For Quick Alerts
ALLOW NOTIFICATIONS  
For Daily Alerts

ಬೈಟೂ ಕಾಫೀ ಜೊತೆ ನಡೆದ 'ಕಿರು ಚಿತ್ರೋತ್ಸವ'

|

"ಎಲ್ಲಾ ಪಯಣಗಳೂ ಒಂದು ಸಣ್ಣ ಹೆಜ್ಜೆಯಿಂದಲೇ ಪ್ರಾರಂಭವಾಗುವುದೆಂಬ ಮಾತಿನಂತೆ, ಒಂದು ಸಣ್ಣ ಯೋಚನೆಯಿಂದ ಶುರುವಾಗಿದ್ದು, ಒಂದೇ ಸಮನೆ ಹಲವಾರು ತಿಂಗಳುಗಳಿಂದ, ನಮ್ಮ ಕಿವಿಯಲ್ಲಿ ಗುಂಯ್ ಗುಟ್ಟುತ್ತಾಯಿತ್ತು. ಆ ಮೊದಲ ಹೆಜ್ಜೆಯ ಸ್ಪರ್ಶಕ್ಕಾಗಿ ಮನಸು ವಿಲವಿಲ ಒದ್ದಾಡ್ತಾಯಿತ್ತು. ಹೌದು, ಕಿರುಚಿತ್ರ ಹಬ್ಬ ನಾವೂ ಯಾಕೆ ಮಾಡಬಾರದು ಅಂತ, ಎಂಟು ತಿಂಗಳ ಹಿಂದೆ ಮೂಡಿದ ಪ್ರಶ್ನೆಗೆ ಉತ್ತರ, ೨೨ನೇ ಜನವರಿ- ಭಾನುವಾರ, ಆಪ್ತರಂಗಮಂದಿರದಲ್ಲಿ ಸಿಕ್ಕಿತು.

ಈ ಕಿರುಚಿತ್ರ ಹಬ್ಬವನ್ನು ಆಯೋಜಿಸಲು ಕಾರಣಗಳು ಹಲವು. ಕಥೆ-ಕಿರು ಕಥೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಬಾಲ್ಯಾವಸ್ಥೆಯಲ್ಲಿ ಕಥೆಗಳು ಅಜ್ಜಿಯ ಮುಖಾಂತರ ನಮಗೆ ತಲುಪಿದರೆ, ಬೆಳೆಯುತ್ತಾ ಕೇಳುವ ಪಾಠ-ಪ್ರವಚನಗಳಲ್ಲಿ ಕಿರು ಕಥೆ ಆಧಾರಿತ ಭೋಧನೆಯೆ ಶಿಕ್ಷಣದ ಮೂಲ ಸರಕಾಗಿದೆ. ಈಗಿನ ಕಾಲದಲ್ಲಿ ಸದಾ ಎದುರಾಗೋ ಜಾಹೀರಾತು ಮತ್ತು ಸಿನಿಮಾಗಳಲ್ಲಿ ಸಣ್ಣ ಕಥೆಗಳೆ ಜೀವಾಳ. ಕಾದಂಬರಿಗಳನ್ನು ಸಿನಿಮಾಗಳಿಗೆ ಹೋಲಿಸಿದರೆ, ಸಣ್ಣ ಕಥೆಗಳನ್ನು ಕಿರುಚಿತ್ರಗಳಿಗೆ ಹೋಲಿಸಬಹುದು. ಎರಡೂ ತಮ್ಮದೇಯಾದ ರೀತಿಯಲ್ಲಿ ಪ್ರಭಾವಶಾಲಿ ಮಾಧ್ಯಮಗಳಾಗಿದ್ದರೂ, ಸಿನಿಮಾಗಳಿಗೆ ಸಿಗುತ್ತಿರುವ ಪ್ರಾಶಸ್ತ್ಯ ಕಿರುಚಿತ್ರಗಳಿಗೆ ಸಿಗುತ್ತಿಲ್ಲ.

ಇಂತಹ ಈ ಸಂದರ್ಭದಲ್ಲಿ ಕಿರುಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಪ್ರತಿಭಾವಂತರಿಗಾಗಿ, ಅವರ ಕೆಲಸಗಳಿಗೆ ಒಂದು ವೇದಿಕೆ ಒದಗಿಸುವ ಸಲುವಾಗಿ ಈ ಕಿರುಚಿತ್ರ ಹಬ್ಬ.ಇಷ್ಟೇ ಅಲ್ಲ, ಕಿರುಚಿತ್ರಗಳನ್ನು ಮಾಡುವವರಿದ್ದಾರೆ ಅನ್ನೋದೆ ಎಷ್ಟೊಂದು ಜನರಿಗೆ ಗೊತ್ತಿಲ್ಲ, ಹೀಗಿರುವಾಗ ಹಲವಾರು ಪ್ರತಿಭಾವಂತರು ಒಳ್ಳೊಳ್ಳೆ ಕಿರುಚಿತ್ರಗಳನ್ನು ಮಾಡಿದ್ದರೂ ಸಹ, ಅವರಿಗೆ ಪ್ರದರ್ಶಿಸಲು ವೇದಿಕೆ ಸಿಗುತ್ತಿಲ್ಲ ಅನ್ನೋದು ಒಂದು ಕೊರಗಾದರೆ, ಸಿಕ್ಕರೂ ಜಾಸ್ತಿ ಇರೋ ಪ್ರವೇಶ ಶುಲ್ಕ ಹಿಂದೇಟು ಹಾಕುವಂತೆ ಮಾಡುತ್ತೆ.

ಯಾಕೆಂದರೆ ಸಾಮಾನ್ಯವಾಗಿ ಕಿರುಚಿತ್ರಗಳನ್ನು ಕಡಿಮೆ ಹಣದಲ್ಲಿ ಮಾಡಿರುತ್ತಾರೆ, ಅಂತಹವರು ಯಾವತ್ತೂ ಬೆಳಕಿಗೆ ಬಾರದೆ ಇರಬಹುದು, ಅದನ್ನ ತಡೆಗಟ್ಟ ಬೇಕಾಗಿದೆ.ಅಂತಹವರಿಗೋಸ್ಕರ ಪ್ರವೇಶ ಶುಲ್ಕವಿರದೆ ಕಿರುಚಿತ್ರ ಹಬ್ಬವನ್ನು ನಡೆಸುವುದು ನಮ್ಮ ಮೂಲ ಉದ್ದೇಶವಾಗಿತ್ತು. ಬೇರೆ ರಾಜ್ಯಗಳಲ್ಲಿ ನಡೆಯುವಂತೆ ಪ್ರಭಾವಶಾಲಿ ಮಾಧ್ಯಮವಾಗಿ ಕಿರುಚಿತ್ರ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲ.

ಅಲ್ಲದೆ ಕಿರುಚಿತ್ರ ತಯಾರಕರನ್ನು ಒಂದೆಡೆ ಸೇರಿಸಲು ಸುವರ್ಣಾವಕಾಶ ಮತ್ತು ಪ್ರಾಯೋಜಕರಿಗೆ ಮತ್ತೊಂದು ಸಮೂಹವನ್ನು ತಲುಪುವ ಅವಕಾಶವನ್ನು ದೊರಕಿಸಿ ಕೊಡುವುದು ಸಹ ನಮ್ಮ ಉದ್ದೇಶವಾಗಿತ್ತು. ಇಂತಹ ಒಂದು ಸದುದ್ದೇಶದಿಂದ "ಕೆ.ವಿ ಸುಬ್ಬಣ್ಣ ಆಪ್ತ ಸಮೂಹ"ದ ಜೊತೆಯಲ್ಲಿ ಬೈಟೂ-ಕಾಫೀ ಕಿರುಚಿತ್ರ ಹಬ್ಬ-2011-12ನ್ನು ರಾಷ್ಟ್ರೀಯ ಮಟ್ಟದಲ್ಲಿ ಇದೇ 2012ರ ಜನವರಿ 22ರಂದು ಕೆ.ವಿ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ನಡೆಸಲಾಯಿತು.k

ಒಬ್ಬ ಹುಡುಗ ತಾನು ಪ್ರೀತಿಸುವ ಹುಡುಗಿಗೆ, ತನ್ನ ಪ್ರೀತಿಯನ್ನು ಬಿನ್ನಹಿಸಲು ನಿರ್ಧಾರಮಾಡಿ ಅವಳೆಡೆಗೆ ಹೋಗುವಾಗ, ತನ್ನ ಪ್ರೀತಿಯನ್ನು ಅವಳು ಒಪ್ಪಿಕೊಳ್ತಾಳೋ ಇಲ್ವೋ ಅಂತ ಇರುವ ಆತಂಕದಂತೆ, ನಮ್ಮಲ್ಲೂ ಆತಂಕವಿತ್ತು. ಎಲ್ಲರೂ ಪೂರ್ಣ ಪ್ರಮಾಣ ಸಾಫ್ಟ್-ವೇರ್ ಉದ್ಯೋಗಿಗಳಾಗಿದ್ದು ಕೊಂಡು ಆ ಕೆಲಸಕ್ಕೂ ಹಾಗೂ ಈ ಕೆಲಸಕ್ಕೂ ನ್ಯಾಯ ಒದಗಿಸೋದು ಚಾಲೆಂಜಿಂಗ್ ಆಗಿತ್ತು. ಹೃದಯದ ಪಾಡು ಮತ್ತು ಹೊಟ್ಟೆಪಾಡಿನ ಕೆಲಸಗಳ ನಡುವೆ ಭರ್ಜರಿ ಯುದ್ಧ ನಡೆಯುತ್ತಿತ್ತು. ಗುಣಮಟ್ಟದ ಹೋರಾಟ ಎರಡೂ ಕಡೆಯಿತ್ತು.

ತಂಡವನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿ ಎಲ್ಲಾ ಕೆಲಸಗಳ ಜವಾಬ್ದಾರಿಗಳನ್ನು ವಹಿಸಲಾಯ್ತು. ಮುನ್ನಡೆಸಲು ತಂಡಕ್ಕೊಬ್ಬ ನಾಯಕ ಹಾಗೂ ಜೊತೆಯಲ್ಲಿ ಇಬ್ಬರಂತಿದ್ದರು. ಎಂಥಾ ಯೋಜನಾಭರಿತವಾಗಿದ್ದರೂ ಕೊನೆಯಲ್ಲಿ ಎಲ್ಲಾ ಕುತ್ತಿಗೆಗೆ ಬಂದ ಹಾಗೆ ಆಗಿತ್ತು. ಆದರೂ ತಂಡದ ಸದಸ್ಯರೆಲ್ಲರೂ ಹಿಂಜರಿಯದೆ ಒಂದು ತಂಡವಾಗಿ ಶಿಸ್ತಿನಿಂದ, ಒಮ್ಮನಸ್ಸಿನಿಂದ ಹಗಲು-ರಾತ್ರಿ ಮಾಡಿದ ಪ್ರಯತ್ನ ಫಲ ನೀಡದೇ ಇರಲಿಲ್ಲ.

ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಪ್ರತಿ ಕಿರುಚಿತ್ರಗಳನ್ನು ಬಿತ್ತರಿಸಿದ ಮೇಲೆ, ಬಂದಿದ್ದ ತಯಾರಕರನ್ನು ಕರೆಯಿಸಿ ಅವರ ಜೊತೆ ಏರ್ಪಡಿಸಿದ್ದ ಸಂವಾದ ಸೊಗಸಾಗಿತ್ತು. ಪ್ರಶಸ್ತಿ ವಿಜೇತ ಕಿರುಚಿತ್ರಗಳು ನೆರೆದಿದ್ದವರನ್ನು ಎಣಿಕೆ ಮೀರಿ ಆಕರ್ಷಿಸಿದವು ಅಂದರೆ ಅತಿಶಯೋಕ್ತಿಯಲ್ಲ. ಗುರುಗಳಾದ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಹಾಗೂ ಎಲ್ಲಾ ಕಿರುಚಿತ್ರಗಳನ್ನು ವೀಕ್ಷಿಸಿ ಅವುಗಳಿಗೆ ಸಿಗಬೇಕಾದ ನ್ಯಾಯ-ಸ್ಥಾನಮಾನ ಒದಗಿಸಿದ ಶ್ರೀ ಮನು ಚಕ್ರವರ್ತಿ ಮತ್ತು ಶ್ರೀ ಎ.ಎನ್ ಮುಕುಂದ್ ಅವರುಗಳು ಬಂದಾಗ ಮದುಮಗಳಂತೆ ಸಿಂಗಾರಗೊಂಡಿದ್ದ ಆಪ್ತ ಮಂದಿರ, ಮದುಮಗನನ್ನು ನೋಡಿ ರಂಗೇರಿದಂತೆ ರಂಗೇರಿತ್ತು.

ಕೊನೆಯಲ್ಲಿ ಎಲ್ಲರೂ ಕಾದು ಕೂತಿದ್ದ, ಪ್ರಶಸ್ತಿ ವಿತರಣಾ ಸಮಾರಂಭವನ್ನು ಬಂದಿದ್ದ ಗಣ್ಯರು ನಮ್ಮಗಲಿರುವ ನಾಡಿನ ಹೆಸರಾಂತ ಸಿನಿಮಾಟೋಗ್ರಾಫರ್ ಶ್ರೀ ರಾಮಚಂದ್ರರವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿ, ಗೌರವ ಸೂಚಿಸಿ ಪ್ರಾರಂಭ ಮಾಡಿದರು. ಕೆ.ವಿ ಸುಬ್ಬಣ್ಣ ಆಪ್ತ ಸಮೂಹದ ಗೋಪಿನಾಥ್ ಅವರು ಸ್ವಾಗತ ಭಾಷಣ ಮಾಡಿದರೆ, ಕಿರುಚಿತ್ರ ಹಬ್ಬದ ನಿರ್ದೇಶಕರಾದ ಶ್ರೀಧರ್ ರೆಡ್ಡಿ ಕಿರುಚಿತ್ರ ಹಬ್ಬದ ಹಿನ್ನೆಲೆ ಬಗ್ಗೆ ಮಾತನಾಡಿದ ಮೇಲೆ, ನಡೆದ ಪ್ರಶಸ್ತಿ ವಿತರಣೆ ಎಷ್ಟೊ ಜನರ ಕನಸುಗಳನ್ನು ನನಸಾಗಿಸಿತ್ತು.

ನಂತರ ಶ್ರೀ ಮನು ಚಕ್ರವರ್ತಿ ಮತ್ತು ಶ್ರೀ ಎ.ಎನ್ ಮುಕುಂದ್ ಅವರುಗಳು ಯಾವ ರೀತಿ ಕಿರುಚಿತ್ರಗಳನ್ನು ಅಭ್ಯಸಿಸಿ ಸಿಗಬೇಕಾದ ನ್ಯಾಯ ಒದಗಿಸಿದ್ದು ಅಂತ ಸವಿವರವಾಗಿ ಹೇಳಿದ್ದು, ತುಂಬಾ ಉಪಯುಕ್ತವಾಗಿತ್ತು. ನಂತರ ಪದ್ಮಶ್ರೀ ಗಿರೀಶ್ ಕಾಸರವಳ್ಳಿಯವರು ಮಾತಾಡಿ “ಚಲನಚಿತ್ರ ಹಾಗೂ ಕಿರುಚಿತ್ರ ಎರಡೂ ಬೇರೆ ಬೇರೆ ಅಂತ ಹೇಳುತ್ತಾ, ಕಿರುಚಿತ್ರ ಒಂದು ಕಾವ್ಯವಿದ್ದಂತೆ" ಎಂದು ವಿವರಿಸಿ, ತಮ್ಮ ಕೆಲವು ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದು, ನೆರೆದಿದ್ದ ಯುವ-ಸಿನಿಮಾ ತಯಾರಕರಿಗೆ ತುಂಬಾ ಮಾಹಿತಿದಾಯಕವಾಗಿತ್ತು.

ಕೊನೆಯಲ್ಲಿ ಅದೂವರೆಗೂ ಸಾಂಗೋಪಸಂಗವಾಗಿ ಕಾರ್ಯಕ್ರಮ ನಿರೂಪಿಸಿದ ತಂಡದ ಸ್ನೇಹಿತೆ ಅಶ್ವಿನಿ, ವಂದನಾರ್ಪಣೆ ಮಾಡಿ ಮುಗಿಸಿದಾಗ ತಂಡದ ಸದಸ್ಯರ ಮೊಗದಲ್ಲಿ ಒಂದು ರೀತಿಯ ಧನ್ಯತಾಭಾವ ಒಡಮೂಡಿತ್ತು!, ಶ್ರೀ ರಾಮಚಂದ್ರರವರಿಗೆ ಅರ್ಪಿಸಿದ್ದು ಸಾರ್ಥಕವಾಗಿತ್ತು.

ಬೈಟೂ ಕಾಫೀ ಫಿಲ್ಮ್ಸ್ ಮತ್ತು ಕೆ.ವಿ ಸುಬ್ಬಣ್ಣ ಆಪ್ತ ಸಮೂಹದ ಪರವಾಗಿ

ಅಮರನಾಥ್ ವಿ. ಬ್ಯಾಡಗಿ, ಹರಪನಹಳ್ಳಿ

English summary
Short Film Festival arranged in K V Aptha Ranga Mandira on last 22, January 2012. Girish Kasaravalli watched this.
 

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more