»   » ತೆರೆ ಮರೆಗೆ ಸರಿದ ಸುನೀಲ್‌ ದತ್‌!

ತೆರೆ ಮರೆಗೆ ಸರಿದ ಸುನೀಲ್‌ ದತ್‌!

Posted By:
Subscribe to Filmibeat Kannada

ಮುಂಬಯಿ : ಬಾಲಿವುಡ್‌ನ ಹಿರಿಯ ನಟ, ಸಮಾಜ ಸೇವಕ ಮತ್ತು ಕೇಂದ್ರ ಕ್ರೀಡಾ ಸಚಿವ ಸುನೀಲ್‌ ದತ್‌ ಅಲ್ಪಕಾಲದ ಅಸ್ವಸ್ಥತೆಯ ನಂತರ ಬುಧವಾರ ಕೊನೆಯುಸಿರೆಳೆದರು.

ತಮ್ಮ ಸ್ವಗೃಹದಲ್ಲಿ ಬುಧವಾರ ಮೃತಪಟ್ಟ ಸುನೀಲ್‌ ದತ್‌(75), ತಮ್ಮ ಪುತ್ರ ಬಾಲಿವುಡ್‌ ನಟ ಸಂಜಯ್‌ದತ್‌ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ರಾಜೀವ್‌ಗಾಂಧಿ ಪ್ರೇರಣೆಯಿಂದ ರಾಜಕೀಯ ಪ್ರವೇಶಿಸಿದ್ದ ಸುನೀಲ್‌ ದತ್‌, ಒಟ್ಟು ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಪ್ರಥಮ ಬಾರಿಗೆ ಸಚಿವರಾಗಿ ಮನಮೋಹನ್‌ಸಿಂಗ್‌ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.

1929ರಲ್ಲಿ ಜನಿಸಿದ ಬಾಲ್‌ರಾಜ್‌ದತ್‌ ಚಿತ್ರರಂಗ ಪ್ರವೇಶಿಸಿದ ಮೇಲೆ ಸುನೀಲ್‌ ದತ್‌ ಆದರು. ತಮ್ಮ ಪದವಿ ಶಿಕ್ಷಣ ಮುಗಿದ ನಂತರ ರಮೇಶ್‌ ಸೈಗಲ್‌ ನಿರ್ದೇಶನದ‘ರೈಲ್ವೆ ಪ್ಲಾಟ್‌ ಫಾರಂ’ (1955) ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದರು.

ಸುನೀಲ್‌ ದತ್‌ ಅಭಿನಯಿಸಿದ ‘ಏಕ್‌ ಹೀ ರಾಸ್ತಾ’(1956) ನಂತರ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದ ಚಿತ್ರ ಮದರ್‌ ಇಂಡಿಯಾ(1957). ಅದರಲ್ಲಿನ ಬಿರ್ಜು ಪಾತ್ರ ಅವಿಸ್ಮರಣೀಯವಾದುದು. ಚಿತ್ರದಲ್ಲಿ ನಾಯಕಿ ನರ್ಗಿಸ್‌ ಮಗನಾಗಿ ನಟಿಸಿದರು. ಚಿತ್ರ ತೆರೆ ಕಂಡ ಮೇಲೆ ಅವರು ನರ್ಗಿಸ್‌ರನ್ನು ಮದುವೆಯಾಗಿದ್ದರು.

‘ಸಾಧನಾ’, ‘ ಸುಜಾತಾ’, ‘ಮೇ ಚುಪ್‌ ರಹೂಂಗಿ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಸುನೀಲ್‌ದತ್‌ ಪಾತ್ರರಾಗಿದ್ದರು. ನಾಲ್ಕು ದಶಕಗಳ ತಮ್ಮ ಚಿತ್ರ ಜೀವನದಲ್ಲಿ ಸುನೀಲ್‌ ದತ್‌ ಭಾಷೆಯ ಗಡಿ ಮೀರಿ ಪ್ರೇಕ್ಷಕರನ್ನು ಮುಟ್ಟಿದ್ದರು. ತಮ್ಮ ಪುತ್ರ ಸಂಜಯ್‌ದತ್‌ರೊಂದಿಗೆ ನಟಿಸಿದ ‘ಮನ್ನಾಭಾಯ್‌ ಎಂಬಿಬಿಎಸ್‌’ ಚಿತ್ರ ಅವರ ವೃತ್ತಿ ಬದುಕಿನ ಕಡೆಯ ಚಿತ್ರವಾಗಿದೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada