ಮಲೇಷಿಯಾದಲ್ಲಿ ಸುದೀಪ್, ಐಂದ್ರಿತಾ ತಕಧಿಮಿತಾ!
ವೀರ ಪರಂಪರೆ ಚಿತ್ರತಂಡ ಮಲೇಷ್ಯಾಗೆ ಪ್ರಯಾಣ ಬೆಳಸಿದೆ. ಮಲೇಷಿಯಾದ ಸುಂದರ ತಾಣಗಳಲ್ಲಿ ಹಾಡೊಂದರ ಚಿತ್ರೀಕರಣ ನಡೆಯಲಿದ್ದು ಚಿತ್ರದ ನಾಯಕ ನಟ ಸುದೀಪ್ ಮತ್ತು ನಾಯಕಿ ತಕಧಿಮಿತಾ ಎಂದು ಕುಣಿಯಲಿದ್ದಾರೆ. ಮುರಳಿ ನೃತ್ಯ ನಿರ್ದೇಶನದಲ್ಲಿ ಈ ಹಾಡಿನ ಚಿತ್ರೀಕರಣ ಸಾಂಗವಾಗಿ ಸಾಗಲಿದೆ.
ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 30ನೇ ಚಿತ್ರವಿದು. ಈಗಾಗಲೆ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ವಿಶೇಷ ಹಾಡೊಂದನ್ನು ಚಿತ್ರಕ್ಕೆ ಸೇರ್ಪಡೆ ಮಾಡಲಾಗುತ್ತಿದ್ದು, ಹಾಡಿನ ಚಿತ್ರೀಕರಣದ ಬಳಿಕ 'ವೀರ ಪರಂಪರೆ' ಸೆನ್ಸಾರ್ ಗೆ ತೆರಳಲಿದೆ.
ಶ್ರೀ ಚೆಲುವಾಂಬಿಕಾ ಪಿಕ್ಚರ್ಸ್ ಲಾಂಛನದಲ್ಲಿ ಎಸ್ ನಾರಾಯಣ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ನಾರಾಯಣ್ ಹೊತ್ತಿರುವುದು ವಿಶೇಷ. ಈಗಾಲೆ ಗುಲ್ಬರ್ಗ, ಬೆಳಗಾವಿ, ಕಿತ್ತೂರು ಮತ್ತು ಮೈಸೂರಿನಲ್ಲಿ 150 ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರೆಬಲ್ ಸ್ಟಾರ್ ಅಂಬರೀಷ್ ಜೊತೆ ಸುದೀಪ್ ನಟಿಸುತ್ತಿದ್ದಾರೆ. ಅಂಬರೀಷ್ ಅವರ ಮಡದಿಯಾಗಿ ವಿಜಯಲಕ್ಷ್ಮಿ ಸಿಂಗ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ, ಆರ್ ಗಿರೀಶ್ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











