»   » ಈಗ ನಾಯಕ ಗಾದಿಗೆ ಬಂದು ಕೂತಿದ್ದಾರೆ

ಈಗ ನಾಯಕ ಗಾದಿಗೆ ಬಂದು ಕೂತಿದ್ದಾರೆ

Posted By: Staff
Subscribe to Filmibeat Kannada

ಸ್ಯಾಂಡಲ್‌ವುಡ್‌ನಲ್ಲೊಂದು ಸ್ಥಾನ ಕಂಡುಕೊಳ್ಳಲು ಮಂಡ್ಯ ರಮೇಶ್‌ ಸೈಕಲ್‌ ಹೊಡೆದದ್ದು ಅಷ್ಟಿಷ್ಟಲ್ಲ. ಕಲೆಯನ್ನೇ ನೆಚ್ಚಿಕೊಂಡು ತರಂಗಿಣಿ, ನೀನಾಸಂಗಳಲ್ಲಿ ಸುತ್ತಿದ ಮಂಡ್ಯ ರಮೇಶ್‌ ನಾಗಮಂಡಲ ಚಿತ್ರದ ಚಿಕ್ಕ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿ ಮೆಟ್ಟಿಲೇರಿದರು. ಕಾಮಿಡಿಯನ್‌ ಮುಖಭಾವ ಅದೇ ಲೇಬಲ್ಲನ್ನು ಹಚ್ಚಿತು. ಪ್ರೇಕ್ಷಕ ಕೂಡ ಒಪ್ಪಿಕೊಂಡ. ರಮೇಶ್‌ ತಮಾಷೆ ಕಿರುತೆರೆಗೂ ಕಾಲಿಟ್ಟಿತು. ಡಂ ಡಂ ಡಿಗ ಡಿಗದಲ್ಲಿ ರಾಜು ಅನಂತಸ್ವಾಮಿ ಜೊತೆಯಲ್ಲಿ ಇವತ್ತಿಗೂ ಕಚಗುಳಿಯಿಡುತ್ತಿರುವ ಮಂಡ್ಯ ರಮೇಶ್‌ ಅವರ ಕಾಲ್‌ಷೀಟ್‌ ಕೇಳಿದ್ದು ನಿರ್ದೇಶಕ ಪಿ.ಸಿ.ರಮೇಶ್‌. ದುಡ್ಡು ಹಾಕುತ್ತಿರುವುದು ಪುರುಷೋತ್ತಮ್‌. ಚಿತ್ರದ ಹೆಸರು ಕಲರ್ಸ್‌. ಜಾಹ್ನವಿ ಎಂಬಾಕೆ ನಾಯಕಿ.

ಉಮೇಶ್‌ ಶಿಷ್ಯ, ವಾಸು ಹಾಗೂ ಬಾಲಾಜಿ ಸಿಂಗ್‌ ಜೊತೆ ಕೆಲಸ ಮಾಡಿದ ಅನುಭವವಿರುವ ಪಿ.ಸಿ.ರಮೇಶ್‌ ಅವರಲ್ಲಿ ತುಂಬು ಉತ್ಸಾಹ. ಹೊಸಬರನ್ನು ಹಾಕಿಕೊಂಡರೆ ಚಿತ್ರ ಗ್ಯಾರಂಟಿ ಕ್ಲಿಕ್‌. ಕಾಮಿಡಿಯಾದರೆ ಡಬ್ಬಲ್‌ ಕ್ಲಿಕ್‌ ಅನ್ನೋದು ರಮೇಶ್‌ ಪಾಲಿಸಿ. ಆದರೆ ಮಂಡ್ಯ ರಮೇಶ್‌ ಆಗಲಿ, ಖುದ್ದು ಪಿ.ಸಿ.ರಮೇಶ್‌ ಆಗಲಿ ಹೊಸಬರಲ್ಲ. ಈ ಬಗ್ಗೆ ಕೇಳಿದರೆ, ಮೊದಲ ಯತ್ನವಲ್ಲವೇ ಅಂತ ನಗುತ್ತಾರೆ.

ಇದೇ ಸಿನಿಮಾದ ಇನ್ನೊಬ್ಬ ನಾಯಕ ನಿವಾಸ್‌. ನಿವಾಸ್‌ ಶಕ್ತಿಯ ನಾಯಕನಾದರೆ, ಮಂಡ್ಯ ರಮೇಶ್‌ ಯುಕ್ತಿಯ ನಾಯಕ. ಇಬ್ಬರೂ ಹುಡಿಗೀರ ಪಾಲಿಗೆ ಸೆಂಟರ್‌ ಆಫ್‌ ಅಟ್ರಾಕ್ಷನ್‌. ಅಂದಹಾಗೆ, ನಾಯಕಿ ಜಾಹ್ನವಿ ಹಾಗೂ ನಿವಾಸ್‌ ಇಬ್ಬರೂ ಹೈದರಾಬಾದಿನವರು.

ಹೀರೋ ಆಗಿ ಮೊದಲ ಬಾರಿಗೆ ಬಡ್ತಿ ಪಡೆದಿರುವ ರಮೇಶ್‌ ಮೊಗದಲ್ಲಿ ಆ ಖದರಿತ್ತು. ಬಿಗಿಯಾದ ಕೆಂಪನೆಯ ಟೀ ಶರ್ಟು ಹಾಗೂ ಸಮ್ಮರ್‌ ಕಟ್‌ ಮಂಡ್ಯ ರಮೇಶ್‌ ವಯಸ್ಸನ್ನು ಕಡಿಮೆ ಮಾಡಿತ್ತು !

English summary
Mandya Ramesh becomes hero

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada