'ಧೂಳ್'ಎಬ್ಬಿಸಲಿದ್ದಾರೆ ಯೋಗೀಶ್, ಅಂದ್ರಿತಾ ರೇ
ಲೂಸ್ ಮಾದ ಉರುಫ್ ಯೋಗೀಶ್ ಮತ್ತೊಂದು ತಮಿಳು ರೀಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ತಮಿಳು ನಟ ಧನುಷ್ ನಟಿಸಿದ 'ಕಾದಲ್ ಕೋಂಡೇನ್' ಮತ್ತು 'ಪೊಲ್ಲದವನ್' ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಿವೆ. ಈಗ 'ತಿರುವಿಲೆಯಾದಲ್ ಆರಂಭಂ' ಎಂಬ ತಮಿಳು ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ತಮಿಳಿನಲ್ಲಿ ಧನುಷ್, ಶ್ರಿಯಾ ಮತ್ತು ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿದ್ದರು.
ಯೋಗೀಶ್ ರ ಹೊಸ ರೀಮೇಕ್ ಚಿತ್ರಕ್ಕೆ 'ಧೂಳ್'ಎಂದು ಹೆಸರಿಡಲಾಗಿದೆ. ಜುಲೈನಲ್ಲಿ ಈ ಚಿತ್ರ ಸೆಟ್ಟೇರಲಿದೆ. ಖ್ಯಾತ ನಿರ್ದೇಶಕ ಎಂ ಎಸ್ ರಾಜಶೇಖರ್ ಅವರ ಮಗ ಎಂ ಆರ್ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರವನ್ನು ಸುನಿಲ್ ನಿರ್ಮಿಸುತ್ತಿದ್ದು ಚಿಗರೆ ಕಂಗಳ ನಟಿ ಅಂದ್ರಿತಾ ರೇ ನಾಯಕಿ.
'ಮುಂಗಾರು ಮಳೆ' ಖ್ಯಾತಿಯ ಕೃಷ್ಣ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ತಮಿಳು ನಟ ಧನುಷ್ ರ ಎಲ್ಲ ಚಿತ್ರಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸಲಾಗುತ್ತಿದೆ. ಹಾಗಾಗಿ ಯೋಗೀಶ್ ಸದ್ಯಕ್ಕೆ ಬಿಜಿ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











