»   » ಪಳೆಯುಳಿಕೆ ಪಾತ್ರಗಳಿಂದ ಪುರಾಣದ ಪಾತ್ರಗಳತ್ತ ...

ಪಳೆಯುಳಿಕೆ ಪಾತ್ರಗಳಿಂದ ಪುರಾಣದ ಪಾತ್ರಗಳತ್ತ ...

Posted By:
Subscribe to Filmibeat Kannada

*ಅನಂತ್‌

ಜಮೀನ್ದಾರ್ರು ವಿಷ್ಣುವರ್ಧನ್‌ ‘ಜಮದಗ್ನಿ’ಯ ಪಾತ್ರದಲ್ಲಿ ನಟಿಸಲಿದ್ದಾರೆಯೇ ?

ಮಹಾನ್‌ ದೈವಭಕ್ತೆ ಜಯಶ್ರೀದೇವಿ ನಡೆಸುತ್ತಿರುವ ಪ್ರಯತ್ನಗಳನ್ನು ನೋಡಿದರೆ ಸದ್ಯಕ್ಕೆ ಪೊದೆ ಮೀಸೆ ಅಂಟಿಸಿಕೊಳ್ಳುತ್ತಿರುವ ವಿಷ್ಣು ವರ್ಧನ್‌- ಗಡ್ಡ ಅಂಟಿಸಿಕೊಂಡು ಜಮದಗ್ನಿ ಆದರೂ ಆಗಬಹುದು.

ತಮ್ಮ ಭಾರೀ ಬಜೆಟ್ಟಿನ ಹಾಗೂ ಮಹತ್ವಾಕಾಂಕ್ಷೆಯ ‘ಶ್ರೀ ರೇಣುಕಾದೇವಿ’ ಚಿತ್ರದ ಜಮದಗ್ನಿ ಮುನಿಯ ಪಾತ್ರವನ್ನು ವಿಷ್ಣುವರ್ಧನ್‌ ಅವರಿಂದಲೇ ಮಾಡಿಸಬೇಕು ಅನ್ನುವುದು ಜಯಶ್ರೀದೇವಿ ಆಸೆ. ಜಮದಗ್ನಿ ಪಾತ್ರಕ್ಕೆ ವಿಷ್ಣು ಹೇಳಿ ಮಾಡಿಸಿದಂತಿದ್ದಾರೆ ಅನ್ನುವುದು ಜಯಶ್ರೀ ಹಿಂಬಾಲಕರ ಅನ್ನಿಸಿಕೆ.

ಈ ಮುನ್ನ ‘ಶ್ರೀ ಮಂಜುನಾಥ’ ಚಿತ್ರದಲ್ಲಿ ಶಿವನ ಪಾತ್ರದಲ್ಲಿ ನಟಿಸುವಂತೆ ವಿಷ್ಣುವರ್ಧನ್‌ ಅವರನ್ನು ಜಯಶ್ರೀದೇವಿ ಕೇಳಿದ್ದರು. ವಿಷ್ಣು ಒಪ್ಪಲಿಲ್ಲವಾದ್ದರಿಂದ ಈಶ್ವರನ ಪಾತ್ರ ತೆಲುಗು ಸೂಪರ್‌ಸ್ಟಾರ್‌ ಚಿರಂಜೀವಿ ಪಾಲಾಗಿತ್ತು . ಮರಳಿ ಯತ್ನವ ಮಾಡು ಅನ್ನುವುದರಲ್ಲಿ ನಂಬಿಕೆ ಹೊಂದಿರುವ ಜಯಶ್ರೀದೇವಿ ಮತ್ತೆ ವಿಷ್ಣುವರ್ಧನ್‌ ಅವರನ್ನು ಎಡತಾಕಿದ್ದಾರೆ.

ಸದ್ಯಕ್ಕೆ ವಿಷ್ಣುವರ್ಧನ್‌ ಅವರು ಗೋವಾದಲ್ಲಿ ರಜೆ ಕಳೆಯುತ್ತಿದ್ದಾರೆ. ಜನವರಿ 28 ರ ಸುಮಾರಿಗೆ ವಿಷ್ಣು ಬೆಂಗಳೂರಿಗೆ ವಾಪಸ್ಸಾಗುವರು. ಆನಂತರವಷ್ಟೇ ಜಮದಗ್ನಿ ಪಾತ್ರದಲ್ಲಿ ನಟಿಸಲು ಹ್ಞೂಂ ಅನ್ನುವುದು ಅಥವಾ ಉಹ್ಞೂಂ ಅನ್ನುವುದರ ಕುರಿತ ನಿರ್ಧಾರ.

ರೇಣುಕಾದೇವಿ ಪಾತ್ರದಲ್ಲಿ ಸೌಂದರ್ಯ ನಟಿಸುತ್ತಿದ್ದಾರೆ. ಜಮದಗ್ನಿ ಪಾತ್ರದಲ್ಲಿ ನಟಿಸಲು ವಿಷ್ಣು ಒಪ್ಪಿಕೊಂಡರೆ ವಿಷ್ಣು-ಸೌಂದರ್ಯ ‘ಇಂಥಾ ಜೋಡಿಯಾ ಎಲ್ಲಾದರು ಕಂಡಿರಾ’ ಎಂದು ಹಾಡುವುದನ್ನು ನೋಡುವ ಭಾಗ್ಯ ಪ್ರೇಕ್ಷಕನಿಗೆ.

ಅಂದಹಾಗೆ, ಜನವರಿ ಕೊನೆ ವಾರದಲ್ಲಿ ವಿಷ್ಣು ಅಭಿನಯದ ‘ರಾಜ ನರಸಿಂಹ’ ಚಿತ್ರ ತೆರೆ ಕಾಣಲು ಸಿದ್ಧತೆ ನಡೆಸಿದೆ. ಇದು ಮೀಸೆ ಸೀರೀಸ್‌ನ ಮುಂದುವರಿದ ಚಿತ್ರ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada