»   » ಐಕ್ಕಲಕಡಿ 'ಗಜ' ರಿಮೇಕ್ ಅಂದವ ದಾರಿಬಿಟ್ಟು ಸೈಡಿಗೆ ನಡಿ

ಐಕ್ಕಲಕಡಿ 'ಗಜ' ರಿಮೇಕ್ ಅಂದವ ದಾರಿಬಿಟ್ಟು ಸೈಡಿಗೆ ನಡಿ

Posted By:
Subscribe to Filmibeat Kannada

ಆನೆ ನಡೆದದ್ದೇ ಹಾದಿ ಎಂಬಂತೆ ದರ್ಶನ್ ನಟಿಸಿರುವ 'ಗಜ' ಚಿತ್ರ ಎಲ್ಲದಿಕ್ಕಿನಿಂದ ಬರುತ್ತಿರುವ ಎಲ್ಲ ಅಡೆತಡೆಗಳನ್ನು ಗಜಗತ್ತಿನಿಂದಲೇ ನಿವಾರಿಸಿಕೊಂಡು ಬಿಡುಗಡೆಯ ಹಾದಿಯಲ್ಲಿದೆ.

ದರ್ಶನ್ ಅಭಿಮಾನಿಗಳಿಗಾಗಿ ವಿಶೇಷ ಮುತುವರ್ಜಿಯಿಂದ ನಿರ್ಮಿಸಿರುವ 'ಗಜ' ಚಿತ್ರದ ಬಗ್ಗೆ ಬಿಡುಗಡೆಯ ಮುನ್ನವೇ ಉತ್ತಮ ಮಾತುಗಳು ಕೇಳಿಬರುತ್ತಿವೆ. ಚಿತ್ರನಿರ್ಮಾಣದಲ್ಲಿ ಬೆವರು ಸುರಿಸಿರುವ ಎಲ್ಲ ವಿಭಾಗದ ತಜ್ಞರು ಗಜದ ಯಶಸ್ಸಿನ ಬಗ್ಗೆ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ.

'ಗಜ' ಚಿತ್ರ ತೆಲುಗಿನ 'ಭದ್ರ' ಚಿತ್ರದ ರಿಮೇಕ್ ಎಂದು ಹುಯಿಲೆಬ್ಬಿಸಿದವರಿಗೆ ನಿರ್ಮಾಪಕ ಸುರೇಶ್ ಗೌಡ ಮತ್ತು ನಿರ್ದೇಶಕ ಮಾದೇಶ ಸಾಕ್ಷಿಸಮೇತ ಉತ್ತರ ನೀಡಿದ್ದಾರೆ. ಇದು ಅಪ್ಪಟ ಸ್ವಮೇಕ್ ಚಿತ್ರ. ಈ ಚಿತ್ರಕ್ಕೆ ಸ್ಫೂರ್ತಿ 1988ರಲ್ಲಿ ಪ್ರಕಟವಾದ ತೆಲುಗಿನ ಕಾದಂಬರಿ. ಭದ್ರಕ್ಕೂ ಗಜಕ್ಕೂ ಅಜಗಜಾಂತರ ವ್ಯತ್ಯಾಸ ಎಂದು ಸಾರಿಸಾರಿ ಹೇಳುತ್ತಿದ್ದಾರೆ. ತಮ್ಮ ಹೇಳಿಕೆಗೆ ಪೂರಕವೆಂಬಂತೆ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತೆಲುಗು ಕಾದಂಬರಿಯ ಪುಸ್ತಕಗಳನ್ನೂ ಹಂಚಿದರು.

ಚಿತ್ರ ಗೆದ್ದೇಗೆಲ್ಲುತ್ತದೆಂದು ತಿಳಿದ ತಕ್ಷಣ ಚಿತ್ರಕ್ಕೆ ಸಂಬಂಧಿಸಿದಿಲ್ಲದವರು ಅನಗತ್ಯವಾಗಿ ರಿಮೇಕ್ ರಾಗ ಹಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ಇಲ್ಲಿದೆ ಉತ್ತರ ಎಂದು ತೆಲುಗು ಕಾದಂಬರಿಯನ್ನು ಮುಖಕ್ಕೆ ಹಿಡಿದರು ಮಾದೇಶ.

ಚಿತ್ರದ ಹಾಡುಗಳು ದರ್ಶನ್ ಅಭಿಮಾನಿಗಳಿಗೆ ಹುಚ್ಚುಹಿಡಿಸುವುದರಲ್ಲಿ ಸಂಶಯವೇ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಅದರಲ್ಲೂ 'ಮಿನಮಿನ ಮೀನಾಕ್ಷಿ.. ಐಕ್ಕಲಕಡಿ ಪಂಚರಂಗಿ ಬಾರೆ' ಹಾಡು ಶಂಕರ್ ಮಹದೇವನ್ ಧ್ವನಿಯಲ್ಲಿ ಪಡ್ಡೆಹುಡುಗರು ಕೇಳಿದಾಗಲೆಲ್ಲ ಕುಣಿದಾಡುವಂತೆ ಮಾಡಿದೆ. ಸುಂಟರಗಾಳಿ ಚಿತ್ರದ ಹುಚ್ಚುಕುದುರೆಯವ್ವಾ ಮಾದರಿಯಲ್ಲೇ ಚಿತ್ರಿಸಿರುವ 'ಪಂಚರಂಗಿ' ಹಾಡು ಚಿತ್ರದ ಹೈಲೈಟ್‌ಗಳಲ್ಲಿ ಒಂದು ಎನ್ನುತ್ತಿದೆ ಚಿತ್ರತಂಡ.

ಪತ್ರಿಕಾಗೋಷ್ಠಿಯಲ್ಲಿದ್ದ ಸಂಗೀತ ನಿರ್ದೇಶಕ ಹರಿಕೃಷ್ಣ ಮತ್ತು ಹಾಡುಗಳನ್ನು ಬರೆದಿರುವ ನಾಗೇಂದ್ರ ಪ್ರಸಾದ್‌ಗೆ ಚಿತ್ರದ ಸಂಗೀತದ ಬಗ್ಗೆ ಇನ್ನಿಲ್ಲದ ವ್ಯಾಮೋಹ. ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು ಡಿಫರೆಂಟಾಗಿ ನೀಡಿರುವ ಸಂಗೀತದಿಂದಾಗಿ ಕ್ಯಾಸೆಟ್‌ಗಳು ಬಿಸಿಕೇಕ್‌ನಂತೆ ಮಾರಾಟವಾಗುತ್ತಿವೆ ಎಂದು ಹರಿಕೃಷ್ಣ ಹೇಳಿದರು. ಪಂಚರಂಗಿ ಹಾಡನ್ನು ವಿದೇಶದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಚಿತ್ರಿಸಲಾಗಿದ್ದು ಚಿತ್ರಕ್ಕೆ ಪೂರಕವಾಗಿ ಮತ್ತು ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ ಎಂದು ಹರಿಕೃಷ್ಣ ಹೇಳಿದರು.

ಚಿತ್ರದಲ್ಲಿ ದರ್ಶನ್ ಜೊತೆ ಮಲಯಾಳಿ ಚೆಲುವೆ ನವ್ಯಾ ನಾಯರ್ ನಾಯಕಿಯಾಗಿ ಅಬಿನಯಿಸಿದ್ದಾರೆ.

ಪಂಚರಂಗಿ ಪದ್ಮಿನಿ ನವ್ಯಾ ನಾಯರ್ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada