂ ಬರತ್ತೆ. ಇವತ್ತು ಒಳ್ಳೆಯ ಸಿನಿಮಾ ಬಗ್ಗೆ ಮಾತಾಡುವ ಸಮಯ ಎಂದರು ಪ್ರಸ್ತಕ್ತ ಸಾಲಿನ ತೀರ್ಪುಗಾರ ಮಂಡಳಿಯ ಅಧ್ಯಕ್ಷರಾಗಿ ಕನ್ನಡ ಸಿನಿಮಾಗಳ ಮೌಲ್ಯಮಾಪನ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್‌.

ಈ ಬಾರಿ ಪ್ರಶಸ್ತಿ ತೀರ್ಮಾನ ಮಾಡುವುದು ಕಷ್ಟವಾಯಿತು. ಯಾಕೆಂದರೆ ಒಳ್ಳೆ ಸಿನಿಮಾ, ಒಳ್ಳೆ ಅಭಿನಯ, ತಾಂತ್ರಿಕತೆಯ ಕೈಚಳಕದಲ್ಲಿ ಈ ಬಾರಿ ತುಂಬಾ ಪೈಪೋಟಿಯಿತ್ತು. ಯಾವುದೋ ಒಂದು ಚಿತ್ರಕ್ಕೆ ಪ್ರಶಸ್ತಿ ಕೊಟ್ಟರಾಯಿತು ಎನ್ನುವಂಥ ಸ್ಥಿತಿಗಿಂತ ಸ್ಪರ್ಧಾತ್ಮಕ ವಾತಾವರಣದಲ್ಲಿ ಒಳ್ಳೊಳ್ಳೆ ಚಿತ್ರಗಳನ್ನು ನೋಡಿ ಬೆಲೆಕಟ್ಟುವ ಕಾಯಕ ಲೇಸು. ಇಂಥ ಕಷ್ಟಗಳು ತೀರ್ಪುಕೊಡುವ ಎಲ್ಲ ಸಮಿತಿಗಳಿಗೂ ಬರಲಿ ಎಂದು ನಾಗತಿಹಳ್ಳಿ ಆಶಿಸಿದರು.

ಅದರಲ್ಲೂ ಅತ್ಯುತ್ತಮ ನಟ ಪ್ರಶಸ್ತಿ ವಿಜಯ್ ಮತ್ತು ಗಣೇಶ್ ರಲ್ಲಿ ಯಾರಿಗೆ ಸಲ್ಲಬೇಕು ಅನ್ನುವ ಜಿಜ್ಞಾಸೆ ಆಯ್ಕೆ ಸಮಿತಿ ಮುಂದೆ ಇತ್ತು.ಯಾರಿಗಾದರೂ ಒಬ್ಬರಿಗೆ ಕೊಡುವ ಅನಿವಾರ್ಯತೆ ಉಂಟಾಗಿ, ಪ್ರಶಸ್ತಿ ವಿಜಯ್ ಪಾಲಾಯಿತು. ಇಬ್ಬರೂ ಒಳ್ಳೆ ನಟರೇ, ಇದರಲ್ಲಿ ಎರಡು ಮಾತಿಲ್ಲ. ಪ್ರಶಸ್ತಿ ಪಡೆಯದ ಇತರೆ ನಟರನ್ನು ನಾವು ಕಡಿಮೆ ಅಂದಾಜು ಮಾಡಬೇಕಿಲ್ಲ ಎಂದು ನಾಗತಿಹಳ್ಳಿ ಹೇಳಿದರು.

ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಮುಂಗಾರು ಮಳೆಚಿತ್ರದ ನಿರ್ಮಾಪಕ ಕೃಷ್ಣಪ್ಪ ತುಂಬಾ ಅಪಾಲಜಿಟಿಕ್‌ ಆಗಿ ಮಾತನಾಡಿದರು. ನಾನೇ ನಿಮ್ಮನ್ನೆಲ್ಲ ಕರೆದು ಪಾರ್ಟಿ ಮಾಡಬೇಕಾಗಿತ್ತು. ಸಮಯದ ಅಭಾವದಿಂದಾಗಿ ಮುಹೂರ್ತ ಕೂಡಿಬರಲಿಲ್ಲ. ಅಷ್ಟರೊಳಗೆ ಸಣ್ಣ ಬಜೆಟ್ಟಿನ, ವಿಶಾಲ ಹೃದಯದ ಕಾಡಬೆಳದಿಂಗಳು ತಂಡ ಎಲ್ಲರನ್ನೂ ಅಭಿನಂದಿಸುವ ಸಮಾರಂಭ ಏರ್ಪಡಿಸಿರುವುದು ನೋಡಿ ತಮಗೆ ನಾಚಿಕೆ ಆಯಿತು ಎಂದರು. ಇಷ್ಟರಲ್ಲೆ ಮುಂಗಾರು ಮಳೆ ವಿಜಯೋತ್ಸವ ಪಾರ್ಟಿ ಕರೆಯುವ ಇಂಗಿತ ವ್ಯಕ್ತಪಡಿಸಿದರು.

ಕಳೆದ ಸಲ ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿದ್ದ ಟಿ.ಎನ್.ಸೀತಾರಾಂ, ಗಾಯಕಿ ಬಿ.ಕೆ. ಸುಮಿತ್ರ, ವಾರ್ತಾ ಇಲಾಖೆಯ ರವೀಂದ್ರನಾಥ್‌ ಟ್ಯಾಗೋರ್‌, ದುನಿಯಾ ನಿರ್ಮಾಪಕ ಸಿದ್ಧಲಿಂಗಯ್ಯ, ಸೈನೈಡ್ ನಿರ್ದೇಶಕ ರಮೇಶ್‌, ಚೆಂದದ ಸಿನಿಮಾ ಹಾಡು ಬರೆದು ಗೆದ್ದ ಕತೆಕಾರ ಜಯಂತ್‌ ಕಾಯ್ಕಿಣಿ, ಮಾಸ್ಟರ್‌ ರೇವಂತ್‌, ನಿರ್ಮಾಪಕ ಮತ್ತು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಗಂಗರಾಜು, ನಿರ್ಮಾಪಕ ಸಾ.ರಾ.ಗೋವಿಂದ್, ಕಾಡಬೆಳದಿಂಗಳು ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಜೀವತುಂಬಿದ ಲೋಕನಾಥ್ ಅಂಕಲ್, ಜೀವಮಾನ ಸಾಧನೆಯ ಪ್ರಶಸ್ತಿ ಪಡೆದ ಕನ್ನಡಿಗರ ಪ್ರೀತಿಯ ಕುಳ್ಳ ದ್ವಾರಕೀಶ್, ದುನಿಯಾ ನಿರ್ಮಾಪಕ ಸಿದ್ಧರಾಜು, ನಿರ್ದೇಶಕ ಸೂರಿ, ದಾಟು ಚಿತ್ರದ ನಿರ್ಮಾಪಕರಾದ ಶಶಿ,ಶ್ರೀನಾಥ್, ವೆಂಕಟೇಶ್, ಮುಂಗಾರು ಮಳೆ ಛಾಯಾಗ್ರಾಹಕ ಕೃಷ್ಣ,ಜನಪದ ಚಿತ್ರದಲ್ಲಿ ಹಾಡಿ ಪ್ರಶಸ್ತಿ ಪಡೆದ ಹಿನ್ನೆಲೆ ಗಾಯಕ ಹೇಮಂತ್, ಪೋಷಕ ನಟಿ ಪ್ರಶಸ್ತಿ ಪಡೆದ ನೀತಾ, ಜಯಮಾಲಾ, ಇಂದ್ರಜಿತ್ ಲಂಕೇಶ್.. -ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಇವರೆಲ್ಲರೂ ಒಂದೇ ವೇದಿಕೆ ಮೇಲೆ ಸೇರಿದ್ದು, ಸೇರಿ ನಲಿದದ್ದು, ಇನ್ನಷ್ಟು ಒಳ್ಳೆ ಚಿತ್ರ ನೀಡುವ ಸಂಕಲ್ಪ ಮಾಡಿದ್ದು ಇವೆಲ್ಲವೂ ಒಳ್ಳೆಯದೇ..

English summary
Kaada Beladingalu team including Viresh, Jogi, Ramachandra, Uday Marakini, Sidddalingaiah and Lingadevaru felicitated the State Cine Awardees on 23rd July. The programme was held at Chinnaswamy stadiums club house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada