ಆಕಾಶ್ ಸ್ಟೂಡಿಯೋದಲ್ಲಿ ‘ಕಳ್ಳರ ಸಂತೆ’
ಮೇಘ ಮೂವೀಸ್ ಲಾಂಛನದಲ್ಲಿ ಸೈಯ್ಯದ್ ಅಮಾನ್ ಹಾಗೂ ರವೀಂದ್ರ ಅವರು ನಿರ್ಮಿಸುತ್ತಿರುವ 'ಕಳ್ಳರ ಸಂತೆ" ಚಿತ್ರಕ್ಕೆ ಆಕಾಶ್ ಸ್ಟೂಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಹಿಂದೆ 'ಆ ದಿನಗಳು", 'ಸ್ಲಂಬಾಲ"ದಂತಹ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದ ಈ ಸಂಸ್ಥೆ ತನ್ನ ಮೂರನೇ ಕಾಣಿಕೆಯಾಗಿ 'ಕಳ್ಳರ ಸಂತೆ' ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರ ಸಹ ವಿಭಿನ್ನ ಕಥೆಯನ್ನೊಳಗೊಂಡಿದೆ.
'ಸ್ಲಂಬಾಲ" ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮನಾ ಕಿತ್ತೂರು ಈ ಚಿತ್ರದ ನಿರ್ದೇಶಕಿ. ಚಿತ್ರೀಕರಣವನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿರುವ ನಿರ್ದೇಶಕರು 'ಕಳ್ಳರ ಸಂತೆ" ಸದಭಿರುಚಿಯ ಸಿನೆಮಾವಾಗಿ ಹೊರ ಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಅಗ್ನಿಶ್ರೀಧರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಸುಮನಾ ಕಿತ್ತೂರು ಹಾಗೂ ವಿ.ಮನೋಹರ್ ಗೀತರಚನೆ, ಡಿಫರೆಂಟ್ ಡ್ಯಾನಿ ಸಾಹಸ, ಮದನ್ ಹರಿಣಿ ನೃತ್ಯ ಹಾಗೂ ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಹರಿಪ್ರಿಯ, ಕಿಶೋರ್, ರಂಗಾಯಣ ರಘು, ಸುಧಾ ಬೆಳವಾಡಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











