»   » ಕನ್ನಡ ಚಿತ್ರನಟಿ ವಿಜಯಲಕ್ಷ್ಮಿ ಚೆನ್ನೈನಲ್ಲಿ ಆತ್ಮಹತ್ಯೆಗೆ ಪ್ರಯತ್ನ

ಕನ್ನಡ ಚಿತ್ರನಟಿ ವಿಜಯಲಕ್ಷ್ಮಿ ಚೆನ್ನೈನಲ್ಲಿ ಆತ್ಮಹತ್ಯೆಗೆ ಪ್ರಯತ್ನ

Posted By:
Subscribe to Filmibeat Kannada

ಚೆನ್ನೈ: ಕನ್ನಡ ಚಿತ್ರನಟಿ ಮತ್ತು ಟಿವಿ ನಿರೂಪಕಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಇಲ್ಲಿರುವ ತಮ್ಮ ಅಪಾರ್ಟ್‌ಮೆಂಟಿನಲ್ಲಿ ಬುಧವಾರ ರಾತ್ರಿ ಅತಿಯಾಗಿ ನಿದ್ರೆಮಾತ್ರೆಗಳನ್ನು ಸೇವಿಸಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾರೆ.

ಕನ್ನಡ, ತಮಿಳು ಚಿತ್ರಗಳಲ್ಲಿ ಅವಕಾಶಗಳು ಕಡಿಮೆಯಾಗಿದ್ದರೂ ಉದಯ ಟಿವಿ ಕಾರ್ಯಕ್ರಮದ ನಿರೂಪಕಿಯಾಗಿ ಗಮನ ಸೆಳೆದಿದ್ದ ವಿಜಯಲಕ್ಷ್ಮಿ ಇದ್ದಕ್ಕಿದ್ದಂತೆ ಇಂಥ ಕಾರ್ಯಕ್ಕೆ ಕೈಹಾಕಿದ್ದು ಅನೇಕ ಊಹಾಪೋಹಗಳಿಗೆ ದಾರಿಮಾಡಿಕೊಟ್ಟಿದೆ.

ಅವರು ನಡೆಸಿಕೊಡುತ್ತಿದ್ದ ‘ಬಂಗಾರದ ಬೇಟೆ’ ಕಾರ್ಯಕ್ರಮದ ನಿರ್ದೇಶಕ ರಮೇಶ್‌ ಇತ್ತೀಚೆಗೆ ಅವರನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ಪೀಡಿಸುತ್ತಿದ್ದರೆಂದು ಗಾಳಿಮಾತು ಹಬ್ಬಿದೆ. ಪ್ರೇಮಯಾಚನೆಯನ್ನು ಅವರು ತಿರಸ್ಕರಿಸಿದ್ದರು. ಇದೇ ವಿಷಯಕ್ಕೆ ಕುರಿತಂತೆ ಎಲ್ಲರೆದುರಿಗೇ ವಿಜಯಲಕ್ಷ್ಮಿಯನ್ನು ಅವಮಾನಿಸಿದ್ದಕ್ಕಾಗಿ ನಟಿ ನೊಂದು ಆತ್ಮಹತ್ಯೆಗೆ ಯತ್ನಿಸಿರಬಹುದೆಂದು ತಿಳಿದುಬಂದಿದೆ.

ಬೆಳಿಗ್ಗೆ ಎಲ್ಲರೂ ಎಚ್ಚರಗೊಂಡರೂ ವಿಜಯಲಕ್ಷ್ಮಿ ಬೇಗನೆ ಎದ್ದಿರಲಿಲ್ಲ. ಅವರು ಅತಿಯಾಗಿ ನಿದ್ರೆಮಾತ್ರೆ ಸೇವಿಸಿದ್ದು ತಿಳಿದು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರನೀಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಗಮಂಡಲ, ಜೋಡಿಹಕ್ಕಿ, ಸ್ವಸ್ತಿಕ್‌, ಹಬ್ಬ ಮುಂತಾದ ಚಿತ್ರಗಳಿಂದ ಕನ್ನಡ ಚಿತ್ರರಸಿಕರ ಗಮನ ಸೆಳೆದಿದ್ದ ವಿಜಯಲಕ್ಷ್ಮಿ ಇತ್ತೀಚೆಗೆ ತಮಿಳು ಚಿತ್ರರಂಗಕ್ಕೆ ಹಾರಿದ್ದರು.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada