»   » ಕಲಾಸಿಪಾಳ್ಯ-ಟ್ರಾಫಿಕ್ಕು ಹಾಗೂ ದರ್ಶನ್‌

ಕಲಾಸಿಪಾಳ್ಯ-ಟ್ರಾಫಿಕ್ಕು ಹಾಗೂ ದರ್ಶನ್‌

Posted By: Staff
Subscribe to Filmibeat Kannada
Kalasipalyam
'ಕಲಾಸಿಪಾಳ್ಯ" ಎಂದರೆ ಮೂಗು ಮುರಿಯುವವರೇ ಹೆಚ್ಚು . ಅನಿವಾರ್ಯವಾಗಿ ಕಲಾಸಿಪಾಳ್ಯದ ಓಣಿಗಳಲ್ಲಿ ಓಡಾಡುವವರು ಕೂಡ ಮಾರುಕಟ್ಟೆ ಪ್ರದೇಶಕ್ಕೆ ಶಾಪ ಹಾಕುತ್ತಲೇ ಇರುತ್ತಾರೆ. ಇನ್ನು ಅಪರೂಪಕ್ಕೊಮ್ಮೆ ಮಾರುಕಟ್ಟೆ ದರ್ಶನ ಮಾಡುವವರಂತೂ ಶಿಕ್ಷೆ ಅನುಭವಿಸುತ್ತಿರುವಂತೆ ಒತ್ತಡದಲ್ಲಿರುತ್ತಾರೆ.

'ಕಲಾಸಿಪಾಳ್ಯ" ಉರುಫ್‌ ಕೆಆರ್‌ ಮಾರುಕಟ್ಟೆ ಇರೋದೆ ಹೀಗೆ : ಅಲ್ಲಿ ಶ್ವಾಸಕೋಶ ತುಂಬುವಷ್ಟು ಧೂಳು, ಕಿವುಡನ ಮಾಡಯ್ಯ ತಂದೆ ಎಂದು ಬೇಡುವಷ್ಟು ಸದ್ದು , ನೊಣ ನುಸಿಗಳಿಗೆ ಅಪಾರ ಸ್ವಾತಂತ್ರ್ಯ ದೊರಕಿಸಿಕೊಟ್ಟಿರುವ ಕೊಚ್ಚೆ ಹಾಗೂ ಸಾವಿರ ಸಾವಿರ ಸಂಖ್ಯೆಯಲ್ಲಿ ಅನ್ನ ಕಂಡುಕೊಂಡ ಬದುಕುಗಳು- ಕಲಾಸಿಪಾಳ್ಯ ಎಂದರೆ ಇವೆಲ್ಲ ಚಿತ್ರಗಳು ಒಟ್ಟಿಗೇ ನೆನಪಾಗಬೇಕು ; ಒಂದನ್ನು ಬಿಟ್ಟು ಇನ್ನೊಂದಿಲ್ಲ .

ಟ್ರಾಫಿಕ್‌ ಕಿರಿಕಿರಿ 'ಕಲಾಸಿಪಾಳ್ಯ"ದಲ್ಲಿ ಸಾಮಾನ್ಯ ಎನ್ನುವಂಥ ಇನ್ನೊಂದು ಚಿತ್ರ. ಕಲಾಸಿಪಾಳ್ಯಕ್ಕೆ ಹೋದವರು ಅರ್ಜೆಂಟು ಎನ್ನುವಂತಿಲ್ಲ . ಅಲ್ಲಿ ಎಲ್ಲವೂ ಸಾವಧಾನ ! ಆದರೆ, ಕಳೆದ ಬುಧವಾರ ಹಾಗೂ ಗುರುವಾರ (ಜೂನ್‌ 23, 24) ಕಲಾಸಿಪಾಳ್ಯದ ಟ್ರಾಫಿಕ್‌ ಇನ್ನಷ್ಟು ನಿಧಾನ. ಕಾರಣ, 'ಕಲಾಸಿಪಾಳ್ಯ"! ಇದು ಸಿನಿ 'ಕಲಾಸಿಪಾಳ್ಯ"ವಯ್ಯ. ಕಲಾಸಿಪಾಳ್ಯದಲ್ಲಿ ನಡೆದ 'ಕಲಾಸಿಪಾಳ್ಯ" ಎನ್ನುವ ಚಿತ್ರದ ಚಿತ್ರೀಕರಣದ ಕಥೆಯಿದು.

ರಾಮು ನಿರ್ಮಾಣದ, ದರ್ಶನ ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರ ಕಲಾಸಿಪಾಳ್ಯ. ಹೆಸರೇ ಕಲಾಸಿಪಾಳ್ಯ ಎಂದಿರುವಾಗ ಈ ಚಿತ್ರದ ಚಿತ್ರೀಕರಣ ಕಲಾಸಿಪಾಳ್ಯದಲ್ಲಿ ನಡೆಯದಿದ್ದರೆ ಹೇಗೆ ? ಸರಿ, ಚಿತ್ರತಂಡ 'ಕಲಾಸಿಪಾಳ್ಯ"ಕ್ಕೆ ಬಂದಿಳಿಯಿತು. ಯಥಾಪ್ರಕಾರ ಅಭಿಮಾನಿಗಳೂ ಮುತ್ತಿಕೊಂಡರು. ಎಲ್ಲರಿಗೂ 'ದರ್ಶನ" ಪಡೆಯುವ ಆಸೆ. ಹಣ್ಣು-ತರಕಾರಿ-ಕಳ್ಳೆಕಾಯಿ-ಕ್ಯಾಸೆಟ್‌-ಇತ್ಯಾದಿ ಕೊಳ್ಳುವವರು ಮಾರುವವರು, ಸುಖಾಸುಮ್ಮನೇ ಮಾರುಕಟ್ಟೆ ಸುತ್ತುವವರು- ಇವರೆಲ್ಲ ನಾಟಕ ನಟ ದರ್ಶನ್‌ಗೆ ಮುಸುರಿಕೊಂಡರು. ತಾಸುಗಟ್ಟಲೆ ವ್ಯವಧಾನದಿಂದ ನಿಂತು ಚಿತ್ರೀಕರಣವನ್ನು ಕಣ್ಣಲ್ಲಿ ತುಂಬಿಕೊಂಡರು. ಪರಿಣಾಮವಾಗಿ ಟ್ರಾಫಿಕ್‌ ಜಾಮ್‌!

ಸಾವಿರಾರು ಜನರನ್ನು ಹದ್ದುಬಸ್ತಿನಲ್ಲಿಡುವಷ್ಟರಲ್ಲಿ ಸಾಕಪ್ಪಾ ಸಾಕಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯಾಬ್ಬರು ನಿಟ್ಟುಸಿರುಬಿಟ್ಟರು. ಶೂಟಿಂಗ್‌ ಸಮಾಚಾರ ತಿಳಿಯದೆ ಮಾರ್ಕೆಟ್‌ ರಸ್ತೆಗೆ ಬಂದ ವಾಹನ ಸವಾರರು ಒಂದೆರಡು ತಾಸು ಚಕ್ರವ್ಯೂಹದಲ್ಲಿ ಸಿಕ್ಕಿ ನಿಟ್ಟುಸಿರಿಟ್ಟರು.ಹೇಗಿದೆ ನೋಡಿ ಚಿತ್ರ ಮಹಾತ್ಮೆ ! 'ಕಲಾಸಿಪಾಳ್ಯ" ಮಹಾತ್ಮೆ !

English summary
Police and the motorists are having a tough time at Krishnaraja Market following the shooting of a Kannada film, 'Kalasipalyam'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada