»   » ಕನ್ನಡ ಚಿತ್ರರಂಗಕ್ಕೆ ಮತ್ತೊಂದು 'ಆಕ್ಸಿಡೆಂಟ್'

ಕನ್ನಡ ಚಿತ್ರರಂಗಕ್ಕೆ ಮತ್ತೊಂದು 'ಆಕ್ಸಿಡೆಂಟ್'

Posted By:
Subscribe to Filmibeat Kannada

ಆಕ್ಸಿಡೆಂಟ್ ಅಂದಾಕ್ಷಣ 23 ವರ್ಷಗಳ ಹಿಂದೆ ಶಂಕರ್ ನಾಗ್ ನಟಿಸಿ, ನಿರ್ದೇಶಿಸಿದ್ದ ಆಕ್ಸಿಡೆಂಟ್ ನೆನಪಾಗುತ್ತದೆ. 1985ರಲ್ಲಿ ಬಿಡುಗಡೆಯಾದ ಶಂಕರ್ ಅವರ ಅಕ್ಸಿಡೆಂಟ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಬಿಂಬಿಸಿತ್ತು. ಆಕಸ್ಮಿಕವೆಂಬಂತೆ ಈಗ ಮತ್ತೆ ರಮೇಶ್ 'ಆಕ್ಸಿಡೆಂಟ್' ಹೆಸರಿನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆಕ್ಸಿಡೆಂಟ್ ಅನ್ನುವ ಹೆಸರನ್ನೇ ಎತ್ತಿಕೊಂಡಿರುವುದು ಮಾತ್ರ ಆಕ್ಸಿಡೆಂಟ್ ಅಲ್ಲ.

ಸತ್ಯವಾನ್ ಸಾವಿತ್ರಿ, ರಾಮ ಶಾಮ ಭಾಮದ ಚಿತ್ರಗಳು ಗೆದ್ದ ನಂತರ ರಮೇಶ್ ಅವರಿಗೆ ತಮ್ಮ ನಿರ್ದೇಶನದ ಮೇಲೆ ನಂಬಿಕೆ ಬಂದು ಆಕ್ಸಿಡೆಂಟ್ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣ ಶುರುವಾಗಿ ಒಂದು ಘಟ್ಟಕ್ಕೆ ಬಂದು ನಿಂತಿದೆ. ಅಂದುಕೊಂಡಂತೆ ಎಲ್ಲಾ ಮುಗಿದರೆ ಮಾರ್ಚ್ ಕೊನೆಯ ವಾರದಲ್ಲಿ ತೆರೆ ಕಾಣಬಹುದು. ಚಿತ್ರದಲ್ಲಿ ಸಾಕಷ್ಟು ಹೊಸ ಮುಖಗಳಿಗೆ ಅವಕಾಶ ಕೊಡಲಾಗಿದೆ. ಎಫ್‌ಎಂಗಳಲ್ಲಿ ಮಧುರ ಮಾತುಗಾರಿಕೆ ಮೂಲಕ ಮೋಡಿ ಮಾಡಿದ್ದ ಚೈತನ್ಯ ಹೆಗಡೆ, ಇನ್ನೂ ಹಲವಾರು ರೇಡಿಯೋ ಜಾಕಿಗಳು ಬಣ್ಣ ಹಚ್ಚಿಕೊಂಡಿದ್ದಾರೆ. ನಿರ್ದೇಶಕ ದಿನೇಶ್ ಬಾಬು ಸಹಾ ನಟಿಸಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಸಂಗೀತದ ಹೊಸ ಅಲೆ ಎಬ್ಬಿಸಿದ ರಿಕಿ ಕೇಜ್ ಸಂಗೀತ ಸಂಯೋಜಿಸಿದ್ದಾರೆ.

ಬಿ.ಆರ್.ಲಕ್ಷ್ಮಣರಾವ್, ರಾಜೇಂದ್ರ ಕಾರಂತ್ ಮತ್ತು ಶಿವು ಸಾಹಿತ್ಯ ಇದೆ. ಕಷ್ಟ ಪಡದೆ ಇಷ್ಟಪಟ್ಟು ಕನ್ನಡ ಕಲಿತು ಪಟಪಟನೆ ಅರಳು ಹುರಿದಂತೆ ಮಾತನಾಡುವ ಪೂಜಾಗಾಂಧಿ, ಈ ಚಿತ್ರ ನನಗೆ ತುಂಬಾ ಖುಷಿಕೊಟ್ಟಿದೆ, ರಮೇಶ್ ಅವರಂತ ನಿರ್ದೇಶಕರೊಡನೆ ಇನ್ನೂ ಹತ್ತು ಸಿನಿಮಾಗಳಲ್ಲಿ ನಟಿಸಬೇಕೆಂದು ಆಸೆ ಇದೆ ಎಂದು ಮನೋಭಿಷ್ಟೆಯನ್ನು ಬಿಚ್ಚಿಟ್ಟರು. ಚಿತ್ರದ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್ ನನಗೆ ತುಂಬಾ ಇಷ್ಟ ಆದರು ಏಕೆಂದರೆ ಅವರು ನಮ್ಮ ಅಜ್ಜನನ್ನೇ ಹೋಲುತ್ತಾರೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಕ್ಲಾಸ್ ಮತ್ತು ಮಾಸ್‌ಗೆ ಇಷ್ಟವಾಗುವಂತೆ ಪೂಜಾಗಾಂಧಿ ಮತ್ತು ಅಕ್ಷರಾ ಎಂದು ಹೆಸರು ಬದಲಾಯಿಸಿಕೊಂಡಿರುವ ರೇಖಾ ಇದ್ದಾರೆ.

ಬಣ್ಣದ ವೇಷ, ಗಳಿಗೆ, ನಾಗಮಂಡಲದಂತಹ ಪ್ರಯೋಗಾತ್ಮಕ ಚಿತ್ರಗಳಗೆ ಕೆಲಸ ಮಾಡಿರುವ ಜಿ.ಎಸ್.ಭಾಸ್ಕರ್ ಅವರ ಛಾಯಾಗ್ರಹಣ ಆಕ್ಸಿಡೆಂಟ್ ಚಿತ್ರಕ್ಕಿದೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಹೂಮಳೆ" ಚಿತ್ರದಲ್ಲಿ ಭಾಸ್ಕರ್ ಛಾಯಾಗ್ರಹಣದಲ್ಲಿ ರಮೇಶ್ ನಟಿಸಿದ್ದರು. ಈಗ ಮತ್ತೆ ಆಕ್ಸಿಡೆಂಟ್‌ನಲ್ಲಿ ಒಂದಾಗುತ್ತಿರುವುದು ಚಿತ್ರದ ವಿಶೇಷ.

ಇನ್ನು ಚಿತ್ರಕತೆಗೆ ಬಂದರೆ, ತನ್ನ ಪತ್ನಿಯನ್ನು ಕೊಲೆ ಮಾಡಿದವರನ್ನು ಒಂದು ಆಕ್ಸಿಡೆಂಟ್ ಮೂಲಕ ಪತ್ತೆ ಮಾಡುತ್ತಾ ಹೋಗುವ ನಾಯಕ. ಆತನ ಸಹಾಯಕ್ಕೆ ಬರುವ ಗೆಳೆಯರು. ಹೀಗೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಎಲ್ಲೂ ಬೋರೊಡೆಸದೆ ಸಾಗುತ್ತದೆ ಚಿತ್ರಕತೆ. ಯಾವುದೋ ಒಂದು ವರ್ಗದ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಚಿತ್ರ ತೆಗೆದಿಲ್ಲ. ಎಲ್ಲ ವರ್ಗದ ಪ್ರೇಕ್ಷಕರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಚಿತ್ರವನ್ನು ಮಾಡಿದ್ದೀನಿ ಎನ್ನುತ್ತಾರೆ ರಮೇಶ್. ಚಿತ್ರ ಹಾಡು, ಕುಣಿತ, ಹೊಡೆದಾಟ, ಹಾಸ್ಯ ಸೇರಿದಂತ ನವರಸಗಳ ಮಸಾಲೆಯನ್ನೇ ಹೊಂದಿದೆ.

ಚಿತ್ರಕ್ಕೆ ಮೂರು ಕೋಟಿ ಖರ್ಚಾಗಿದೆ ಎನ್ನುತ್ತವೆ ನಂಬಲರ್ಹ ಮೂಲಗಳು. ಮತ್ತೊಂದು ಸಂತೋಷದ ಸುದ್ದಿ ಎಂದರೆ, ಸಾಪ್ಟ್‌ವೇರ್ ಕಂಪನಿಗಳು ಕನ್ನಡ ಚಿತ್ರರಂಗದಲ್ಲಿ ಬಂಡವಾಳ ಹೂಡುತ್ತಿವೆ. ಆಕ್ಸಿಡೆಂಟ್ ಚಿತ್ರಕ್ಕ್ಕೆ ವೀಸ್ಕ್ಸೇರ್ ಇನ್ಫೋಟೆಕ್ ಮತ್ತು ವಿಶಿಷ್ಟ ಪ್ರೊಡಕ್ಷನ್ಸ್ ಹಣ ತೊಡಗಿಸಿವೆ.

ಜೀವನದಲ್ಲಿ ಎಲ್ಲವೂ ಆಕ್ಸಿಡೆಂಟ್. ಮನುಷ್ಯ ಪೆನ್ನು, ಪೆನ್ಸಿಲ್ ಕಂಡುಹಿಡಿದಿದ್ದು, ವಿದ್ಯುತಚ್ಚಕ್ತಿ ಕಂಡುಹಿಡಿದಿದ್ದು ಎಲ್ಲವೂ ಆಕ್ಸಿಡೆಂಟ್. ಈ ಅನ್ವೇಷಣೆಗಳನ್ನು ಆಕ್ಸಿಡೆಂಟ್ ಅನ್ನುತ್ತಾರೆ. ಚಿತ್ರದಲ್ಲಿ ಯಾವುದೇ ವಿಧವಾದ ಹಿಂಸೆ, ರಕ್ತಪಾತವಿಲ್ಲ. ಕತೆ ಹೆಣ್ಣುಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ ಎನ್ನುತ್ತಾರೆ ರಮೇಶ್.

(ದಟ್ಸ್‌ಕನ್ನಡ ಸಿನಿವಾರ್ತೆ)

ರಕ್ತಪಾತವಿಲ್ಲದ ಆಕ್ಸಿಡೆಂಟ್ ಚಿತ್ರದ ಗ್ಯಾಲರಿ ವೀಕ್ಷಿಸಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada