»   » ಬುಡಕ್ಕೆ ಬೆಂಕಿ ಬಿದ್ದಾಗ ನೀರು ನೆನಪಿಸಿಕೊಂಡ ಕನ್ನಡ ಚಿತ್ರೋದ್ಯಮ !

ಬುಡಕ್ಕೆ ಬೆಂಕಿ ಬಿದ್ದಾಗ ನೀರು ನೆನಪಿಸಿಕೊಂಡ ಕನ್ನಡ ಚಿತ್ರೋದ್ಯಮ !

Posted By: Super
Subscribe to Filmibeat Kannada

'ಕನ್ನಡ ಬಂಧುಗಳೇ,
ಕಾವೇರಿ ವಿವಾದ ಕುರಿತು ನಾನು ಯಾವ ಹೇಳಿಕೆಯನ್ನೂ ಕೊಡಲಿಲ್ಲ . ಚಳವಳಿಯಲ್ಲಿ ಭಾಗವಹಿಸಿಲ್ಲವೆಂಬುದಕ್ಕೆ ಈ ಸ್ಪಷ್ಟೀಕರಣ.

ವಿಷಯ ಕಗ್ಗಂಟಾಗಿ ಉಭಯ ರಾಜ್ಯಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದವು. ಸಂಘ ಸಂಸ್ಥೆಗಳು ಸಿಡಿದೆದ್ದವು. ಸುಪ್ರಿಂಕೋರ್ಟ್‌ ಆದೇಶ ನೀಡಿತು. ಇಂಥ ಸಂದರ್ಭದಲ್ಲಿ ಒಂದು ಹೋಗಿ, ಒಂದು ಆಗಬಾರದೆಂದು ತಟಸ್ಥನಾಗಿರುವುದು ಅನಿವಾರ್ಯವಾಯಿತು. ಕಾವೇರಿ, ಕನ್ನಡ, ಕರ್ನಾಟಕ ಇವು ಮೂರು ಒಂದನ್ನು ಬಿಟ್ಟು ಇನ್ನೊಂದಿಲ್ಲವೆಂದು ಕಾಯಾ, ವಾಚಾ, ಮನಸಾ, ನಂಬಿದವನು ನಾನು. ಕಾವೇರಿ ನೀರಿಲ್ಲದೆ, ಕನ್ನಡ ಮಾತನಾಡದೆ, ಕರ್ನಾಟಕದಲ್ಲಿಲ್ಲದೆ ಇರುವುದನ್ನು ಕಲ್ಪನೆ ಮಾಡಿಕೊಳ್ಳಲೂ ನನ್ನಿಂದ ಸಾಧ್ಯವಿಲ್ಲ.

ನೆಲ, ಜಲ, ನುಡಿಯ ಕೈಂಕರ್ಯ ನನ್ನ ಸುಕೃತವೆಂದು ಭಾವಿಸಿದ್ದೇನೆ. ತಾಯಿ ಭುವನೇಶ್ವರಿಯ ಕೃಪೆಯಿಂದ ಈ ಕಠಿಣ ಸನ್ನಿವೇಶವು ತಿಳಿಯಾಗಿ ಶಾಂತಿ, ನೆಮ್ಮದಿ ನೆಲೆಗೊಳ್ಳಲಿ.'
- ರಾಜ್‌ಕುಮಾರ್‌

***

ವರನಟ ರಾಜ್‌ಕುಮಾರ್‌ ಕೊನೆಗೂ ಮೌನ ಮುರಿದಿದ್ದಾರೆ. ಕಾವೇರಿ ಚಳವಳಿ ಕುರಿತು ಸಹಾನುಭೂತಿ ವ್ಯಕ್ತಪಡಿಸಿರುವ ರಾಜ್‌, ಕಾವೇರಿ ಕುರಿತ ತಮ್ಮ ಪ್ರೇಮವನ್ನೂ ತೋಡಿಕೊಂಡು ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಕೂಡ ಕಾವೇರಿ ಚಳವಳಿಯನ್ನು ಬೆಂಬಲಿಸುವುದಾಗಿ ಹೇಳಿದೆ. ಸೋಮವಾರ (ಸೆ.23) ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆ ಕಾವೇರಿ ಚಳವಳಿಯನ್ನು ಬೆಂಬಲಿಸುವುದಾಗಿ ನಿರ್ಣಯ ಕೈಗೊಂಡಿದೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌ ತಿಳಿಸಿದ್ದಾರೆ.

ವರನಟ ಡಾ.ರಾಜ್‌ಕುಮಾರ್‌ ನೇತೃತ್ವದಲ್ಲಿ ಸೆಪ್ಟಂಬರ್‌ 25 ರ ಬುಧವಾರ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಚಿತ್ರೋದ್ಯಮ, ಆನಂತರ ಕಾವೇರಿ ನೀರಿನ ಹಕ್ಕಿನ ರಕ್ಷಣೆಯ ಕುರಿತು ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಿದೆ.

***

ಕಾವೇರಿ ವಿವಾದ ಇತ್ಯರ್ಥವಾಗುವವರೆಗೂ ಕನ್ನಡ ಚಿತ್ರೋದ್ಯಮದ ಗಣ್ಯರು ಯಾವುದೇ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ.
- ಸಾ.ರಾ.ಗೋವಿಂದು,
ನಟ-ನಿರ್ಮಾಪಕ ಹಾಗೂ ಅಖಿಲ ಕರ್ನಾಟಕ ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ.

***

ಮೇಲಿನ ಮೂರು ತುಣುಕುಗಳು ಒಂದೇ 12 ಗಂಟೆಗಳ ಅಂತರದಲ್ಲಿ ಹೊರಬಿದ್ದಿರುವುದು ಏನನ್ನು ಸೂಚಿಸುತ್ತದೆ. ಈ ಕೆಳಗಿನಂತೆ ಊಹಿಸಬಹುದಾ ?

ಕಾವೇರಿ ವಿವಾದ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ತನ್ನ ಪಾಡಿಗೆ ತಾನಿದ್ದ ಕನ್ನಡ ಚಿತ್ರೋದ್ಯಮಕ್ಕೆ ಏಕಾಏಕಿ ಜ್ಞಾನೋದಯವಾಗಿದೆ.
'ಕಾವೇರಮ್ಮ ಕಾಪಾಡಮ್ಮ, ಕನ್ನಡ ನಾಡಿನ ಜೀವನದಿ ಕಾವೇರಿ...' ಮುಂತಾಗಿ ಸಿನಿಮಾಗಳಲ್ಲಿ ಹಾಡುತ್ತ, ಕನ್ನಡ ಬಾವುಟ ಹಿಡಿಯುತ್ತಿದ್ದ ಮಂದಿ, ನಿಜ ಜೀವನದಲ್ಲೂ ಕಾವೇರಿ ಕುರಿತು ಕಾಳಜಿ ಹೊಂದಿದ್ದಾರೆ.
ಯಾವುದೇ ಸಮಾರಂಭಗಳಲ್ಲಿ ಭಾಗವಹಿಸದಿರಲು ಚಿತ್ರೋದ್ಯಮದ ಗಣ್ಯರು ನಿರ್ಧರಿಸಿದ್ದಾರೆ. ಅಂದರೆ, ನೀರಿಗಾಗಿ ತಮ್ಮ ಸಂತೋಷದ ತ್ಯಾಗಕ್ಕೂ ಸಿನಿಮಾ ಮಂದಿ ಸಿದ್ಧರು.
ಸಿನಿಮಾ ಮಂದಿಗೂ ಸಾಮಾಜಿಕ ಬದ್ಧತೆ ಇದೆ. ಸ್ವಲ್ಪ ತಡವಾಗಿಯಾದರೂ ಪರವಾಗಿಲ್ಲ, ಅದನ್ನವರು ವ್ಯಕ್ತಪಡಿಸುತ್ತಾರೆ.

***

ಅಂದಹಾಗೆ,
ಕಾವೇರಿ ಚಳವಳಿ ನಡೆಯುತ್ತಿರುವುದು ಚಿತ್ರೋದ್ಯಮದ ಗಮನಕ್ಕೆ ಬಂದಿರುವುದಕ್ಕೂ, ಮಂಡ್ಯದಲ್ಲಿ ಚಿತ್ರಮಂದಿರಗಳ ಮೇಲೆ ಕಲ್ಲು ತೂರಿರುವ ಪ್ರತಿಭಟನಾಕಾರರು ನಾಯಕ ನಟರ ಕಟೌಟ್‌ಗಳನ್ನು ಧ್ವಂಸ ಪಡಿಸಿರುವ ಘಟನೆಗೂ ಸಂಬಂಧವಿದೆಯಾ?

ನಿಮಗೆ ನೆನಪಿದೆಯೋ ಇಲ್ಲವೋ.. ಕಾವೇರಿ ಕೊಳ್ಳದಲ್ಲಿ ಕಿಚ್ಚು ಉರಿಯುತ್ತಿದ್ದ ಹೊತ್ತಿನಲ್ಲಿ ಸಂಸದ ಹಾಗೂ ಮಾಜಿ ನಟ ಅಂಬರೀಷ್‌ ಮತ್ತು ಹಾಲಿ ನಟ ವಿಷ್ಣುವರ್ಧನ್‌ 'ಸಿಂಹಾದ್ರಿಯ ಸಿಂಹ' ಚಿತ್ರದ ಶತದಿನ ಕಾರ್ಯಕ್ರಮದಲ್ಲಿ ಆಳೆತ್ತರದ ಹಾರಗಳಲ್ಲಿ ಮುಳುಗಿಹೋಗಿದ್ದರು. ವಿಷ್ಣುಗೆ ಪದ್ಮಭೂಷಣ ಕೊಡಬೇಕು ಎಂದು ಅಂಬಿ ಆಲಾಪಿಸುತ್ತಿದ್ದರು. ಸಿನಿಮಾ ಮಂದಿ ಎಂಥ ಮತ್ತಿನಲ್ಲಿ ಮುಳುಗಿರುತ್ತಾರೆ ಅನ್ನುವುದು ನಿಮಗೆ ತಿಳಿದಿರಲಿ.

English summary
At Last Sandalwood joins with Cauvery water movement, Rajkumar reiterates that he cannot live wothout kaveri water, kannada language and karnataka

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada