For Quick Alerts
  ALLOW NOTIFICATIONS  
  For Daily Alerts

  ಲಗಾನ್‌ನ ಆಸ್ಕರ್‌ ಸೋಲಿಗೆ ನಿರಾಸೆಯ ಮಾತುಗಳ ಮುಲಾಮು

  By Super
  |

  ಭಾರತೀಯ ಕ್ರಿಕೆಟ್‌ ತಂಡ ಫೈನಲ್ಸ್‌ನಲ್ಲಿ ಸೋಲುತ್ತದಲ್ಲ, ಥೇಟ್‌ ಹಾಗೆಯೇ ಲಗಾನ್‌ ಸೋಲು ಕಂಡಿದೆ. ಸಿಡಿಸಲು ಅಣಿ ಮಾಡಿಕೊಂಡಿದ್ದ ಪಟಾಕಿಗಳು ಈಗ ನಿರರ್ಥಕ. ಅದೃಷ್ಟ ಕೈಕೊಟ್ಟಿತು. ಅವನ್ಯಾರೋ ಹೇಳಿದ ಭವಿಷ್ಯ ದಿಟವಾಯಿತು. ಆಸ್ಕರ್‌ ಫಂಕ್ಷನ್‌ ಮೇ ತಿಂಗಳಲ್ಲಿ ನಡೆದಿದ್ದರೆ ಲಗಾನ್‌ಗೆ ಅವಾರ್ಡ್‌ ಬಂದೇ ಬರುತ್ತಿತ್ತು :)

  ಲಗಾನ್‌ಗೆ ಆಸ್ಕರ್‌ ದಕ್ಕದ ವಾತಾವರಣದಲ್ಲಿ ಅನುರಣಿಸುತ್ತಿರುವ ನಿರಾಸೆಯ ಮಾತುಗಳಿವು. ನಿನ್ನೆ ಪಾರ್ಟಿ ಆಚರಿಸಿ, ಮುಂಜಾನೆ ಬೇಗ ಎದ್ದು ಮುಂಬಯಿಯಲ್ಲಿ ಟಿವಿ ಮುಂದೆ ಕೂತಿದ್ದ ಲಗಾನ್‌ ಕ್ರಿಕೆಟ್‌ ತಂಡಕ್ಕೆ 'ನೋ ಮ್ಯಾನ್ಸ್‌ ಲ್ಯಾಂಡ್‌"ಗೆ ಪ್ರಶಸ್ತಿ ಹೋಗುತ್ತಿದ್ದಂತೆ ಭಾರೀ ನಿರಾಸೆ. ಲಗಾನ್‌ನ ದೇವಾ ಪಾತ್ರಧಾರಿ ಪ್ರದೀಪ್‌ ರಾವತ್‌ ಅವರಂತೂ ಅಳುವುದೊಂದೇ ಬಾಕಿ. ಆಶುತೋಷ್‌ ಗೌರೀಕರ್‌ ತಂದೆಗೆ ದೇಶ ನಿರೀಕ್ಷಿಸಿದ್ದನ್ನು ನಮ್ಮಿಂದ ಕೊಡಲಾಗಲಿಲ್ಲವೆಂಬ ಕೊರಗು !

  ಅಮೀರ್‌ ಒಬ್ಬ ಹುಲಿ. ಆಸ್ಕರ್‌ ಸೋಲನ್ನು ಎದುರಿಸುವ ತಾಕತ್ತು ಆತನಿಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೀಮಿನ ಬೆಂಬಲ ಇದ್ದಿದ್ದರೆ ಚೆನ್ನಾಗಿತ್ತು. ನಾವ್ಯಾರೂ ಅಲ್ಲಿಗೆ ಹೋಗಲಾಗಲಿಲ್ಲ. ಸಿನಿಮಾದಲ್ಲಿ ನಮ್ಮ ತಂಡಕ್ಕೆ ಸಿಕ್ಕ ಜಯ, ಆಸ್ಕರ್‌ ಪಂದ್ಯದಲ್ಲಿ ಸಿಗಲಿಲ್ಲ. ಆದರೂ ಒಂದು ಅಪರೂಪದ ಸಿನಿಮಾ ದೇಶದ ಜನರನ್ನಷ್ಟೇ ಅಲ್ಲದೆ ಜಗತ್ತಿನ ಗಮನವನ್ನು ಸೆಳೆಯುವಷ್ಟು ಹೆಸರನ್ನು ಮಾಡಿರುವುದಕ್ಕೆ ಖುಷಿಯಿದೆ ಎನ್ನುತ್ತಾರೆ ರಾವತ್‌.

  ಸಮಾರಂಭ ಮುಗಿದ ಅರ್ಧ ಗಂಟೆ ನಂತರ ಗೌರೀಕರ್‌ ಮುಂಬಯಿಯಲ್ಲಿರುವ ತಮ್ಮ ತಂದೆಗೆ ಫೋನಾಯಿಸಿ, 'ನರ್ವಸ್‌ ಆಗಬೇಡಿ. ಸ್ಪೋರ್ಟಿವ್‌ ಆಗಿ ತಗೊಳೋಣ. ಅಮ್ಮನಿಗೂ ಸಮಾಧಾನ ಹೇಳಿ" ಅಂದರು. ಆದರೆ ಆಶುತೋಷ್‌ ತಂದೆಯ ಮುಖ ಪೆಚ್ಚು. ಲಗಾನ್‌ಗೆ ಆಸ್ಕರ್‌ ಸಿಗಲಿಲ್ಲ ಎಂಬುದು ಗೊತ್ತಾದ ತಕ್ಷಣ, 'ನಾವು ದೇಶಕ್ಕೆ ಮೋಸ ಮಾಡಿಬಿಟ್ಟೆವೇ?" ಎಂಬ ಭಾವನೆ ಹೊಳೆದು ತುಂಬಾ ಬೇಸರವಾಯ್ತು ಎನ್ನುತ್ತಾರೆ ಗೌರೀಕರ್‌ ತಂದೆ.

  ಕೋಲ್ಕತಾವೊಂದರಿಂದಲೇ ಆಶುತೋಷ್‌ ಗೌರೀಕರ್‌ ಮನೆಗೆ 10 ಸಾವಿರ ಇ- ಮೇಲ್‌ಗಳು ಬಂದಿವೆ. ಲಗಾನ್‌ ಗೆಲ್ಲಲಿ ಎಂದು ಶುಭ ಕೋರಿಕೆಗಳ ಮಹಾಪೂರ. ಅವಕ್ಕೆಲ್ಲಾ ಒಬ್ಬರೇ ಉತ್ತರಿಸುವುದಾದರೂ ಹೇಗೆ? ಕೆಲವರು ಉತ್ತರ ಕೊಡಲಿಲ್ಲವೆಂದು ದೂರಿ ಮತ್ತೆ ಇ- ಮೇಲ್‌ ಕಳಿಸಲು ಶುರುವಿಟ್ಟುಕೊಂಡಿದ್ದಾರೆ. ಈ ಎಲ್ಲಾ ಒತ್ತಡಗಳ ನಡುವೆ ಗೌರೀಕರ್‌ ತಂದೆ ನಲುಗಿಹೋಗಿದ್ದಾರೆ. ಆಸ್ಕರ್‌ ಸಿಗದಿರುವುದಕ್ಕೆ ಅಮೀರ್‌ ಖಾನ್‌ ಈವರೆಗೆ ಯಾವುದೇ ಅಭಿಪ್ರಾಯ ಕೊಟ್ಟಿಲ್ಲ.

  ಲಗಾನ್‌ ಆಸ್ಕರ್‌ ಗೆದ್ದೇ ಗೆಲ್ಲುತ್ತದೆಂದು ನಂಬಿದ್ದ ಅಭಿಮಾನಿಗಳೀಗ ಬಿಡುತ್ತಿರುವ ಹೊಸ ಪುಗ್ಗ- ಈ ಪ್ರಶಸ್ತಿಯಲ್ಲೂ ಲಾಬಿಯಿದೆ, ಬಿಡ್ರಿ.

  English summary
  Lagaan : reaction after not getting Oscar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X