»   » ಉಪ್ಪಿ ಸಿನಿಮಾಗೆ ಯಾವ ನಿರ್ದೇಶಕರಾದರೂ ಆಗಬಹುದು ಅನಿಸುತ್ತೆ

ಉಪ್ಪಿ ಸಿನಿಮಾಗೆ ಯಾವ ನಿರ್ದೇಶಕರಾದರೂ ಆಗಬಹುದು ಅನಿಸುತ್ತೆ

Posted By: Staff
Subscribe to Filmibeat Kannada

ಕಾಯೋಕಾಗಲ್ಲ ಅನ್ನುವ ಕಾರಣಕ್ಕೆ ಶಿವಮಣಿ ಜಾಗಕ್ಕೆ ಹಾಸ್ಯಾಸ್ಪದ ನಟ ಸಾಧು ಕೋಕಿಲಾನ ತಂದು ಕೂರಿಸುವುದೇ? ಪ್ರಶಸ್ತಿ ವಿಜೇತ ಕತೆಗಾರ ಕಂ ನಿರ್ಮಾಪಕ ಮುನಿರತ್ನ ಹಾಗೆ ಮಾಡಿದ್ದಾರೆ. ಉಪೇಂದ್ರ ಅಭಿನಯದ 'ರಕ್ತ ಕಣ್ಣೀರು" ಚಿತ್ರದ ನಿರ್ದೇಶನದ ಹೊಣೆಯನ್ನು ಶಿವಮಣಿಗೆ ಹೊರಿಸಲು ಮುನಿರತ್ನ ಮುಂದಾದರು. ಸ್ವಲ್ಪ ದಿನ ಕಾಯುವಂತೆ ಶಿವಮಣಿ ಕೇಳಿಕೊಂಡರು. ಆದರೆ ಮುನಿ ಹರೀಬರಿಯಲ್ಲಿದ್ದರು. ಕಾಯೋಕಾಗಲ್ಲ ಅಂತ ಶಿವಮಣಿ ಸೀಟಿಗೆ ಸಾಧು ಕೋಕಿಲಾರನ್ನು ತಂದು ಕೂಡಿಸಿದರು. ಚೊಚ್ಚಲ ನಿರ್ದೇಶಕನಾಗಿ ಉಪ್ಪಿ ಮುಂದೆ ನಿಲ್ಲುವ ಭಾಗ್ಯ ಸಾಧುವಿನದಾಯಿತು.

'ಗ್ಯಾಂಗ್‌ ಲೀಡರ್‌" ಕನ್ನಡ ಅವತರಣಿಕೆ 'ಕುಟುಂಬ" ಎಂಬ ಸಿನಿಮಾದಲ್ಲೂ ಉಪ್ಪಿಯೇ ನಾಯಕ. ಆ ಚಿತ್ರದ ಎರಡು ಹಾಡುಗಳನ್ನು ಸಿಂಗಾಪೂರ್‌, ಬ್ಯಾಂಕಾಕ್‌ ಮತ್ತು ಕೊಲಂಬೋಗಳಲ್ಲಿ ಕೆಮೆರಾಗೆ ತುಂಬಿಕೊಳ್ಳಲು ತೀರ್ಮಾನಿಸಲಾಗಿದೆ. ಅದೇ ವೇಳೆಗೆ ರಕ್ತ ಕಣ್ಣೀರು ತಂಡವೂ ಇದೇ ವಿದೇಶೀ ನೆಲೆಗಳಿಗೆ ಹೋಗಿ, ತಾನೂ ಎರಡು ಹಾಡುಗಳನ್ನು ಚಿತ್ರೀಕರಿಸಿಕೊಂಡು ಬರಲಿದೆ. ಹಣ ಉಳಿಸುವ ಈ ಪರಿಪಾಠ ಸ್ಯಾಂಡಲ್‌ವುಡ್‌ನಲ್ಲಿ ಉಪ್ಪಿ ಮೂಲಕ ಆಗುತ್ತಿರುವುದಕ್ಕೆ ಹೆಮ್ಮೆ ಪಡಲೇಬೇಕು. ಧನರಾಜ್‌ರನ್ನು ದಮಡಿ ರಹಿತ ರಾಜ್‌ ಮಾಡಿದ ನಂತರವಾದರೂ ಉಪ್ಪಿಗೆ ನಿರ್ಮಾಪಕರ ಥೈಲಿಯ ಮೇಲೆ ಕೊಂಚವಾದರೂ ಕರುಣೆ ಬಂದಿದೆ ಅಂತಾಯಿತು.

ಇನ್ನು ಸಾಧು ವಿಷಯಕ್ಕೆ ಬರೋಣ
ಒಂದು ಕಾಲದಲ್ಲಿ ಮೈಸೂರು ಅನಂತ ಸ್ವಾಮಿ ಬೆಟಾಲಿಯನ್‌ನಲ್ಲಿ ಕೀಬೋರ್ಡ್‌ ನುಡಿಸುತ್ತಿದ್ದ ಈತನಿಗೆ ಕನ್ನಡ ಮಾತಾಡುವಾಗ ನಾಲಗೆ ಸರಿಯಾಗಿ ತಿರುಗುತ್ತಲೇ ಇರುತ್ತಿರಲಿಲ್ಲ. ಅದೃಷ್ಟ ಖುಲಾಯಿಸಿತು. ಸಂಗೀತ ನಿರ್ದೇಶಕನಾಗಿ ಅವಕಾಶ ಸಿಕ್ಕಿತು. ಹಳೇ ಇಂಗ್ಲಿಷ್‌ ಗೀತೆಗಳನ್ನು ಅನಾಮತ್ತು ಕದ್ದು ತಂದು, ಮಟ್ಟುಗಳನ್ನು ಅಡ್ಡಾದಿಡ್ಡಿ ತಟ್ಟಿ ರಾಗ ಕಟ್ಟುವುದರಲ್ಲಿ ಈತ ನಿಸ್ಸೀಮ. ಎಚ್‌ಟುಓ ಚಿತ್ರಕ್ಕೆ ಉಪ್ಪಿ ಜೊತೆ ನಿಂತು ವ್ಯಾನಿನಲ್ಲೇ ಸಂಗೀತ ಹಾಕಿದ ಅಪರೂಪದ ಅನುಭವ ಈತನದ್ದು.

ಈತನ ಹಾಸ್ಯ ಹಾಸ್ಯಾಸ್ಪದ ಅನ್ನೋದು ಈಗ ಜಗಜ್ಜಾಹೀರು. ಅಷ್ಟು ಸಾಲದೆಂಬಂತೆ ತಿಮ್ಮರಾಯಿ ಎಂಬ ಚಿತ್ರದಲ್ಲಿ ತಾನೇ ಹಾಡಿಕೊಂಡು, ನಾಯಕನಾಗಿ ಕುಣಿದು ಜನರನ್ನು ಗೋಳು ಹೊಯ್ದುಕೊಂಡವರು ಈ ಸಾಧು. ಗರಮಾ ಗರಂ ಹಾಡುಗಳಲ್ಲೂ ಗೀತೆಗಳಲ್ಲೂ ಒದ್ದೆಯಾದದ್ದು ಸಾಧುಗೆ ಸಿಕ್ಕ ಬೋನಸ್ಸು ಇರಬಹುದು.

ಇಷ್ಟಾಗಿ, ಕ್ರಿಯಾಶೀಲ ಉಪ್ಪಿಗೆ ಸಾಧು ಕೋಕಿಲಾ ಮೇಲೆ ಯಾಕೆ ಈ ಪರಿಯ ಪ್ರೀತಿ? ಅವರು ಹಾಯ್ದರೆ ಹಾಯಿಸಿಕೊಳ್ಳುವ, ಒದ್ದರೆ ಒದೆಸಿಕೊಳ್ಳುವ 'ಸಾಧು" ಎಂಬ ಕಾರಣಕ್ಕೆ ಅಂತ ಗೇಲಿಯಾಡುತ್ತಿದೆ ಗಾಂಧಿನಗರ. ಇದಕ್ಕೂ ಹಲ್ಲು ಕಿರಿದು ಕೆಟ್ಟ ನಗೆ ನಗುವ ಸಾಧು ಕೋಕಿಲಾ 'ರಕ್ತ ಕಣ್ಣೀರಿ"ಗೆ ಸಂಗೀತವನ್ನೂ ಕೊಡಲಿದ್ದಾರೆ. ಅವರನ್ನು ತಡೆದುಕೊಳ್ಳುವ ಶಕ್ತಿಯನ್ನು ಪ್ರೇಕ್ಷಕರಿಗೆ ಆ ಭಗವಂತ ಕರುಣಿಸಲಿ !

ನೀವು ಸಾಧುವನ್ನು ತಡೆದುಕೊಳ್ಳಬಲ್ಲಿರಾ?

English summary
Sadhu to direct Uppis Rakta Kaneeru
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada