»   » ಉಳಿದವರು ಇರಲಿ; ನಾವೂ ಬೆಳೆಯಲಿ

ಉಳಿದವರು ಇರಲಿ; ನಾವೂ ಬೆಳೆಯಲಿ

Subscribe to Filmibeat Kannada


ನಾವು ನೋಡಿ ಪರಭಾಷೆಯವರು ಬಂದರೆ ಅವರಿಗೆ ಕನ್ನಡ ಕಲಿಸುತ್ತೇವೆ. ಕೆಲಸ ಕೊಡಿಸುತ್ತೇವೆ. ಕೊನೆಗೆ ನಾವು ನಿಂತ ಜಾಗವನ್ನು ಬಿಟ್ಟು ತ್ಯಾಗಮಯಿಗಳಾಗುತ್ತೇವೆ? ಆದರೆ ಅವರು..


ಕನ್ನಡ ಚಿತ್ರರಂಗಕ್ಕೆ ಸಮಸ್ಯೆಗಳು ಹೊಸದಲ್ಲ. ಹಿಂದಿನಿಂದಲೂ ಅವುಗಳನ್ನು ಎದುರು ಹಾಕಿಕೊಂಡು, ಹೋರಾಟ ಮಾಡುತ್ತಲೇ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದಿದೆ. ಅಂದರೆ ಆ ಮಟ್ಟಿಗೆ ಎಲ್ಲ ಸಮಸ್ಯೆಗಳನ್ನು, ನೋವುನಲಿವುಗಳನ್ನು ಜೀರ್ಣಿಸಿಕೊಳ್ಳುವ ತಾಕತ್ತು ಅದು ಗಳಿಸಿಕೊಂಡಿದೆ ಎಂದರ್ಥ.

ನಾವು ಅತಿ ಉದಾರವಾದಿಗಳಾಗಿರುವ ತನಕ ಹೀಗೆ ಮುಂದುವರಿಯುತ್ತಿರುತ್ತದೆ. ಬಹಳ ಬೇಗ ಬೇರೆಯವರ ಪ್ರಭಾವಕ್ಕೆ ಒಳಗಾಗ್ತೀವಿ. ಆದರೆ, ಅವ್ರು ನಮ್ಮ ಪ್ರಭಾವಕ್ಕೆ ಒಳಗಾಗೋದಿಲ್ಲ. ಬೇರೆಯವರಿಗೆ ಕರೆದು ಮಣೆ ಹಾಕ್ತೀವಿ, ಜಾಗ ಕೊಡ್ತೀವಿ, ಕೊನೆಗೆ ನಮ್ಮ ಸ್ಥಾನ ಬಿಟ್ಟು ಕೊಡ್ತೀವಿ. ಈ ಸೌಹಾರ್ದತೆ, ಉದಾರತನ ಸಮಸ್ತ ಕನ್ನಡಿಗರ ಹೆಮ್ಮೆ. ಅದು ನೆಲ, ಸಂಸ್ಕೃತಿ ಬಳುವಳಿ. ನಾಡಿನ ಜನರ ಲಕ್ಷಣ ಎಂದರೆ ತಪ್ಪಾಗಲಾರದು.

ನಮ್ಮವರು ಎಷ್ಟು ಉದಾರಿಗಳು ಎಂದರೆ ಹೊರಗಡೆಯವರಿಗೆ ತಮ್ಮದೆಲ್ಲವನ್ನೂ ಬಾಗಿನಕೊಡುವ ದೊಡ್ಡ ಹೃದಯ ನಮ್ಮವರಿಗಿದೆ. ದುರಂತವೆಂದರೆ ನಮ್ಮವರಷ್ಟೇ ಸಹೃದಯತೆ ಅವರಿಗಿರುವುದಿಲ್ಲ. ನಾವು ನೋಡಿ ಪರಭಾಷೆಯವರು ಬಂದರೆ ಅವರಿಗೆ ಕಸ್ತೂರಿ ಕನ್ನಡ ಕಲಿಸುತ್ತೇವೆ. ಕೆಲಸ ಕೊಡಿಸುತ್ತೇವೆ. ಕೊನೆಗೆ ನಾವು ನಿಂತ ಜಾಗವನ್ನು ಬಿಟ್ಟು ತ್ಯಾಗಮಯಿಗಳಾಗುತ್ತೇವೆ? ಆದರೆ ಅವರು..

ಕೇವಲ ತಮ್ಮ ಅವಶ್ಯಕತೆ, ಅನಿವಾರ್ಯತೆಗೆ ತಕ್ಕಂತೆ ಭಾಷೆ, ಸಂಸ್ಕೃತಿಗೆ ಒಗ್ಗಿಕೊಂಡಿರುತ್ತಾರೆ. ನಮ್ಮಂತೆ ಸಂಪೂರ್ಣವಾಗಿ ತೆರೆದುಕೊಂಡಿರುವುದಿಲ್ಲ. ಜತೆಗೆ, ಅವರು ಒಬ್ಬರೆ ಬರುವುದಿಲ್ಲ. ತಮ್ಮತನವನ್ನೆಲ್ಲಾ ಇಲ್ಲಿ ಬಿತ್ತಿ ನಮ್ಮ ಸಹೃದಯತೆಯ ಭೂಮಿಯಲ್ಲಿ ಹಸನಾದ ಕೃಷಿ ಮಾಡುತ್ತಾರೆ. ಸದ್ಬಳಕೆ ಮಾಡಿಕೊಳಳುತ್ತಾರೆ. ನಾವು ಬೀದಿಗೆ ಬಂದು ಬೇರೆಯವರಿಗೆ ಸೂರು ಕೊಡುವ ನಮ್ಮ ಗುಣ ಹಲವಾರು ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ನಾವು ಅಲ್ಲಿಗೆ ಹೋದರೆ, ಅವರ ಭಾಷೆ, ಸಂಸ್ಕೃತಿಯನ್ನು ನಮ್ಮದೇ ಎನ್ನುವಷ್ಟು ಪ್ರೀತಿಸುತ್ತೇವೆ. ಇವೆಲ್ಲ ಇಂದಿನ ಚಿತ್ರರಂಗದ ಸಮಸ್ಯೆಗಳ ಹಿಂದಿನ ನೆರಳುಗಳು.

ಬೇರೆಯವರ ಕರೆಸಿ, ಕುಣಿಸಿ ಮೆರೆಸಿ ಗೌರವಿಸುತ್ತಾರೆ. ನಮ್ಮಲ್ಲೇ ಇಂಥ ಪ್ರತಿಭೆಗಳಿವೆ. ಇವರೂ ಬಂದ ಅತಿಥಿಗಳನ್ನು ಅನುಕರಿಸುವುದರಿಂದ ನಮ್ಮತನ ಕಳೆದು ಹೋಗುವ ಅಪಾಯವಿದೆ. ಕೊನೆಗೆ ನಾವು ಚಿಕ್ಕಪುಟ್ಟ ವಿಷಯಗಳಿಗೂ/ಸಮಸ್ಯೆಗಳಿಗೂ ಹೋರಾಟ ಮಾಡಬೇಕಾಗುತ್ತದೆ. ಇದನ್ನು ತಿಳಿಹೇಳುವ ಕಾರ್ಯ ಮಾಧ್ಯಮಗಳು ಮಾಡಬೇಕು. ಇವೆಲ್ಲಾ ಕೇವಲ ಭಾಷಣಗಳಿಂದ,ಹೇಳಿಕೆಗಳಿಂದ ಆಗುವ ಕೆಲಸವಲ್ಲ. ಚಿತ್ರರಂಗದ ಹಲವು ಸೂಕ್ಷ್ಮ ವಿಚಾರಗಳನ್ನು ಅರಿತು ದೃಢ ನಿರ್ಧಾರ ಕೈಗೊಳ್ಳಬೇಕು, ಹೆಜ್ಜೆಗಳನ್ನು ಇಡಬೇಕು. ನಮ್ಮ ಸ್ವಂತ ಇಚ್ಛಾಶಕ್ತಿಯಿಂದ ಆಗಬೇಕು.

ಹಾಗಂತ, ಪರಭಾಷೆ ಕಲಿಕೆ ತಪ್ಪು ಅಂತಲ್ಲ. ಭಾಷೆ ಕಲಿಕೆ ಅನಿವಾರ್ಯ ಇರುವುದರಿಂದ ಅವುಗಳ ಕಲಿಕೆ ಅಗತ್ಯ. ಅವುಗಳನ್ನು ಕಲಿತಷ್ಟೇ ಆಸಕ್ತಿ ನಮ್ಮ ಭಾಷೆಯನ್ನು ಕಾಪಾಡುವುದರಲ್ಲೂ ಇರಬೇಕು. ತುತ್ತು ಉಣಿಸಿದ ತಾಯಿ;ಮಾತು ಕಲಿಸಿದ ಭಾಷೆಯನ್ನು ನಾವು ಮರೆಯಬಾರದು. ಬೇರೆಯವರು ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಯಾವ ಮಾರ್ಗ ಹಾಕಿಕೊಂಡಿದ್ದಾರೆ ಎಂಬುದನ್ನು ಗಮನಿಸಬೇಕು. ಇವೆಲ್ಲ ಸಾಧ್ಯವಾಗುವುದು ಶಿಕ್ಷಣ, ವ್ಯವಸ್ಥಿತವಾದ ಆಡಳಿತದಿಂದ ಮಾತ್ರ.

ಹೊಸ ಪ್ರತಿಭೆಗಳು ಹೊಸ ನೀರಿನಂತೆ. ಮೊದಲು ಅವಕಾಶ ಕೊಡಬೇಕು. ಮಾಡಿದ ತಪ್ಪನ್ನು ತಿಳಿಸಿಕೊಡಬೇಕು. ಆಮೇಲೆ ಅವರನ್ನು ಟೀಕಿಸಬೇಕು. ಮೊದಲ ಪ್ರಯತ್ನದಲ್ಲೇ ಟೀಕೆ ಮಾಡಿದರೆ ಅವರಿಗೆ ಉತ್ಸಾಹ ಕಡಿಮೆಯಾಗುತ್ತದೆ.

ಸಿನೆಮಾ ಎನ್ನುವುದು ರೇಸ್ ಇದ್ದಾಗೆ. ಸ್ಪರ್ಧೆಯಲ್ಲಿ ಯಶಸ್ಸು ಕೆಲವರಿಗೆ ಮಾತ್ರ. ಚಿತ್ರ ಮಾಡಿದವರೆಲ್ಲರೂ ಅದು ಬೇಕು ಎಂದು ಕೇಳುವುದು ಭ್ರಮೆಯಾಗುತ್ತದೆ. ಬೆಳಕಲ್ಲಿ ಶೂಟ್ ಮಾಡಿ, ಕತ್ತಲಲ್ಲಿ ಪ್ರದರ್ಶನ ಮಾಡೋ ಚಿತ್ರದ ಗೆಲುವಿಗೆ ತಾಳ್ಮೆ ಬೇಕು. ವೃತ್ತಿಯಲ್ಲಿ ಸಂತೋಷ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನ, ಪ್ರಯೋಗಗಳಿಂದ ಉತ್ತಮ ಫಲಿತಾಂಶ(ಗೆಲುವು)ಪಡೆಯಲು ಸಾಧ್ಯ.

ಜೈ ಭುವನೇಶ್ವರಿ...

(ಸ್ನೇಹ ಸೇತು : ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada