»   » ಮನೆ ಮನೆಗೆ ಬರುವರು ಮೀನಾ

ಮನೆ ಮನೆಗೆ ಬರುವರು ಮೀನಾ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
ಬೆಳ್ಳಿತೆರೆಯಲ್ಲಿ ಅವಕಾಶಕ್ಕೆ ಬರ ಬಂದಾಗ ತಾರೆಯರದು ಕಿರುತೆರೆಯತ್ತ ಪ್ರಯಾಣ, ಇದು ಹೊಸತೇನೂ ಅಲ್ಲ. ಹೀಗೆ ಎಪ್ಪತ್ತು ಎಮ್‌ಎಮ್‌ ರೀಲಿನಿಂದ ಹದಿನಾರರತ್ತ ಸಾಗುವವರ ದಂಡೇ ಇದೆ. ಆದರೆ ಶಾರುಕ್‌ ಖಾನ್‌ನಂತಹ ಚಿತ್ರಹಿನ್ನಲೆಯಿಲ್ಲದೆ ಸಿನಿಮಾ ಪ್ರವೇಶಿಸುವ ನಟಶೇಖರರಿಗೆ ಕಿರುತೆರೆ ಬೆಳ್ಳಿತೆರೆಯ ಮೊದಲ ಹೆಜ್ಜೆ. ಸುಧಾರಾಣಿ, ತಾರಾ, ವಿಜಯಲಕ್ಷ್ಮಿ ಕನ್ನಡದಲ್ಲಿ ಕಿರುತೆರೆ ಹೊಕ್ಕರೆ , ಹಿಂದಿಯಲ್ಲಿ ಕಿರುತೆರೆಗೆ ಬಂದವರಲ್ಲಿ ಬಿಗ್‌‘ಬಿ’ ಅಮಿತಾಬ್‌, ಮಾಧುರಿ ದೀಕ್ಷಿತ್‌ ಒಳಗೊಂಡಂತೆ ದೊಡ್ಡದೊಂದು ತಾರಾಬಳಗವಿದೆ. ಈ ಹಾದಿಗೆ ತಮಿಳು, ತೆಲುಗು, ಮರಾಠಿ... ಹೊರತಾಗಿಲ್ಲ.

ಈ ಮಾತು ಈಗ ಯಾಕೆ ನೆನಪಾಯಿತು?

ಈಗ ಈ ಹೆಜ್ಜೆಗೆ ಗೆಜ್ಜೆ ಕಟ್ಟಲೊಪ್ಪಿದವರು ‘ಸ್ವಾತಿಮುತ್ತಿ’ನ ಶಿವಯ್ಯನ ಸುವ್ವೀ. ಹೌದು! ಮೀನಾಗೆ ಸಿನಿಮಾದಲ್ಲಿ ಸಿಗುವ ಅವಕಾಶಗಳು ಕಡಿಮೆಯಾಗುತ್ತಿವೆ. ಈಗೀಗ ಹಳೇ ಜನ್ಮದಲ್ಲಿ ನೆನಪಾದ ಪ್ರೇಯಸಿ, ಹಿರಿಯಕ್ಕ, ಅಮ್ಮ, ಗೌರಮ್ಮ ಪಾತ್ರಗಳು ಆಕೆಗೆ ದೊರೆಯುತ್ತಿವೆ. ಇದು ಹೀಗೇ ಮುಂದುವರಿದರೆ..... ‘ಅಜ್ಜಿ ’ಪಾತ್ರ ಬರಬಹುದೋ ಏನೋ ?

ಸಿನಿಮಾದ ಸೂಕ್ಷ್ಮಮೀನಾಗೂ ಅರ್ಥವಾಗಿದೆ. ಆ ಕಾರಣದಿಂದಲೇ ಆಕೆ ಕಿರುತೆರೆಯತ್ತ ಜಾರಲು ನಿರ್ಧರಿಸಿದ್ದಾರೆ. ಮೀನಾ ತಾಯಿ ಮಾತ್ರ, ಮಗಳು ಹಸಮಣೆ ಏರಬೇಕೆಂದು ಒತ್ತಾಯಿಸುತ್ತಾ , ಸಂಪ್ರದಾಯಸ್ಥ ಕುಟುಂಬದ ವರನ ಆಯ್ಕೆಯಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ.

ಅಂದಹಾಗೆ, ಖಾಸಗಿ ವಾಹಿನಿಯಾಂದಕ್ಕೆ ನಿರ್ಮಾಣವಾಗುತ್ತಿರುವ ಮೀನಾ ಅಭಿನಯದ ಧಾರಾವಾಹಿ ಬರುವ ಏಪ್ರಿಲ್‌ ತಿಂಗಳಿಂದ ಪ್ರಸಾರ ಆರಂಭಿಸಿದೆ.

ಕಿರುತೆರೆ ಹೆಸರಿಗೆ ಮಾತ್ರ ; ಸಂಭಾವನೆ ಮಾತ್ರ ಜೋರಾಗಿಯೇ ಇದೆ. ಧಾರಾವಾಹಿ ಯಶಸ್ವಿಯಾದರೆ ದುಡ್ಡಿನ ಸುರಿಮಳೆ. ಸುಹಾಸಿನಿಯಂಥ ನಟಿ ಕೂಡ ಟೀವಿ ಮಾಯೆಯಿಂದ ತಪ್ಪಿಸಿಕೊಳ್ಳಲಾಗಿಲ್ಲ . ಆಕೆ ಟೀವಿಗಾಗಿ ಠೀವಿಯಿಂದ ಒಂದು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಇನ್ನು ಭಾರತೀಯ ಚಿತ್ರರಂಗದ ರಾಣಿ ಅನ್ನಿಸಿದ್ದ ಶ್ರೀದೇವಿ ಮಾಲಿನಿ ಅಯ್ಯರ್‌ ಆಗಿ ಮಿಂಚುತ್ತಿರುವ ಉದಾಹರಣೆ ಕಣ್ಣಮುಂದೆಯೇ ಇದೆ.

ಆದರೆ ಕನ್ನಡದ ಪ್ರೇಮಾ ಕತೆ ಗೊತ್ತಾ ? ಸಿನಿಮಾದಲ್ಲಿ ಅವಕಾಶ ಇಳಿಮುಖವಾದರೂ ಆಕೆ ಟೀವಿಯತ್ತ ಹೊರಳಿಲ್ಲ ; ಆದರೆ ನಾಟಕದತ್ತ ಮುಖ ಮಾಡಿದ್ದಾರೆ ಅನ್ನುವುದು ಸುದ್ದಿ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada