ತೆಲುಗು ರಾಜಕುಮಾರನಿಗೆ ಈಗ ಭಾರೀ ಬೇಡಿಕೆ
ತೆಲುಗು ಚಿತ್ರ 'ಬಿಸಿನೆಸ್ ಮನ್' ಬಿಡುಗಡೆಯ ನಂತರ ಭಾರೀ ಬೇಡಿಕೆ ಪಡೆದುಕೊಂಡಿದ್ದಾರೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು. ಬಿಸಿನೆಸ್ ಮನ್ ಚಿತ್ರದ ಗಳಿಕೆ ಚೆನ್ನಾಗಿ ಆಗುತ್ತಿದೆ. ಜೊತೆಗೆ ಸಿನಿಮಾ ಮಹೇಶ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದ್ದು 'ದೂಕುಡು' ಚಿತ್ರದ ದಾಖಲೆಗೆ ಸೇರಬಹುದೆಂಬ ನಿರೀಕ್ಷೆಯಿದೆ.
'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು' ಎಂಬ ಮಲ್ಟಿಸ್ಟಾರರ್ ಚಿತ್ರದಲ್ಲಿ ಇನ್ನೊಬ್ಬ ಖ್ಯಾತ ತೆಲುಗು ನಟ ವೆಂಕಟೇಶ್ ಜೊತೆ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬುಗೆ ಈಗ ಸಾಕಷ್ಟು ಚಿತ್ರಗಳ ಆಫರ್ ಇದೆ. ಬಿಸಿನೆಸ್ ಮನ್ ಚಿತ್ರದ ಹಿಂದಿ ಆವೃತ್ತಿಗೂ ಕೂಡ ಪ್ರಿನ್ಸ್ ಆಯ್ಕೆಯಾಗಿದ್ದರು. ಆದರೆ ಅದರಿಂದ ಮಹೇಶ್ ಈಗ ದೂರವಾಗಿದ್ದಾರೆ.
ಸುದ್ದಿಮೂಲಗಳ ಪ್ರಕಾರ, ವಿಭನ್ನತೆಗೆ ಒತ್ತುನೀಡುವ ಮಹೇಶ್ ಹಿಂದಿ ಬಿಸಿನೆಸ್ ಮನ್ ಚಿತ್ರದಿಂದ ತಾವೇ ದೂರ ಸರಿದಿದ್ದಾರೆ. ನಂತರ ಅದು ರನವೀರ್ ಸಿಂಗ್ ಕೈ ತಲುಪಿದೆ. ಮಹೇಶ್ ಯಾವಾಗಲೂ ಪಾತ್ರ ಒಪ್ಪಿಕೊಳ್ಳುವುದರಲ್ಲಿ ಮಹಾ ಚತುರ. ಅವರ ಹಿಂದಿನ ಚಿತ್ರಗಳೇ ಇದಕ್ಕೆ ಸಾಕ್ಷಿ. ಇದನ್ನು ಪುಷ್ಟೀಕರಿಸಲಿವೆ ಈ ರಾಜಕುಮಾರನ ಮುಂದಿನ ಚಿತ್ರಗಳು. (ಒನ್ ಇಂಡಿಯಾ ಕನ್ನಡ)


Click it and Unblock the Notifications











