»   » ಮರೆಯಾದಳು ಪ್ರೀತಿಯ ಡುಮ್ಮಿ ಮಂಜುಮಾಲಿನಿ!

ಮರೆಯಾದಳು ಪ್ರೀತಿಯ ಡುಮ್ಮಿ ಮಂಜುಮಾಲಿನಿ!

Posted By:
Subscribe to Filmibeat Kannada


ತಮ್ಮ ಗಜಗಾತ್ರದ ತುಂಬು ಶರೀರವನ್ನೇ ಕಾಮಿಡಿಗೆ ಬಳಸಿಕೊಂಡ ಮಂಜುಮಾಲಿನಿ, ಪ್ರೇಕ್ಷಕರ ಮುಖದಲ್ಲಿ ನಗು ತಂದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

  • ಅಮೃತಾ
ಪ್ರೇಕ್ಷಕರಿಗೆ ಇಬ್ಬರು ಮಾಲಿನಿಯರೆಂದರೆ ಸಕತ್ತು ಇಷ್ಟ. ಒಬ್ಬಳು ಕನಸಿನ ರಾಣಿ ಹೇಮಾ ಮಾಲಿನಿ. ಇನ್ನೊಬ್ಬಳು ಡುಮ್ಮಿ ಮಂಜುಮಾಲಿನಿ. ವಿಪರ್ಯಾಸದ ಸಂಗತಿಯೆಂದರೆ ತಮ್ಮ ನೂರಾರು ಚಿತ್ರಗಳಲ್ಲಿ ಪ್ರೇಕ್ಷಕರನ್ನು ನಕ್ಕುನಲಿಸಿದ ಮಂಜುಮಾಲಿನಿ ಇನ್ನು ಕೇವಲ ನೆನಪು ಮಾತ್ರ.

ಶುಕ್ರವಾರ(ನ.24) ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅವರ ದೇಹ ಕೆಲವೇ ಕ್ಷಣಗಳಲ್ಲಿ ಈ ಪ್ರಪಂಚದಿಂದ ಮರೆಯಾಗಲಿದೆ. ಆದರೆ ಅವರ ಅಭಿನಯ, ಪ್ರೇಕ್ಷಕರ ಎದೆಯಲ್ಲಿ ಸದಾ ಜೀವಂತ. ಕಳೆದ ವಾರದಿಂದ ಅನಾರೋಗ್ಯದಿಂದ ಬಳಲಿದ್ದ ಮಂಜು ಮಾಲಿನಿ, ಗುರುವಾರ ಬೆಳಗಿನ ಜಾವ ಕೊನೆ ಉಸಿರೆಳೆದೆರು.

ಕಾಮಿಡಿ ನಟ-ನಟಿಯರ ದುರಂತವೇನೋ ಎಂಬಂತೆ ಕಳೆದ 25ವರ್ಷಗಳಿಂದ ಮಂಜುಮಾಲಿನಿ ಬಣ್ಣದ ಬದುಕಿನಲ್ಲಿದ್ದರೂ, ಅವರ ಆರ್ಥಿಕ ಸ್ಥಿತಿ ಉತ್ತಮವಾಗೇನೂ ಇರಲಿಲ್ಲ. ಶೇಷಾದ್ರಿಪುರದ ಬಾಡಿಗೆ ಮನೆಯಲ್ಲಿ ಅವರು ವಾಸಿಸುತ್ತಿದ್ದರು.

ಅನೇಕ ಪ್ರತಿಭಾವಂತರಂತೆಯೇ ಚಿತ್ರದುರ್ಗ ಜಿಲ್ಲೆಯ ಮಂಜುಮಾಲಿನಿ ಸಹಾ, ಪುಟ್ಟಣ್ಣ ಕಣಗಾಲ್‌ ಹುಡುಕಿದ ಪ್ರತಿಭೆಯೇ. ‘ನಾಗರಹಾವು’ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮಾಲಿನಿ, ಬೊಂಬಾಟ್‌ ಹುಡುಗಿ, ಲೇಡಿಸ್‌ ಹಾಸ್ಟೆಲ್‌, ರಾಮಚಾರಿ, ಸಾಂಗ್ಲಿಯಾನ, ಆಹಾ ನನ್ನ ಮದುವೆಯಂತೆ, ತಾಳಿ ಕಟ್ಟುವ ಶುಭವೇಳೆ ಸೇರಿದಂತೆ 250 ಚಿತ್ರಗಳಲ್ಲಿ ಅಭಿನಯಿಸಿದ್ದರು. ಬಿಡುಗಡೆಗೆ ಸಿದ್ಧವಾಗಿರುವ ‘ಕಲ್ಲರಳಿ ಹೂವಾಗಿ’ ಮಂಜು ಮಾಲಿನಿ ಅಭಿನಯದ ಕಡೆಯ ಚಿತ್ರ.

ಸಾಯಿಪ್ರಕಾಶ್‌ ಮತ್ತು ಕಾಶಿನಾಥ್‌ ಚಿತ್ರಗಳಲ್ಲಿ ಮಂಜು ಮಾಲಿನಿಗೆ ಒಂದು ಪಾತ್ರ ಇದ್ದೇ ಇರುತ್ತಿತ್ತು. ತಮ್ಮ ಗಜಗಾತ್ರದ ತುಂಬು ಶರೀರವನ್ನೇ ಕಾಮಿಡಿಗೆ ಬಳಸಿಕೊಂಡ ಮಂಜುಮಾಲಿನಿ, ಪ್ರೇಕ್ಷಕರ ಮುಖದಲ್ಲಿ ನಗು ತಂದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada