»   » ಅರಮನೆ ಮೈದಾನದಲ್ಲಿ ‘ಜೋಗಿ’ ಜಾತ್ರೆ

ಅರಮನೆ ಮೈದಾನದಲ್ಲಿ ‘ಜೋಗಿ’ ಜಾತ್ರೆ

Posted By:
Subscribe to Filmibeat Kannada

ನಿರೀಕ್ಷೆಯಂತೆಯೇ ‘ಜೋಗಿ’ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದಾನೆ. ‘ಜೋಗಿ’ ಜಾತ್ರೆ ಕಳೆಕಟ್ಟಿದೆ.

ಜಾತ್ರೆಯ ಯಶಸ್ಸನ್ನು ಹಂಚಿಕೊಳ್ಳಲು, ನಗರದ ಅರಮನೆ ಮೈದಾನದಲ್ಲಿ ವಿಜಯೋತ್ಸವವನ್ನು ನಿರ್ಮಾಪಕ ರಾಮಪ್ರಸಾದ್‌ ಮತ್ತು ಕೃಷ್ಣಪ್ರಸಾದ್‌ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿಯೇ 75ಲಕ್ಷಗಳನ್ನು ನೀರಿನಂತೆ ಖರ್ಚು ಮಾಡಲಾಗುತ್ತಿದೆ!

ನ.26 ಅಕ್ಷರಶಃ ಜೋಗಿ ಜಾತ್ರೆಯೇ ನಡೆಯಲಿದೆ! ನಟ ಶಿವರಾಜ್‌ಕುಮಾರ್‌ ಮತ್ತು ಯಾನಾ ಗುಪ್ತಾ ‘ಗರತಿ ಹಂಗೆ ಸೆರಗು ಹಾಕ್ಕೊಂಡು... ’ ಹಾಡಿಗೆ ಅಂದು ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ. ‘ಜೋಗಿ’ ಪರಿವಾರ(ಚಿತ್ರ ತಂಡ)ವನ್ನು ಪ್ರೀತಿಯಿಂದ ಸನ್ಮಾನಿಸುವ ಕಾರ್ಯಕ್ರಮವಿದೆ.

ನ.27ರಂದು ಕನ್ನಡ ಚಿತ್ರರಂಗದ ಗಣ್ಯರಿಗೆ ಸನ್ಮಾನ. ನಟ ರಾಜಕುಮಾರ್‌, ಪಾರ್ವತಮ್ಮ ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಸೇರಿದಂತೆ ಚಿತ್ರೋದ್ಯಮದ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮೂಲವೊಂದರ ಪ್ರಕಾರ ಹಿಂದಿಯ ಸುಪ್ರಸಿದ್ಧ ನಟ ಅಮಿತಾಭ್‌ ಆಗಮಿಸುವ ಸಾಧ್ಯತೆಗಳು ಉಂಟು! ಪತ್ರಕರ್ತರಿಗೂ ಸನ್ಮಾನವಿದೆ!

ಸುಮಾರು 500 ನೆನಪಿನ ಕಾಣಿಕೆಗಳು ಈಗಾಗಲೇ ರೆಡಿ. ವೇದಿಕೆ ಮೇಲೆ ನಾಲ್ಕುಗಂಟೆ ಕಾರ್ಯಕ್ರಮ ನೀಡಲು ಗುರುಕಿರಣ್‌ ತಾಲೀಮು ನಡೆಸಿದ್ದಾರೆ.

45ಕೇಂದ್ರಗಳಲ್ಲಿ ಚಿತ್ರ ನೂರು ದಿನಗಳ ಯಶಸ್ವಿಪ್ರದರ್ಶನ ಕಂಡಿದೆ. ಸುಮಾರು ಒಂದೂವರೆ ಲಕ್ಷ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಸ್‌ಗಳನ್ನು ‘ಜೋಗಿ’ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರದಲ್ಲಿ ನೀಡಲಾಗುತ್ತಿದೆ.

ಶಿವು ಮುಂದೆ ಮತ್ತೊಂದು ಕನಸು :
ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಶಿವರಾಜ್‌ಕುಮಾರ್‌ ‘ಜೋಗಿ’ ಯಶಸ್ಸಿನಿಂದ ಖುಷಿಯಲ್ಲಿದ್ದಾರೆ. ಅವರ ಖುಷಿಯನ್ನು ಹೆಚ್ಚಿಸುವಂತೆ ಕುಮಾರರಾಮನ ಪಾತ್ರ ಅವರಿಗೆ ಸಿಕ್ಕಿದೆ.

ಪಟ್ಟಾಭಿರಾಮ್‌ ನಿರ್ಮಾಣದ ಐತಿಹಾಸಿಕ ಕಥಾನಕವುಳ್ಳ ‘ಗಂಡುಗಲಿ ಕುಮಾರರಾಮ’ ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ಡಾ.ರಾಜ್‌ರ ಕನಸಿನ ಪಾತ್ರಕ್ಕೆ ಶಿವರಾಜ್‌ಕುಮಾರ್‌ ಜೀವನೀಡಲು ಪ್ರಯತ್ನಿಸುತ್ತಿದ್ದಾರೆ. ಇದು ಭಾರ್ಗವ ನಿರ್ದೇಶನದ 50ನೇ ಚಿತ್ರ.

ಕುಮಾರ ರಾಮನ ತಂದೆ ಪಾತ್ರದಲ್ಲಿ ನಟ ಶ್ರೀನಿವಾಸಮೂರ್ತಿ ನಟಿಸುತ್ತಿದ್ದಾರೆ. ನಾಯಕಿಯರ ಪಾತ್ರದಲ್ಲಿದ್ದಾರೆ ಅನಿತಾ ಮತ್ತು ಲಯಾ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada