»   » ‘ತುಂಟ’ ಹಳಬ, ಓಂಪ್ರಕಾಶ್‌ ಹೊಸಬ!

‘ತುಂಟ’ ಹಳಬ, ಓಂಪ್ರಕಾಶ್‌ ಹೊಸಬ!

Posted By:
Subscribe to Filmibeat Kannada
  • ಸಿನಿಡೆಸ್ಕ್‌
ಬಿಡುಗಡೆಗೆ ಮೊದಲೆ ಕೆಲವು ಚಿತ್ರಗಳು ಪ್ರಚಾರ ಗಿಟ್ಟಿಸುತ್ತವೆ. ಮುಹೂರ್ತದ ಹಂತದಲ್ಲೇ ಗಮನ ಸೆಳೆಯುವ ಚಿತ್ರಗಳೂ ಉಂಟು. ಮುಹೂರ್ತ ಸಮಾರಂಭದ ವಿಭಿನ್ನ ಶೈಲಿಯ ಆಹ್ವಾನ ಪತ್ರಿಕೆಗಳು ಚಿತ್ರಕ್ಕೆ ಮೊದಲ ಹಂತದಲ್ಲಿಯೇ ಮೆರಗು ನೀಡಿ ಒಳ್ಳೆಯ ಪ್ರಚಾರ ನೀಡುತ್ತವೆ. ಹಿಂದೆ ಉಪೇಂದ್ರ ತಮ್ಮ ಚಿತ್ರದ ಆಹ್ವಾನ ಪತ್ರಿಕೆಯನ್ನು ಪ್ರಶ್ನಾರ್ಥಕ ಚಿಹ್ನೆಯ ಆಕಾರದಲ್ಲಿ ಹೊರತಂದಿದ್ದರು. ಈಗ ತುಂಟನ ಸರದಿ.

ನಿರ್ದೇಶಕ ಓಂ ಪ್ರಕಾಶ್‌ ರಾವ್‌, ತಮ್ಮ ಹೊಸ ಚಿತ್ರ ‘ತುಂಟ’ಕ್ಕೆ ಆಕರ್ಷಕ ಆಹ್ವಾನಪತ್ರಿಕೆಯನ್ನು ಸೃಷ್ಟಿಸಿದ್ದರು. ದಿನಪತ್ರಿಕೆ ಅಳತೆಯ 12 ಪುಟಗಳ ‘ತುಂಟ’ ಆಹ್ವಾನ ಪತ್ರಿಕೆ ಸರ್ವಾಂಗ ಸುಂದರ. ಬಣ್ಣ ಬಣ್ಣದ ವರ್ಣ ವಿನ್ಯಾಸಗಳಿಂದಾಗಿ ಆಹ್ವಾನ ಪತ್ರಿಕೆ ಮೊದಲ ನೋಟಕ್ಕೆ ಯಾವುದೋ ಪತ್ರಿಕೆಯಂತೆ ಗೋಚರಿಸುತ್ತದೆ. ಈ ವಿಭಿನ್ನ ಆಹ್ವಾನ ಪತ್ರಿಕೆ ‘ತುಂಟ’ನಿಗೊಂದು ಆಕರ್ಷಕ ಮುನ್ನುಡಿ.

ಆಹ್ವಾನ ಪತ್ರಿಕೆಯಲ್ಲಿ ಚಿತ್ರದ ಎಲ್ಲ ವಿವರಗಳನ್ನು ಸೊಗಸಾಗಿ ಬಿಂಬಿಸಿರುವ ಓಂ ಪ್ರಕಾಶ್‌, ತಮ್ಮ ತಂದೆ ದಿವಂಗತ ಎನ್‌.ಎಸ್‌.ರಾವ್‌ (ಹಾಸ್ಯನಟ, ಲೇಖಕ) ಅವರ ಪಾಕೇಟ್‌ ಕಾರ್ಟೂನ್‌ ಪ್ರಕಟಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ದೊಡ್ಡ ಹನ್ನೆರಡು ಪುಟಗಳಲ್ಲಿ ಏನೆಲ್ಲ ಸಾಧ್ಯವೋ ಅದೆಲ್ಲವನ್ನು ನೀಡಿದ್ದಾರೆ.

ಬಾಟಮ್‌ ಐಟಮ್‌ನಲ್ಲಿ ಬಾಲಾಜಿ ಅಲಿಯಾಸ್‌ ಈಶ್ವರ್‌ ಅವರ ಸಹೋದರ ರವಿಚಂದ್ರನ್‌ ಅವರ ಕನಸುಗಳಿವೆ. ಅವರ ಸಂಗೀತದ ವಿವಿಧ ಪ್ರಯೋಗಗಳ ಬಗ್ಗೆ ವಿವರಣೆಗಳಿವೆ. ಇತರೆ ಪುಟಗಳಲ್ಲಿ ಚಿತ್ರದ ಕತೆ, ನಾಯಕ, ನಾಯಕಿ, ಚಿತ್ರದ ಪರಿವಾರ ಮತ್ತು ತಂತ್ರಜ್ಞರು ಸೇರಿದಂತೆ ವಿವಿಧ ಮಾಹಿತಿಗಳಿವೆ.

ಸಂಕ್ರಾಂತಿ ಬೆನ್ನಲ್ಲಿ ಯೇ ಜ.17ರಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆಯಿತು. ನಟ ಅಂಬರೀಷ್‌ ಕ್ಲಾಪ್‌ ಮಾಡಿದರು. ರವಿಚಂದ್ರನ್‌ ಕ್ಯಾಮೆರಾ ಸ್ವಿಚ್‌ ಆನ್‌ ಮಾಡಿದರು. ಅಂದ ಹಾಗೆ ದಿನಪತ್ರಿಕೆಯಂತಿರುವ ಆಹ್ವಾನಪತ್ರಿಕೆಯನ್ನು ಕೈಯಲ್ಲಿ ಹಿಡಿದು, ಕ್ರೀಡಾ ಸುದ್ದಿ ನೋಡಬೇಕೆಂದು ಕಡೆಯ ಪುಟಕ್ಕೆ ಹೋದರೆ ಅಲ್ಲಿ ಓಂಪ್ರಕಾಶ್‌ ಕಾಣಿಸುತ್ತಾರೆ.

ಪ್ರೀತಿಸಿ, ಬೆಳೆಸಿ ಮತ್ತು ಆಶೀರ್ವದಿಸಿ ಎನ್ನುವ ನಿರ್ಮಾಪಕ- ನಿರ್ದೇಶಕ ಎನ್‌.ಓಂ ಪ್ರಕಾಶ್‌ರಾವ್‌ ಅವರ ಕೋರಿಕೆ ಅಲ್ಲಿದೆ. ಸಾಧನೆ ಮೆಚ್ಚಿ ಕೈಹಿಡಿಯಲು ಕನ್ನಡಿಗರು ಎಂದೂ ಹಿಂದೆ ಬಿದ್ದಿಲ್ಲವೆಂಬ ಭರವಸೆಯನ್ನು ಅವರಿಗೆ ನೀಡೋಣವೇ?

ತುಂಟನ ತುಂಟಾಟದ ಬಗ್ಗೆಯೂ ನಿಮಗಿಷ್ಟು ಹೇಳಬೇಕು? ಈ ಮುನ್ನ ನಿರ್ದೇಶಕ ಪ್ರೇಮ್‌ ಸಾರಥ್ಯದಲ್ಲಿ ತುಂಟ ಸೆಟ್ಟೇರುವ ಕುರಿತ ಪ್ರಕಟಣೆ ಹೊರಬಿದ್ದಿತ್ತು . ಅದೇನು ಕಿರಿಕ್ಕುಗಳಾದವೋ ಅಣ್ಣಮ್ಮ ತಾಯಿಯೇ ಬಲ್ಲಳು- ನಿದೇಶಕರು ಬದಲಾಗಿದ್ದಾರೆ. ಓಂಪ್ರಕಾಶ್‌ಗೀಗ ಶುಕ್ರದೆಸೆ ಚಾಲ್ತಿಯಲ್ಲಿದೆಯಂತೆ.

ಅಂದಹಾಗೆ, ತುಂಟ ಚಿತ್ರದ ಮೂಲಕ ಓಂಪ್ರಕಾಶ್‌ ನಿರ್ಮಾಪಕರೂ ಆಗುತ್ತಿದ್ದಾರೆ. ಚಿತ್ರದ ಬಂಡವಾಳದಲ್ಲಿ ಅವರದೂ ಒಂದು ಪಾಲಿದೆಯಂತೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada