»   » ನಾಗೇಂದ್ರ ಪತ್ನಿಯ ಕಣ್ಣೊರೆಸಿದ ಓದುಗ ಅಂಜನ್‌ಗೆ ಧನ್ಯವಾದ

ನಾಗೇಂದ್ರ ಪತ್ನಿಯ ಕಣ್ಣೊರೆಸಿದ ಓದುಗ ಅಂಜನ್‌ಗೆ ಧನ್ಯವಾದ

Posted By: Staff
Subscribe to Filmibeat Kannada

ಸಂಕಷ್ಟದಲ್ಲಿರುವ ನಾಗೇಂದ್ರ ಪತ್ನಿಗೆ ನಮ್ಮ ಓದುಗ ಎಚ್‌.ಜಿ.ಅಂಜನ್‌ ಕುಮಾರ್‌ ಅವರ ಅಭಯ ಹಸ್ತ- ಪ್ರತಿ ತಿಂಗಳು 1000 ರುಪಾಯಿ ನೆರವು. ಅಡ್ವಾನ್ಸ್‌ ಆಗಿ ಈಗಾಗಲೇ 3 ತಿಂಗಳ ಧನ ಸಹಾಯ.

'ಕಷ್ಟದಲ್ಲಿರುವ ನಾಗೇಂದ್ರ ಅವರ ಸಂಸಾರಕ್ಕೆ ಸಹಾಯ ಮಾಡಲು ನಾನು ಸಿದ್ಧ. ಹೇಗೆ ಮಾಡಬೇಕು- ದಾರಿ ತೋರಿಸಿ" ಎಂಬೊಂದು ಇ-ಮೇಲನ್ನು ನಮಗೆ ಕಳಿಸಿಕೊಟ್ಟ ಅಂಜನ್‌ ಕುಮಾರ್‌ ಅವರಿಗೆ ಚಿತ್ರಲೋಕ ಡಾಟ್‌ ಕಾಂಗೆ ದಾರಿ ತೋರಿದೆವು. ಮೊನ್ನೆ ಬೆಂಗಳೂರಿನ ಸುಬ್ರಮಣ್ಯನಗರದಲ್ಲಿರುವ ಚಿತ್ರಲೋಕ ಡಾಟ್‌ ಕಾಂ ಕಚೇರಿಯಲ್ಲಿ , ಅದರ ಕರ್ತೃ ವೀರೇಶ್‌ ಸಮ್ಮುಖದಲ್ಲಿ ನಾಗೇಂದ್ರ ಅವರ ಪತ್ನಿ ಜಯಲಕ್ಷಮ್ಮ, ಅಂಜನ್‌ ನೀಡಿದ ಚೆಕ್‌ಗಳನ್ನು ಪಡೆದರು. ಅಂಜನ್‌ ಕುಮಾರ್‌ ಮತ್ತು ಅವರಪತ್ನಿ ಸಂಧ್ಯಾ ಮೊಗದಲ್ಲಿ ಸಾರ್ಥಕ ನಗುವಿತ್ತು.

ಇಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ಪದವೀಧರ ಅಂಜನ್‌ ಈಗ HUAWEI ಎಂಬ ಚೀನೀ ಕಂಪನಿಗಾಗಿ ಕೆಲಸ ಮಾಡುತ್ತಿದ್ದಾರೆ. ಬಿಪಿಎಲ್‌ನಲ್ಲಿ ದುಡಿದ ಅನುಭವ ಇವರದು. ಈಚೆಗಷ್ಟೇ ಮದುವೆಯಾಗಿರುವ ಅಂಜನ್‌ ಅವರಿಗೆ ಹೆಂಡತಿ ಸಂಧ್ಯಾರ ಸಂಪೂರ್ಣ ಸಹಕಾರವಿದೆ. ಹೊಸ ಸಂಸಾರವನ್ನು ಹಸನುಗೊಳಿಸುವುದರಲ್ಲೇ ಕಳೆದು ಹೋಗುವ ಅನೇಕರ ನಡುವೆ ಅಪರೂಪ ಈ ಜೋಡಿ. ಉದಯ ಟಿವಿಯ ಆದರ್ಶ ದಂಪತಿಗಳಂಥಲ್ಲ ಇವರು; ಇವರದು ಅನುಕರಣೀಯ ಆದರ್ಶ.

ಸುಸಂಸ್ಕೃತ ಹಾಗೂ ಅನುಕೂಲಸ್ಥ ಕೌಟುಂಬಿಕ ಹಿನ್ನೆಲೆಯುಳ್ಳ ಅಂಜನ್‌ ಓದುವಾಗಲೇ ಕೊಡುಗೈ ಪ್ರಭು. ಫೀಸು ಕಟ್ಟಲು ಪರದಾಡುವ ಸಹಪಾಠಿಗಳ ಕಣ್ಣೊರೆಸಿ, ನೆಮ್ಮದಿಯ ನಿಟ್ಟುಸಿರಿಟ್ಟ ಅಪರೂಪದವರು. ಕೆಲಸದ ಮೇಲೆ ಏಪ್ರಿಲ್‌ 12ರಂದು ಚೀನಾಗೆ ತೆರಳಲಿರುವ ಅಂಜನ್‌ ಭವಿತವ್ಯ ಇನ್ನಷ್ಟು ಹಸನಾಗಲಿ ಅನ್ನುವುದು ನಮ್ಮ ಹಾರೈಕೆ.

ತಮ್ಮ ಹವ್ಯಾಸಗಳಲ್ಲಿ ದಟ್ಸ್‌ ಕನ್ನಡ ಡಾಟ್‌ ಕಾಂ ಓದುವುದೂ ಒಂದು ಎಂದು ಹೇಳುವ ಅಂಜನ್‌ ಅವರಂಥ ಅಪರೂಪದ ಓದುಗರನ್ನು ಪಡೆದ ನಾವೇ ಭಾಗ್ಯವಂತರು. ಅಂಜನ್‌ ಮಾಡಿದ ಮನಸ್ಸು ನಿಮ್ಮದೂ ಆದಲ್ಲಿ, ನಾಗೇಂದ್ರ ಪತ್ನಿಗೆ ನೆರವು ಕೊಡಲು - ಚಿತ್ರಲೋಕ.ಕಾಂ ನ ವೀರೇಶ್‌ ಅವರನ್ನು ಸಂಪರ್ಕಿಸಿ.

English summary
Thatskannada.com reader comes forward to donate Rs 1000 per month for Late Music Director Nagendras family

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada