»   » ಮಡಿಕೇರಿಯಲ್ಲಿ ಅಮಿತಾಬ್‌ ಬಚ್ಚನ್‌

ಮಡಿಕೇರಿಯಲ್ಲಿ ಅಮಿತಾಬ್‌ ಬಚ್ಚನ್‌

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಇವತ್ತಿನ ಟೀವಿ ಧಾರಾವಾಹಿಗಳು ಮತ್ತು ಸಿನಿಮಾಗಳು ನಮ್ಮ ಸಂಸ್ಕೃತಿಯನ್ನು ಕೊಲೆ ಮಾಡುತ್ತಿದ್ದಾರಲ್ಲಾ ಸ್ವಾಮಿ ಅಂತ ಅಮಿತಾಬ್‌ಗೆ ಸುದ್ದಿಗಾರರು ಎಸೆದ ಪ್ರಶ್ನೆಗೆ ಅವರು ಉತ್ತರವಾಗಿ ಹತ್ತಿರದಲ್ಲೇ ನಿಂತಿದ್ದ ಹೆಂಗಸೊಬ್ಬರನ್ನು ತೋರಿಸಿಬಿಟ್ಟರು. ನೋಡಿ, ಆ ಹೆಂಗಸು ಸಾಂಪ್ರದಾಯಿಕ ರೀತಿಯಲ್ಲೇ ಇದ್ದಾರೆ. ಲಕ್ಷಣವಾಗಿ ಸೀರೆ ಉಟ್ಟುಕೊಂಡಿದ್ದಾರೆ. ಸಿನಿಮಾದಿಂದ ಸಂಸ್ಕೃತಿ ಹಾಳಾಗಿದೆ ಅನ್ನೋದೆಲ್ಲ ಬರೀ ಭಾಷಣದ ಮಾತಷ್ಟೆ ಎಂದು ತಮ್ಮ ಕಂಚಿನ ಕಂಠದಲ್ಲಿ ಅಮಿತಾಬ್‌ ಉತ್ತರ ಕೊಟ್ಟಾಗ ಸುದ್ದಿಗಾರರು ಸೈಲೆಂಟ್‌.

ಕಳೆದ ಇಪ್ಪತ್ತೆೈದು ದಿನಗಳಿಂದ ಕಾವೇರಿ ತವರಾದ ಮಡಿಕೇರಿಯಲ್ಲೇ ಅಮಿತಾಬ್‌ ಕ್ಯಾಂಪು. ‘ಕ್ಯೋಂ ಹೋಗಯಾನ’ ಎಂಬ ಹಿಂದಿ ಚಿತ್ರದ ಶೂಟಿಂಗ್‌ ಮಡಿಕೇರಿಯಲ್ಲಿ ನಡೆಯುತ್ತಿದೆ. ಐಶ್ವರ್ಯ ರೈ ಹಾಗೂ ಸುನಿಲ್‌ ಶೆಟ್ಟಿ ಚಿತ್ರದ ಇತರೆ ಪಾತ್ರಧಾರಿಗಳು. ಈ ಇಬ್ಬರೂ ಮಾತಿಗೆ ಸಿಗಲಿಲ್ಲ. ಶೂಟಿಂಗ್‌ ಬಿಡುವಿನ ವೇಳೆಯಲ್ಲಿ ಮಡಿಕೇರಿಯ ಸುಂದರ ಪರಿಸರದಲ್ಲಿ ಅಡ್ಡಾಡುತ್ತಿದ್ದ ಅಮಿತಾಬ್‌ ಮುಕ್ತವಾಗಿ ಮಾತಿಗೆ ಒಪ್ಪಿದ್ದು ಅಚ್ಚರಿ.

ಇವತ್ತು ಭಾರತೀಯ ಸಿನಿಮಾ ಏನು ಸಾಧಿಸಬೇಕು ಎಂಬ ಗಂಭೀರವಾದ ಪ್ರಶ್ನೆಗೆ ಮೊದಲು ನಕ್ಕ ಅಮಿತಾಬ್‌, ಆಮೇಲೆ ಭಾರತ- ಪಾಕಿಸ್ತಾನದ ಸಂಬಂಧ ಕುದುರಿಸುವ ಮಾತಾಡಿದರು. ಪಾಕಿಸ್ತಾನದ ಚಿತ್ರ ನಮ್ಮ ದೇಶಕ್ಕೆ ಬರಬೇಕು. ನಮ್ಮ ಚಿತ್ರಗಳು ಅಲ್ಲಿಗೆ ಹೋಗಬೇಕು. ಹೀಗಾದಾಗ ನಮ್ಮ ಮನಸ್ಥಿತಿಗಳು ಪರಸ್ಪರ ವಿನಿಮಯವಾಗುತ್ತವೆ. ಆಗ ಉಭಯ ದೇಶಗಳ ಸಂಬಂಧ ಸುಧಾರಣೆ ಖಂಡಿತ ಸಲೀಸಾಗುತ್ತದೆ. ಸಿನಿಮಾದಂಥ ಪ್ರಬಲ ಮಾಧ್ಯಮವನ್ನು ನಾವು ಶಾಂತಿದೂತನನ್ನಾಗಿ ಬಳಸಿಕೊಳ್ಳುವುದು ಖಂಡಿತ ಸಾಧ್ಯ ಎಂದರು.

ಕೊಡಗಿನ ತಂಪು ಹವೆಯನ್ನು ಮನಸಾರೆ ಮೆಚ್ಚಿಕೊಂಡಿರುವ ಬಚ್ಚನ್‌ ಮುಂದಿನ ಸಲ ಸಂಸಾರ ಸಮೇತರಾಗಿ ಇಲ್ಲಿ ರಜೆ ಕಳೆಯಲು ನಿರ್ಧರಿಸಿದ್ದಾರೆ. ಮಕ್ಕಳಲ್ಲಿ ಶಿಕ್ಷಣದ ಬಗೆಗೆ ಕಾಳಜಿ ಮೂಡಿಸುವ ಸಲುವಾಗಿ ಯೂನಿಸೆಫ್‌ ರಾಯಭಾರಿಯಾಗಿರುವ ಬಚ್ಚನ್‌ಗೆ ದೇಶದಲ್ಲಿ ಪೋಲಿಯೋ ನಿರ್ಮೂಲನೆಯಾಗಬೇಕು ಹಾಗೂ ಎಲ್ಲಾ ಮಕ್ಕಳಿಗೂ ವಿದ್ಯೆ ದಕ್ಕಬೇಕು ಎಂಬ ಕನಸಿದೆ. ಅದನ್ನು ನನಸಾಗಿಸಲು ತಮ್ಮ ಕೈಲಾದ ಕೆಲಸವನ್ನು ಮಾಡಲು ಅವರು ಸಿದ್ಧವಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada