ಗೀತ ಸಾಹಿತಿ ಲೋಕಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್
ತಮ್ಮ ವಿಭಿನ್ನ ಶೈಲಿಯ ಸಂಗೀತಕ್ಕೆ ಹೆಸರಾಗಿರುವ ಸಂಗೀತ ನಿರ್ದೇಶಕ ಗುರುಕಿರಣ್ ಗೀತ ಸಾಹಿತಿಯಾಗಿ ಬದಲಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಮೈಲಾರಿ' ಚಿತ್ರಕ್ಕೆ ಗೀತೆಯೊಂದನ್ನು ರಚಿಸುವ ಮೂಲಕ ಗೀತ ಸಾಹಿತ್ಯ ಲೋಕಕ್ಕೆ ಗುರುಕಿರಣ್ ಎಂಟ್ರಿ ಕೊಟ್ಟಿದ್ದಾರೆ.
'ಮೈಲಾರಿ' ಚಿತ್ರಕ್ಕೆ 'ಲಂಗಾ ದಾವಣಿ....' ಎಂಬ ಹಾಡನ್ನು ಬರೆಯುದರ ಜೊತೆಗೆ ಸಂಗೀತ ಸಂಯೋಜಿಸಿ ಸ್ವತಃ ಅವರೇ ಹಾಡಿರುವುದು ವಿಶೇಷ. ಈ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಬ್ಬ ಗೀತ ಸಾಹಿತಿ ಸಿಕ್ಕಂತಾಗಿದೆ. ಈಗಾಗಾಗಲೆ 'ಮೈಲಾರಿ' ಧ್ವನಿಸುರುಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಯಾದ ಮೊದಲ ದಿನವೇ 20 ಸಾವಿರ ಆಡಿಯೋಗಳು ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ಶೀರ್ಷಿಕೆ ಗೀತೆ "ಮೈಲಾಪುರದ ಮೈಲಾರಿ..." ಎಂಬ ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡಿರುವುದು ವಿಶೇಷ. "ಜಕ್ಕಣಕ್ಕ ಜಕ್ಕಣಕ್ಕ...."ಎಂಬ ಹಾಡನ್ನು ಶಂಕರ ಮಹದೇವನ್ ಹಾಡಿದ್ದಾರೆ. "ಬಿಟ್ ಬಿಡೆ..." ಎಂಬ ಹಾಡು ಕೈಲಾಶ್ ಖೇರ್ ಅವರ ಕಂಠದಿಂದ ಹೊರಹೊಮ್ಮಿದೆ.
ಚಿತ್ರದ ಎಲ್ಲ ಹಾಡುಗಳು ಈಗಾಗಲೆ ಜನಪ್ರಿಯವಾಗಿದ್ದು, ಕೇಳುಗರ ಹೃನ್ಮನ ತಣಿಸುತ್ತಿವೆ ಎಂದು ನಿರ್ಮಾಪಕರಾದ ಶ್ರೀಕಾಂತ್ ಹೇಳಿದ್ದಾರೆ. 'ಮೈಲಾರಿ' ಆಡಿಯೋ ಅಧಿಕೃತವಾಗಿ ಅಕ್ಟೋಬರ್ 30 ರಂದು ಚಿತ್ರದುರ್ಗದಲ್ಲಿ ಬಿಡುಗಡೆಯಾಗಲಿದೆ. ಆರ್ ಚಂದ್ರು ಅವರ ನಿರ್ದೇಶನದ ಬಗ್ಗೆ ಸದಾಭಿಪ್ರಾಯ ವ್ಯಕ್ತವಾಗಿದ್ದು ಚಿತ್ರ ಖಂಡಿತ ಯಶಸ್ವಿಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.


Click it and Unblock the Notifications











