ನವೆಂಬರ್ ಕೊನೆಗೆ ಉಪೇಂದ್ರ ಸೂಪರ್ ತೆರೆಗೆ
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ,ನಿರ್ದೇಶಿಸಿರುವ 'ಸೂಪರ್' ಚಿಹ್ನೆಯ ಚಿತ್ರ ನವೆಂಬರ್ ಕೊನೆಗೆ ಬಿಡುಗಡೆಯಾಗಲು ಸಿದ್ಧತೆ ನಡೆಸಿದೆ. ಚಿತ್ರ ಬಿಡುಗಡೆಗೆ ನವೆಂಬರ್ ಕೊನೆಗೆ ಮಿಸ್ ಆದರೆ ಡಿಸೆಂಬರ್ ಮೊದಲ ವಾರದಲ್ಲಿ ತೆರೆಗೆ ಅಪ್ಪಳಿಸುವುದು ಗ್ಯಾರಂಟಿ ಎನ್ನುತ್ತವೆ ಮೂಲಗಳು.
ಚಿತ್ರ ವಿಚಿತ್ರ ಗೆಟಪ್‌ಗಳು, ವೈವಿಧ್ಯಮಯ ಶೀರ್ಷಿಕೆಗಳೊಂದಿಗೆ ಹೆಸರು ಮಾಡಿದ ನಟ ಉಪೇಂದ್ರ. ಈಗ ಮತ್ತೊಮ್ಮೆ ಅವರು ಸೂಪರ್ ಚಿಹ್ನೆಯನ್ನು ಹಿಡಿದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರ ತಂತ್ರ ಫಲಿಸುತ್ತದೋ ಇಲ್ಲವೋ ಎಂಬುದು ಕಾದು ನೋಡಬೇಕು.
ಸುದೀರ್ಘ ಹತ್ತು ವರ್ಷಗಳ ಬಳಿಕ ಅವರು ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಚಿತ್ರೋದ್ಯಮ ಸೇರಿದಂತೆ ಉಪೇಂದ್ರ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳಿವೆ. ಚೆನ್ನೈನಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಹಾಗೂ ರೀರೆಕಾರ್ಡಿಂಗ್ ಕೆಲಸ ಭರದಿಂದ ಸಾಗುತ್ತಿದೆ.
ಚಿತ್ರದ ಧ್ವನಿಸುರುಳಿ ದೀಪಾವಳಿ ಅಥವಾ ಹಬ್ಬದ ಬಳಿಕ ಮಾರುಕಟ್ಟೆಗೆ ಬರುವ ಸಾಧ್ಯತೆ. ಈ ಚಿತ್ರದ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ನೀಡದೆ ಉಪೇಂದ್ರ ಕುತೂಹಲ ಕಾದುಕೊಂಡಿದ್ದಾರೆ. ಚಿತ್ರದಲ್ಲಿ ನಯನತಾರಾ ಅವರ ಅಭಿನಯ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತವೆ ಮೂಲಗಳು. ಅಂದಹಾಗೆ ಈ ಚಿತ್ರ ತೆಲುಗು, ತಮಿಳು ಭಾಷೆಗಳಲ್ಲೂ ತೆರೆಕಾಣಲಿದೆ.


Click it and Unblock the Notifications











