Kotigobba Re-release; 'ಕೋಟಿಗೊಬ್ಬ' ದಾದಾ ಅಬ್ಬರ ನೋಡಲು ಫ್ಯಾನ್ಸ್ ಕಾತರ; ಟಿಕೆಟ್ ಸೋಲ್ಡೌಟ್
ಹಳೇ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ಮುಂದುವರೆದಿದೆ. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ಸಿನಿಮಾ ಹೊಸ ರೂಪದಲ್ಲಿ 25 ವರ್ಷಗಳ ಬಳಿಕ ಮತ್ತೆ ತೆರೆಗೆ ಬರ್ತಿದೆ. ಮುಂದಿನ ವಾರ(ಏಪ್ರಿಲ್ 10) ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಾರಕ್ಕೂ ಮುನ್ನ ಶೋ ಹೌಸ್‌ಫುಲ್ ಆಗಿದೆ.
2001ರಲ್ಲಿ 'ಕೋಟಿಗೊಬ್ಬ' ಸಿನಿಮಾ ಬಿಡುಗಡೆಯಾಗಿ 30 ವರ್ಷ ಪ್ರದರ್ಶನ ಕಂಡಿತ್ತು. ದಾದಾ ಖದರ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಮಾಸ್ ಜೊತೆ ಫ್ಯಾಮಿಲಿ ಆಡಿಯನ್ಸ್‌ಗೂ ಇಷ್ಟವಾಗುವಂತಹ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ತಮಿಳಿನ 'ಬಾಷಾ' ಸಿನಿಮಾ ರೀಮೆಕ್ ಆಗಿದ್ದ ಈ ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಿದ್ದರು. ಪ್ರಿಯಾಂಕ ಉಪೇಂದ್ರ ನಾಯಕಿಯಾಗಿ ಮಿಂಚಿದ್ದರು. ನಂಜುಂಡ ಹಾಗೂ ಜೈಸಿಂಹ ಎನ್ನುವ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ವಿಷ್ಣು ಕಮಾಲ್ ಮಾಡಿದ್ದರು.

ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಏಪ್ರಿಲ್ 10ರಂದು ನಾಲ್ಕು ಶೋಗಳಿವೆ. ಈಗಾಗಲೇ ಬೆಳಗ್ಗೆ 10 ಗಂಟೆ ಶೋ ಟಿಕೆಟ್ ಸೋಲ್ಡೌಟ್ ಆಗೋಗಿದೆ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡಿದ್ದಾರೆ. ಪ್ರಸನ್ನ ಸೇರಿ ರಾಜ್ಯದ ಹಲವು ಭಾಗಗಳಲ್ಲಿ 'ಕೋಟಿಗೊಬ್ಬ' ಸಿನಿಮಾ ದರ್ಬಾರ್ ಶುರುವಾಗಲಿದೆ.
ವಿಷ್ಣುವರ್ಧನ್ ಹಾಗೂ ಪ್ರಿಯಾಂಕಾ ಜೊತೆಗೆ ರಮೇಶ್ ಭಟ್, ಸತ್ಯಪ್ರಿಯಾ, ಅವಿನಾಶ್, ಆಶಿಶ್ ವಿದ್ಯಾರ್ಥಿ, ಅಭಿಜಿತ್ ಹೀಗೆ ದೊಡ್ಡ ತಾರಾಗಣ 'ಕೋಟಿಗೊಬ್ಬ' ಚಿತ್ರದಲ್ಲಿದೆ. 'ಬಾಷಾ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ದೇವಾ ಕನ್ನಡ ಚಿತ್ರಕ್ಕೂ ಟ್ಯೂನ್ ಹಾಕಿದ್ದರು. ಕಮಲಾಕರ್ ಹಾಗೂ ಸೂರಪ್ಪ ಬಾಬು ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕೆ. ಕಲ್ಯಾಣ್ ಸಾಹಿತ್ಯದ ಚಿತ್ರದ ಹಾಡುಗಳನ್ನು ಸಿನಿರಸಿಕರು ಇಂದಿಗೂ ಮರೆತ್ತಿಲ್ಲ.
ಇತ್ತೀಚೆಗೆ 'ಕೋಟಿಗೊಬ್ಬ' ಸಿನಿಮಾ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದ್ಧೂರಿ ಸಮಾರಂಭ ಏರ್ಪಡಿಸಲಾಗಿತ್ತು. ನಗರದ ಟೌನ್‌ಹಾಲ್‌ನಲ್ಲಿ ಮಾರ್ಚ್ 8ರಂದು ನಡೆದ ಕಾರ್ಯಕ್ರಮಕ್ಕೆ ಉಪೇಂದ್ರ, ಪತ್ನಿ ಪ್ರಿಯಾಂಕ ಉಪೇಂದ್ರ, ದೇವರಾಜ್, ನಟ ಗಣೇಶ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ದಾದಾ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದರು.
'ಕೋಟಿಗೊಬ್ಬ' ಚಿತ್ರದಲ್ಲಿ ನಾಯಕಿಯಾಗಿ ನಟಿಸೋಕೆ ಉಪೇಂದ್ರ ಕಾರಣ ಎಂದು ಇದೇ ವೇಳೆ ಪ್ರಿಯಾಂಕ ಹೇಳಿದ್ದರು. ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಈ ಸಿನಿಮಾ ಅವಕಾಶ ಬಂದಿತ್ತು. ಆಗ ಉಪೇಂದ್ರ ಫೋನ್ ಮಾಡಿ ಮಾತನಾಡಿದ್ದರು. ಇಂತಹ ಹೃದಯವಂತ ವ್ಯಕ್ತಿಯ ಜೊತೆ ನಟಿಸೋ ಅವಕಾಶ ಸಿಕ್ಕಿರುವುದು ನಿನ್ನ ಪುಣ್ಯ, ನಟಿಸುವುಕ್ಕೆ ಒಪ್ಪಿಕೋ ಎಂದ್ರು. ಹಾಗಾಗಿ ಅಂದು ಚಿತ್ರದಲ್ಲಿ ನಟಿಸಿದೆ ಎಂದಿದ್ದರು.
ಅಮಿತಾಬ್ ಬಚ್ಚನ್ ನಟಿಸಿದ್ದ 'ಹಮ್' ಚಿತ್ರದಿಂದ ಪ್ರೇರಣೆಗೊಂಡು ತಮಿಳಿನಲ್ಲಿ 'ಬಾಷಾ' ಸಿನಿಮಾ ನಿರ್ಮಿಸಲಾಗಿತ್ತು. ಸುರೇಶ್ ಕೃಷ್ಣ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮ್ಯಾಜಿಕ್ ಮಾಡಿದ್ದರು. ಇವತ್ತಿಗೂ 'ಬಾಷಾ' ಕ್ರೇಜ್ ಮೀರಿಸುವಂತಹ ಚಿತ್ರದಲ್ಲಿ ರಜನಿಕಾಂತ್ ಕೂಡ ನಟಿಸೋಕೆ ಸಾಧ್ಯವಾಗಲಿಲ್ಲ. ಜಪಾನ್ ದೇಶದಲ್ಲಿ ಕೂಡ ಈ ಸಿನಿಮಾ ತೆರೆಕಂಡು ಹಿಟ್ ಆಗಿತ್ತು.
'ಬಾಷಾ' ಕಥೆಯನ್ನು ಕನ್ನಡಕ್ಕೆ ತಂದು ನಾಗಣ್ಣ ಮತ್ತವರ ತಂಡ ಗೆದ್ದಿತ್ತು. ವಿಷ್ಣುವರ್ಧನ್ ತಮ್ಮ ಅಭಿನಯದ ಮೂಲಕವೇ ಚಿತ್ರವನ್ನು ಗೆಲುವಿನ ದಡ ಸೇರಿಸಿದ್ದರು. ಚಿತ್ರಕ್ಕೆ ಹಾಡುಗಳು ಪ್ಲಸ್ ಆಗಿತ್ತು. ಎಲ್ಲಾ ಸೇರಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಭಿಮಾನಿಗಳು ಮತ್ತೆ ಜೈಸಿಂಹ ಆಗಿ ದಾದಾ ಆರ್ಭಟ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











