»   » ಏಕಾಂಗಿಯನ್ನು ತೋರಲು ಜನರನ್ನು ಎಳೆಯಲೇಬೇಕೆಂಬ ಭಗೀರಥ ಪ್ರಯತ್ನ

ಏಕಾಂಗಿಯನ್ನು ತೋರಲು ಜನರನ್ನು ಎಳೆಯಲೇಬೇಕೆಂಬ ಭಗೀರಥ ಪ್ರಯತ್ನ

Posted By: Staff
Subscribe to Filmibeat Kannada

ಛಲದೊಳ್‌ ರವಿಚಂದ್ರನ್‌!
ಏಕಾಂಗಿಗೆ ಮೂರನೇ ಬಾರಿಗೆ ಹೊಸ ಅಂಗಿ ತೊಡಿಸಲು ರವಿ ಸಜ್ಜು. ಈಗ ಅವರ ದೂರದೃಷ್ಟಿ ಸಿಟಿ ಲಿಮಿಟ್‌ನಿಂದ ದೂರ, ಬಲು ದೂರ. ಸಿ ಮತ್ತು ಬಿ ಕೇಂದ್ರಗಳಲ್ಲಿ ಜನರನ್ನು ಚಿತ್ರಮಂದಿರಕ್ಕೆ ಕರೆ ತರುವ ಭಗೀರಥ ಪ್ರಯತ್ನ.

ಏಕಾಂಗಿ ಈಗಾಗಲೇ ಒಮ್ಮೆ ರೀ-ಶೂಟ್‌ ಆಗಿದೆ. ಆದರೆ ಅದರಿಂದ ಚಿತ್ರಮಂದಿರಕ್ಕೆ ಹೆಚ್ಚು ಜನ ಬಂದ ಉದಾಹರಣೆಯಿಲ್ಲ. ಈ ಸಿನಿಮಾಗೆ ಸುರಿದಿರುವ ಸರಿ ಸುಮಾರು 5 ಕೋಟಿ ರುಪಾಯಿ ವಾಪಸ್‌ ಪಡೆಯುವ ಕನಸನ್ನೂ ಕಾಣುವ ಸ್ಥಿತಿಯಲ್ಲಿ ರವಿ ಇಲ್ಲ. ಹೀಗಿದ್ದೂ ಏಕಾಂಗಿ ಮೇಲಿನ ಪ್ರೀತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ನನಗಾಗಿ ಮಾತ್ರ ತೆಗೆದುಕೊಂಡ ಸಿನಿಮಾ ಜನರಿಗೆ ಬೇಡವಾಗಿದೆ. ಅದನ್ನೀಗ ಅವರಿಗೆ ಬೇಕಾಗುವಂತೆ ಕೊಡುವುದು ತಪ್ಪೇನಲ್ಲವಲ್ಲ ಅನ್ನುತ್ತಾರೆ ರವಿ.

ಮೊದಲ ಇನ್ನಿಂಗ್ಸ್‌ನಲ್ಲಿ ಏಕಾಂಗಿ ಅಗ್ಗದ ಮೊತ್ತಕ್ಕೇ ಔಟ್‌. ಎರಡನೇ ಇನ್ನಿಂಗ್ಸ್‌ ಪ್ರಾರಂಭವಾಗಬೇಕಿರುವುದು ಬಿ ಮತ್ತು ಸಿ ಕೇಂದ್ರಗಳಲ್ಲಿ. ಈ ಕೇಂದ್ರಗಳ ಜನರ ನಿರೀಕ್ಷೆ ಎಂಥದೆಂಬುದು ರವಿಗೆ ಚೆನ್ನಾಗಿ ಗೊತ್ತು. 'ರಾಮಾಚಾರಿ", 'ಪುಟ್ನಂಜ" ಮೆಚ್ಚಿಕೊಂಡ ಈ ಜನ 'ಶಾಂತಿ ಕ್ರಾಂತಿ"ಯನ್ನು ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬುದು ರವಿಗೆ ಮನದಟ್ಟು. ಈ ಕಾರಣಕ್ಕೇ ಏಕಾಂಗಿಯಲ್ಲಿ ಇನ್ನೂ ಎರಡು ಮೂರು ಫೈಟ್‌ ಸೇರಿಸುವ ಇರಾದೆ ಅವರದ್ದು. ಈ ಬಾರಿಯ ಚೇಂಜ್‌ ಅಂದರೆ ರೀ-ಶೂಟ್‌ ಮಾಡುವ ವಿಷಯವನ್ನು ತೀರಾ ಪ್ರಚಾರ ಮಾಡಿಲ್ಲ.

ಅಂದಹಾಗೆ, ಮುಂದಿನ ರವಿಚಂದ್ರನ್‌ ಚಿತ್ರಗಳೆಲ್ಲಾ ಜನರಿಗಾಗಿ, ಏಕಾಂಗಿಗಾಗಿ ಅಲ್ಲ. ಕೋದಂಡ ರಾಮ, ರವಿ ತಮ್ಮ ಬಾಲಾಜಿ ನಾಯಕನಾಗಿ ನಟಿಸುತ್ತಿರುವ ಪ್ರೀತ್ಸೋಣ ಬಾ, ಶಕುನಿ, ಡಾನ್‌ ಇವೆಲ್ಲಾ ಪೈಪ್‌ಲೈನ್‌ನಲ್ಲಿವೆ. ಸಾಕಷ್ಟು ಉಪ್ಪು- ಖಾರ, ತುಪ್ಪದ ವಗ್ಗರಣೆ ಹಾಕಿಯೇ ಈ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಡುವುದು ರವಿಯ ಬದಲಾಗಿರುವ ನಿರ್ಧಾರ. ಏಕಾಂಗಿ ತುಂಬಿಕೊಡಲಾರದ್ದನ್ನ ಕೋದಂಡರಾಮ ತಂದು ಕೊಡುತ್ತಾನೆ ಎಂಬುದು ರವಿಚಂದ್ರನ್‌ ನಂಬಿಕೆ.

English summary
Never tired Ravichandran to make up Ekangi again
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada