»   » ಬೇಜವಾಬ್ದಾರಿ ಯುವಕರ ಚಿತ್ರ 'ಟಾಟಾ ಬಿರ್ಲಾ'!

ಬೇಜವಾಬ್ದಾರಿ ಯುವಕರ ಚಿತ್ರ 'ಟಾಟಾ ಬಿರ್ಲಾ'!

Posted By:
Subscribe to Filmibeat Kannada

ಯಾವುದಕ್ಕೂ ಕೆಲಸಕ್ಕೆ ಬಾರದ ಇಬ್ಬರು ಬೇಜವಾಬ್ದಾರಿ ಯುವಕರ ಕಥೆಯಾಧಾರಿತ ಚಿತ್ರ 'ನೀ ಟಾಟಾ ನಾ ಬಿರ್ಲಾ'. ಲಂಗು ಲಗಾಮಿಲ್ಲದಂತೆ ಓಡುತ್ತಿರುವ ಜೀವನದಲ್ಲಿ ಕಾಲ ಮತ್ತು ಸಂದರ್ಭದ ಹೇಗೆ ಅವರ ದಿಕ್ಕನ್ನು ಬದಲಾಯಿಸುತ್ತದೆ ಎನ್ನುವುದೇ ಕಥೆ.

ಜಮೀನ್ದಾರನ ಮಕ್ಕಳಾಗಿ ರವಿಚಂದ್ರನ್ ಮತ್ತು ಜಗ್ಗೇಶ್ ನೀ ಟಾಟಾ ನಾ ಬಿರ್ಲಾ ಚಿತ್ರದಲ್ಲಿ ಕಾಣಿಸುತ್ತಾರೆ. ಮದುವೆ ವಯಸ್ಸಾಗಿದ್ದರೂ ಪ್ರತಿಯೊಂದು ವಿಚಾರದಲ್ಲೂ ಅಸಡ್ಡೆ, ಬೇಜವಾಬ್ದಾರಿ, ಉಡಾಫೆತನ ಧಾರಾಳವಾಗಿ ಮೈಗೂಡಿರುತ್ತದೆ. ಇದೆನ್ನೆಲ್ಲಾ ನೋಡಿ ರೋಸಿ ಹೋದ ಇವರ ತಂದೆ ಬೇಜವಾಬ್ದಾರಿ ಮಕ್ಕಳನ್ನು ಸರಿದಾರಿಗೆ ತರಲು ಮನೆಯಿಂದ ಹೊರದಬ್ಬುತ್ತಾನೆ. 6 ತಿಂಗಳಲ್ಲಿ 5 ಲಕ್ಷ ರು. ಸಂಪಾದಿಸಿಕೊಂಡು ಬಂದರೆ ಮಾತ್ರ ಮನೆಯೊಳಗೆ ಪ್ರವೇಶ ಎಂದು ಅಬ್ಬರಿಸುತ್ತಾನೆ!

ಮನೆಯಿಂದ ಹೊರಬಿದ್ದ ಇವರು ಸೀದಾ ಬೆಂಗಳೂರಿಗೆ ಬರುತ್ತಾರೆ. ಹಲವರನ್ನು ವಂಚಿಸುತ್ತಾ ಹಣ ಮಾಡಲು ನೋಡುತ್ತಾರೆ. ಅದು ಸಾಧ್ಯವಾಗದೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರುತ್ತಾರೆ. ಇಲ್ಲಿ ಮಾಜಿ ಶಾಸಕನೊಬ್ಬನ ಪರಿಚಯವಾಗಿ ಆತ ಇವರಿಗೆ ಸಹಾಯ ಮಾಡುತ್ತಾನೆ. ಒಂದು ಕೆಲಸವನ್ನೂ ಒಪ್ಪಿಸುತ್ತಾನೆ. ಈ ಕೆಲಸವನ್ನು ಇಬ್ಬರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

ನಂತರ ಶಾಸಕ ಮತ್ತೊಂದು ಮುಖ ಪರಿಚಯವಾಗುತ್ತದೆ. ಈತ ಮೋಸಗಾರ ಎಂದು ಅರಿತ ಇವರು ತೇಜು ಮತ್ತು ಪೂಜಾ ಅವರನ್ನು ರಕ್ಷಿಸಿ ನಿಜವಾಗಿಯೂ ನಾಯಕರಾಗುತ್ತಾರೆ. ಹೀಗೆ ಕುತೂಹಲ ಘಟ್ಟಗಳಲ್ಲಿ ಊಹಿಸದ ತಿರುವುಗಳಲ್ಲಿ ಸಾಗುವ ಕಥೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ ಎನ್ನ್ನುತ್ತಾರೆ ನಿರ್ಮಾಪಕರು. ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಹಾಗೂ ಇಂಪಾದ ಹಾಡುಗಳು ಟಾಟ ಬಿರ್ಲಾದ ಹೈಲೈಟ್.

ಚಿತ್ರದಲ್ಲಿ ವಿ.ರವಿಚಂದ್ರನ್, ಜಗ್ಗೇಶ್, ಪೂಜಾಗಾಂಧಿ, ಜೆನ್ನಿಫರ್ ಕೊತ್ವಾಲ್, ಕೀರ್ತಿ ಚಾವ್ಲಾ, ಊರ್ವಶಿ, ಜ್ಯೋತಿ ರಾಣಿ, ಅನ್ಷು, ಕವಿತಾ, ದೊಡ್ಡಣ್ಣ, ಸಾಧು ಕೋಕಿಲ, ಸತ್ಯಜಿತ್, ಧರ್ಮ, ಕರಿಬಸವಯ್ಯ, ಬುಲೆಟ್ ಪ್ರಕಾಶ್, ರಾಜನ್ ಪಿ. ದೇವ್, ಕುರಿಗಳು ಪ್ರಕಾಶ್, ಪಾಪಪಾಂಡು ಖ್ಯಾತಿಯ ಚಿದಾನಂದ, ಹರೀಶ್ ರೈ ಮುಂತಾದವರ ತಾರಾಬಳಗವೇ ಇದೆ.

ಅನಿಲ್ ಕುಮಾರ್, ರವಿಕುಮಾರ್, ಅಜಿತ್ ಕುಮಾರತ್ರಯರು ನಿರ್ಮಿಸಿರುವ ಚಿತ್ರವನ್ನು ನರೇಂದ್ರ ಮಾಗಡಿ ನಿರ್ದೇಶಿಸಿದ್ದಾರೆ. ಛಾಯಾಗ್ರಹಣ ರಮೇಶ್ ಬಾಬು, ಸಂಕಲನ ಲಕ್ಷ್ಮಣ್ ರೆಡ್ಡಿ, ಸಂಭಾಷಣೆ ಮಳವಳ್ಳಿ ಸಾಯಿಪ್ರಕಾಶ್, ಸಾಹಿತ್ಯ ವಿ.ಮನೋಹರ್. ಜೂ.27ರಂದು ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada