»   » ‘ಮಿಸ್‌ ಕ್ಯಾಲಿಫೋರ್ನಿಯಾ’ ಏಪ್ರಿಲ್‌ನಲ್ಲಿ ತೆರೆಗೆ ಬರ್ತಾಳೆ!

‘ಮಿಸ್‌ ಕ್ಯಾಲಿಫೋರ್ನಿಯಾ’ ಏಪ್ರಿಲ್‌ನಲ್ಲಿ ತೆರೆಗೆ ಬರ್ತಾಳೆ!

Subscribe to Filmibeat Kannada


ಬೆಳ್ಳಿತೆರೆಗೆ ‘ಮಿಸ್‌ ಕ್ಯಾಲಿಫೋರ್ನಿಯಾ’(ಸಿನಿಮಾ) ಯಾವಾಗ ಬರ್ತಾಳೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಚಿತ್ರದ ಧ್ವನಿ ಸುರಳಿ ಮತ್ತು ಸಿ.ಡಿ.ಗಳ ಬಿಡುಗಡೆ ಸಮಾರಂಭದಲ್ಲಿ.

ಮಲ್ಲೇಶ್ವರಂನ ರಿಜಾಯ್ಸ್‌ ಸಭಾಂಗಣದಲ್ಲಿ ಫೆ.19ರಂದು ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ‘ಮಿಸ್‌ ಕ್ಯಾಲಿಫೋರ್ನಿಯಾ’ ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕೋಟಿಗೊಬ್ಬ ಅಮಿತಾಭ್‌ ಆಗಲು ಸಾಧ್ಯ. ಲಕ್ಷಕ್ಕೊಬ್ಬ ರಾಜ್‌ಕುಮಾರ್‌ ಆಗೋದಕ್ಕೆ ಸಾಧ್ಯ. ಪ್ರಯತ್ನ, ತಾಳ್ಮೆ, ಗೆಲುವು ಈ ಮೂರು ಒಂದರ ಹಿಂದೊಂದು ಬರುತ್ತವೆ. ಸಂಗೀತಗಾರರು ಕಾಯಬೇಕು. ಸಂಗೀತದಿಂದ ಹಣ ಸಿಗದಿದ್ದರೆ, ಖುಷಿಯಾದರೂ ಸಿಗುತ್ತೆ ಎಂದು ದ್ವಾರಕೀಶ್‌ ಹೇಳಿದರು.

ಅವರ ಮಾತಿಗೆ ಹಿನ್ನೆಲೆಯಾಗಿದ್ದು, ಗಾಯಕ ರಾಮಪ್ರಸಾದ್‌ ಅವರ ಮಾತು. ದ್ವಾರಕೀಶ್‌ಗೂ ಮುನ್ನ ಮಾತನಾಡಿದ್ದ ಅವರು, ಕನ್ನಡ ಚಿತ್ರರಂಗದಲ್ಲಿ ಗಾಯಕರಿಗೆ ಅವಕಾಶ ಸಿಕ್ಕುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪು.ತಿ.ನ ಅವರ ಪುತ್ರಿ ಅಲಮೇಲು ಅಯ್ಯಂಗಾರ್‌, ‘ಮಿಸ್‌ ಕ್ಯಾಲಿಪೋರ್ನಿಯಾ’ ಚಿತ್ರ ಚೆನ್ನಾಗಿ ಬಂದಿದೆ. ದುಡ್ಡು ಮಾಡುತ್ತದೆ ಎಂದು ಭವಿಷ್ಯ ನುಡಿದರು.

ನಟಿ ಜಯಂತಿ ಅಲಮೇಲು ಅವರ ಮಾತನ್ನು ಸಮರ್ಥಿಸಿದರು. ಕ್ಯಾಲಿಫೋರ್ನಿಯಾವನ್ನು ಈ ಚಿತ್ರದ ಮೂಲಕ ನಮ್ಮೂರಿನಲ್ಲಿಯೇ ನೋಡಬಹುದು. ಅಷ್ಟೊಂದು ಪರಿಣಾಮಕಾರಿಯಾಗಿ ಚಿತ್ರ ಮೂಡಿ ಬಂದಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.

ಚಿತ್ರದ ನಿರ್ದೇಶಕ ಕೂಡ್ಲು ರಾಮಕೃಷ್ಣ, ನಾಯಕ ದಿಗಂತ್‌, ನಿರ್ಮಾಪಕ ರವಿ ದತ್ತಾತ್ರೆಯ, ಶ್ರೀರಾಮ್‌ ದಾಸ್‌, ಕೆ.ಸಿ.ಎನ್‌.ಕುಮಾರ್‌, ನಟ ದತ್ತಣ್ಣ, ಮಾಸ್ಟರ್‌ ಕಿಶನ್‌ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಕುಹೂ ಕುಹೂ ಆಡಿಯೋ ಕಂಪನಿಯ ಗುರು(ಮಂಜುಳಾ ಗುರುರಾಜ್‌ರ ಪತಿ) ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೊಂದಿದ್ದಾರೆ. 21ಕ್ಯಾಸೆಟ್‌ಗಳನ್ನು ಹೊರತಂದಿರುವ ಗುರು ಅವರ ಸಂಸ್ಥೆಗೆ, ಇದು ಮೊದಲ ಸಿನಿಮಾ ಕ್ಯಾಸೆಟ್‌.

ಚಿತ್ರದ ನಿರ್ಮಾಣದೊಂದಿಗೆ ಡಾ.ರವಿ ದತ್ತಾತ್ರೆಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬಂಗಿ ರಂಗ, ಕವಿರಾಜ್‌, ಡಾ.ನಾಗೇಂದ್ರ ಪ್ರಸಾದ್‌ ಸಾಹಿತ್ಯ ನೀಡಿದ್ದು, ಗಾಯಕ ರಾಮಪ್ರಸಾದ್‌ ಎಲ್ಲಾ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...